ಕಾಫಿ ಘಮಲಿನ ಕಲರವ 7 ಬೀನ್ ಟೀಮ್ ವೆಬ್‌ಸೈಟ್ ಅನಾವರಣ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ಅರಮನೆ ಆವರಣದಲ್ಲಿ ನಡೆಯುತ್ತಿರುವ ಮೂರು ದಿನಗಳ ಅಂತಾರಾಷ್ಟ್ರೀಯ ಕಾಫಿ ಮೇಳದಲ್ಲಿ 7 ಬೀನ್ ಟೀಮ್ ಅಭಿವೃದ್ಧಿಪಡಿಸಿರುವ ವೆಬ್‌ಸೈಟ್‌ನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಅನಾವರಣ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬ್ರೆಜಿಲ್ ಮತ್ತು ವಿಯೆಟ್ನಾಂಗಿಂತಲೂ ನಮ್ಮ ರಾಜ್ಯದ ಮಲೆನಾಡಿನ ಕಾಫಿ ಸೊಗಡು ಬೇರೆಯೇ ಇದೆ. ಇದನ್ನು ಸರಿಯಾದ ರೀತಿಯಲ್ಲಿ ಮಾರುಕಟ್ಟೆ ಮಾಡುವ ವ್ಯವಸ್ಥೆ ಸಂಘಟಿತವಾಗಿ ನಡೆಯಬೇಕಾಗಿದೆ ಎಂದರು.

ಕಾಫಿ ಕೃಷಿ ಮತ್ತು ಅದರ ಇಳುವರಿ ಉತ್ತಮಪಡಿಸುವ ನಿಟ್ಟಿನಲ್ಲಿ 7ಬೀನ್ ಟೀಮ್ ಮಾಡುತ್ತಿರುವ ಪ್ರಯತ್ನ ಶ್ಲಾಘನೀಯ. ಪ್ರಗತಿದಾಯಕ ಚಟುವಟಿಕೆಗಳ ಕಡೆಗೆ ಎಲ್ಲಾ ಬೆಳೆಗಾರರು ಗಮನ ನೀಡಿದರೆ ಗುರಿ ಸಾಧನೆ ಮಾಡಲು ಸಾಧ್ಯವಿದೆ ಎಂದರು.

ಪ್ರತಿ ವರ್ಷವೂ ಕಾಫಿ ಮೇಳವನ್ನು ನಡೆಸುವ ಮೂಲಕ ಕಾಫಿಯ ವಿಭಿನ್ನ ಬಳಕೆಯ ಬಗ್ಗೆ ಮತ್ತು ಉಪಕರಣಗಳ ಬಳಕೆಯ ಬಗ್ಗೆ ಮಾಹಿತಿ ಜ್ಞಾನವನ್ನು ನೀಡುವಂತಾದರೆ, ಅದು ಮಾರುಕಟ್ಟೆ ವ್ಯಾಪ್ತಿಯನ್ನು ವಿಸ್ತಾರ ಮಾಡಲು ಸಾಧ್ಯವಾಗುತ್ತದೆ. ಕಾಫಿ ಬಳಕೆದಾರರ ಸಮೂಹವೂ ವೃದ್ಧಿಯಾಗಲಿದೆ ಎಂದು ತಗಡೂರು ಹೇಳಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಡಾ.ಎನ್.ಕೆ.ಪ್ರದೀಪ್, ಮಣ್ಣು ಪರೀಕ್ಷೆಯಿಂದ ಹಿಡಿದು, ಹಲವು ಹಂತದ ತರಬೇತಿಯನ್ನು ನೀಡುವ ವ್ಯವಸ್ಥೆ ಮಾಡಲಾಗಿದೆ. ರಾಜ್ಯದಲ್ಲಿ ಸದ್ಯ 3.50 ಲಕ್ಷ ಟನ್ ಇಳುವರಿಯನ್ನು 7 ಲಕ್ಷ ಟನ್‌ಗೆ ಹೆಚ್ಚಳ ಮಾಡಲು ಉದ್ದೇಶಿಸಿ, ನಮ್ಮ ತಂಡ ಕೆಲಸ ಮಾಡುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ 7ಬೀನ್ ಗೈಡ್ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಐಐಸಿಎ ಛೇರ್ಮನ್ ಡಿ.ಎಂ.ಪೂಣೇಶ್, 7ಬೀನ್ ಟೀಮ್ ಛೇರ್ಮನ್ ಎಚ್.ಎಸ್.ಧರ್ಮರಾಜ್, ಉಪಾಧ್ಯಕ್ಷ ಯು.ಎಂ.ತೀರ್ಥಮಲ್ಲೇಶ್, ಕಾರ್ಯದರ್ಶಿ ಮುರುಳೀಧರ ಬಕ್ಕರವಳ್ಳಿ, ಪದಾಧಿಕಾರಿಗಳಾದ ಸಿ.ಎಸ್.ಮಲ್ಲೇಶ್, ಎಚ್.ಎಂ.ಉದಯ್, ಎನ್.ಬಿ.ಉದಯಕುಮಾರ್, ಕೆ.ಎನ್.ಸುಬ್ರಹ್ಮಣ್ಯ ಮತ್ತಿತರರು ಹಾಜರಿದ್ದರು.

 

 

Share This Article
error: Content is protected !!
";