ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನಾಗರಿಕರು ನೆಮ್ಮದಿಂದ ಜೀವಿಸಲು ಪೊಲೀಸರು ತಮ್ಮ ಪ್ರಾಣವನ್ನು ಪಣಕಿಟ್ಟು ಕರ್ತವ್ಯ ನಿರ್ವಹಿಸುತ್ತಾರೆ. ಇಂತಹ ಪೊಲೀಸರ ತ್ಯಾಗ ಹಾಗೂ ಬಲಿದಾನ ಸದಾಕಾಲ ಸ್ಮರಣೀಯವಾಗಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.
ನಗರದ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಆವರಣದಲ್ಲಿ ಸೋಮವಾರ ಜಿಲ್ಲಾ ಪೊಲೀಸ್ ಇಲಾಖೆಯಿಂದ ಆಯೋಜಿಸಲಾದ ಪೊಲೀಸ್ ಹುತಾತ್ಮರ ದಿನಾಚರಣೆಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಹುತಾತ್ಮರ ಸ್ಮಾರಕಕ್ಕೆ ಗೌರವ ಸಲ್ಲಿಸಿ ಅವರು ಮಾತನಾಡಿದರು.
1959 ಅಕ್ಟೋಬರ್-21 ರಂದು ಲಡಾಕ್‍ನ ಇಂಡೋ ಟಿಬೇಟಿಯನ್ ಗಡಿಯಲ್ಲಿ ಗಸ್ತು ತಿರುಗುತ್ತದ್ದ ಸಿಆರ್ ಪಿಎಫ್ ಪಡೆಯ ಮೇಲೆ ಚೈನಾ ಸೇನೆ ಆಕ್ರಮಣ ನಡೆಸಿತು.
ಸಮುದ್ರ ಮಟ್ಟದಿಂದ ಸುಮಾರು 18 ಸಾವಿರ ಅಡಿ ಎತ್ತರದಲ್ಲಿ ಜರುಗಿದ ಈ ಯದ್ದದಲ್ಲಿ, ತೀವ್ರ ಚಳಿ ಹಾಗೂ ಕಠಿಣ ಪರಿಸ್ಥಿತಿಯಲ್ಲಿ ಧೈರ್ಯದಿಂದ ಹೋರಾಟ ನಡೆಸಿದ ಸಿಆರ್ ಪಿಎಫ್ ಪಡೆಯ10 ಜನ ಪೊಲೀಸರು ಹುತಾತ್ಮರಾದರು. ಇವರ ಸ್ಮರಣಾರ್ಥ ಪ್ರತಿ ವರ್ಷ ಹುತಾತ್ಮ ದಿನಾಚರಣೆ ಆಚರಿಸಲಾಗುತ್ತಿದೆ. ಇದುವರೆಗೂ ದೇಶದ್ಯಾಂತ 40 ಸಾವಿರಕ್ಕೂ ಹೆಚ್ಚು ಪೊಲೀಸರು ಹುತಾತ್ಮರಾಗಿದ್ದಾರೆ ಎಂದು ತಿಳಿಸಿದರು.
ಬೇಂದ್ರೆಯವರ ಕವನದ ಸಾಲುಗಳಂತೆ “ಎನ್ನ ಪಾಡೆನಗಿರಲಿ, ಅದರ ಹಾಡನ್ನಷ್ಟೆ ನೀಡುವೆನು ರಸಿಕ ನಿನಗೆ; ಕಲ್ಲುಸಕ್ಕರೆಯಂಥ ನಿನ್ನೆದೆಯು ಕರಗಿದರೆ ಆ ಸವಿಯ ಹಣಿಸು ನನಗೆ” ಎನುವಂತೆ ಎಂತಹದೇ ಸಂದರ್ಭದಲ್ಲಿ ಪೊಲೀಸರು ಅವರ ಎಲ್ಲಾ ಕಷ್ಟ ಕಾರ್ಪಣ್ಯಗಳನ್ನು ಮರೆತು ಜನರ ರಕ್ಷಣೆ ಮಾಡುತ್ತಾರೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಅವರು ದೇಶದಾದ್ಯಂತ ಹುತಾತ್ಮರಾದ 216 ಪೊಲೀಸ್ ಹಾಗೂ ಸಿಬ್ಬಂದಿಗಳ ಹೆಸರುಗಳನ್ನು ಈ ಸಂದರ್ಭದಲ್ಲಿ ವಾಚಿಸಿದರು.
ಇದಕ್ಕೂ ಮುನ್ನ ಮುಖ್ಯ ಅತಿಥಿಗಳು ಸೇರಿದಂತೆ ಇತರೆ ಗಣ್ಯರು ಹುತಾತ್ಮರ ಸ್ಮಾರಕಕ್ಕೆ ಹೂ ಗೂಚ್ಛ ಇರಿಸಿ ಗೌರವ ಸಮರ್ಪಿಸಿದರು. ಹುತ್ಮಾತರ ಗೌರವಾರ್ಥ 3 ಸುತ್ತಿನ ವಾಲಿ ಫೈರಿಂಗ್ ಮಾಡುವುದರ ಜೊತೆಗೆ ಪೊಲೀಸ್ ವಾದ್ಯ ವೃಂದದಿಂದ ರಾಷ್ಟ್ರಗೀತೆ ನುಡಿಸಲಾಯಿತು. 2 ನಿಮಿಷಗಳ ಮೌನಾಚರಣೆ ಮಾಡಲಾಯಿತು.
2023ರ ಸೆಪ್ಟೆಂಬರ್-01 ರಿಂದ 2024ರ ಆಗಸ್ಟ್-30 ರವರೆಗೆ ದೇಶಾದ್ಯಂತ 216 ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಹುತಾತ್ಮರಾಗಿದ್ದಾರೆ.
ಈ ಅವಧಿಯಲ್ಲಿ ಕರ್ನಾಟಕದ 5 ಪೊಲೀಸ್ ಸಿಬ್ಬಂದಿ ಕರ್ತವ್ಯದ ವೇಳೆ ಹುತಾತ್ಮರಾಗಿದ್ದಾರೆ. ಕಾರ್ಯಕ್ರಮದಲ್ಲಿ ಕರ್ತವ್ಯ ನಿರತ ಪೊಲೀಸ್ ಅಧಿಕಾರಿಗಳು, ನಿವೃತ್ತ ಪೊಲೀಸ್ ಸಿಬ್ಬಂದಿ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.