ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಯಡಿ 500 ಕೋಟಿ ಬಾರಿ ಮಹಿಳಾ ಪ್ರಯಾಣಿಕರು ಉಚಿತ ಪ್ರಯಾಣ ಮಾಡಿರುವ ಸಂಭ್ರಮದ ಅಂಗವಾಗಿ ಸಾಂಕೇತಿಕವಾಗಿ 500 ಕೋಟಿ ಸಾಧನೆಯ ಉಚಿತ ಟಿಕೇಟನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ವಿತರಿಸಿದರು.
ನಾಡಿನ ಹೆಣ್ಣುಮಕ್ಕಳು ಉದ್ಯೋಗ, ಶಿಕ್ಷಣ, ವೈದ್ಯಕೀಯ ಚಿಕಿತ್ಸೆ ಮುಂತಾದ ಉದ್ದೇಶಗಳಿಗೆ ಕುಟುಂಬದ ಯಜಮಾನನ ಮೇಲೆ ಅವಲಂಬಿತರಾಗದೆ ಸ್ವತಂತ್ರ ನಿರ್ಣಯ ಕೈಗೊಂಡು ಸ್ವಾವಲಂಬಿ ಬದುಕಿನೆಡೆಗೆ ಪಯಣಿಸಬೇಕು ಎಂಬ ಉದ್ದೇಶದಿಂದ ಈ ಯೋಜನೆಯನ್ನು ಜಾರಿ ಮಾಡಲಾಗಿದ್ದು, ಇದು ಅತ್ಯಂತ ಯಶಸ್ವಿಯಾಗಿ ಮುನ್ನಡೆಯುತ್ತಿರುವ ಬಗ್ಗೆ ಹೆಮ್ಮೆಯಿದೆ ಎಂದು ಸಿಎಂ ತಿಳಿಸಿದರು.
ಶಕ್ತಿ ರಾಜ್ಯದ ಲಕ್ಷಾಂತರ ಮಹಿಳೆಯರ ಕನಸುಗಳನ್ನು ನನಸಾಗಿಸಿ, ನಿಜಾರ್ಥದಲ್ಲಿ ಅವರ ಬದುಕಿಗೆ ಶಕ್ತಿ ತುಂಬಿದೆ. ನಾಡಿನ ಮಹಿಳೆಯರನ್ನು ಸ್ವಾವಲಂಬಿಗಳಾಗಿಸುವ ಉದ್ದೇಶದಿಂದ ಜಾರಿಗೊಳಿಸಿದ ಶಕ್ತಿ ಯೋಜನೆಯು ನಿರೀಕ್ಷೆಗೂ ಮೀರಿ ಅರ್ಹರನ್ನು ತಲುಪುತ್ತಿರುವುದು ಗ್ಯಾರಂಟಿ ಯೋಜನೆಯೊಂದರ ಯಶಸ್ಸಿಗೆ ಹಿಡಿದ ಕೈಗನ್ನಡಿ.
‘ಶಕ್ತಿʼಜಾರಿಯಾದ ನಂತರದಿಂದ ಈವರೆಗೆ 500 ಕೋಟಿ ಬಾರಿ ಮಹಿಳೆಯರು ಉಚಿತವಾಗಿ ಸಾರಿಗೆ ಬಸ್‌ಗಳಲ್ಲಿ ಪ್ರಯಾಣ ಮಾಡಿದ್ದು, ಈವರೆಗಿನ ಒಟ್ಟು ಟಿಕೆಟ್ ಮೌಲ್ಯ 12 ಸಾವಿರ ಕೋಟಿ ರೂ. ದಾಟಿದೆ ಎಂದು ಸಿಎಂ ಅವರು ತಿಳಿಸಿದರು.
ಶಾಲಾ ಕಾಲೇಜಿಗೆ ಹೋಗುವ ಹೆಣ್ಣುಮಕ್ಕಳು, ಕೆಲಸಕ್ಕೆ ತೆರಳುವ ಮಹಿಳೆಯರು, ದೇವಸ್ಥಾನ ಸೇರಿದಂತೆ ಮುಂತಾದ ಪ್ರವಾಸಿ ತಾಣಗಳಿಗೆ ತೆರಳುವ ತಾಯಂದಿರ ಮೊಗದಲ್ಲಿ ನೆಮ್ಮದಿಯ ಮಂದಹಾಸ ಮೂಡಿದ್ದು, ನಮ್ಮ ಯೋಜನೆಯ ಉದ್ದೇಶ ಈಡೇರುತ್ತಿರುವುದರ ಬಗ್ಗೆ ಸಂತಸವಾಗುತ್ತಿದೆ. ಕರ್ನಾಟಕದಲ್ಲಿ ಮಹಿಳಾ ಸಬಲೀಕರಣ ಎನ್ನುವುದು ಬರೀ ಬಾಯಿಮಾತಾಗದೇ, ನಿಜಾರ್ಥದಲ್ಲಿ ಅನುಷ್ಠಾನಗೊಂಡಿರುವುದು ನನ್ನಲ್ಲಿ ಸಾರ್ಥಕ್ಯ ಭಾವನೆ ಮೂಡಿಸಿದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.