ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಚಳ್ಳಕೆರೆ ನಗರದ ಅಭಿವೃದ್ದಿಯೂ ಸೇರಿದಂತೆ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಯಾರೂ ಅಡ್ಡಿಪಡಿಸದಂತೆ ಎಚ್ಚರಿಕೆ ವಹಿಸಬೇಕು. ಸರ್ಕಾರದ ಕೆಲಸಕ್ಕೆ ದುರುದ್ದೇಶದಿಂದ ಅಡ್ಡಿಪಡಿಸಲು ಯತ್ನಿಸಿದವರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆಯನ್ನು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ನೀಡಿದ್ಧಾರೆ.
ಅವರು, ಶುಕ್ರವಾರ ಬೆಳ್ಳಂಬೆಳಗ್ಗೆ ಬಳ್ಳಾರಿ ರಸ್ತೆಯ ಅಭಿಷೇಕ್ ನಗರಕ್ಕೆ ಭೇಟಿ ನೀಡಿ ರಾಷ್ಟ್ರೀಯ ಹೆದ್ದಾರಿಯಿಂದ ಅಭಿಷೇಕ್ ನಗರಕ್ಕೆ ಹೋಗುವ ದಾರಿಯಲ್ಲಿ ಸರ್ಕಾರಿ ಗೋಮಾಳವಿದ್ದು
ಖಾಸಗಿ ವ್ಯಕ್ತಿಯೊಬ್ಬ ಗೋಮಾಳವನ್ನು ಅಕ್ರಮಿಸಿಕೊಂಡು ರಸ್ತೆ ಬಿಡಲು ತಕರಾರುವೆತ್ತಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿ ತಹಶೀಲ್ದಾರ್, ಪೌರಾಯುಕ್ತರ ಮತ್ತು ಸರ್ವೆ ಇಲಾಖೆ ಅಧಿಕಾರಿಗಳಿಗೆ ನಿರ್ದೇಶಕ ನೀಡಿ ಕೂಡಲೇ ಇಂದೇ ಮಾರ್ಕ್ ಮಾಡಿ ರಸ್ತೆ ನಿರ್ಮಿಸುವ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದರು. ಅಡ್ಡಿಪಡಿಸಲು ಯತ್ನಿಸಿದರೆ ಅಂತಹವರ ವಿರುದ್ದ ಪ್ರಕರಣ ದಾಖಲಿಸಿ ಎಂದು ಸೂಚನೆ ನೀಡಿದರು.
ತಹಶೀಲ್ದಾರ್ ರೇಹಾನ್ ಪಾಷ ಮಾತನಾಡಿ, ಕಳೆದ ಮೂರು ದಿನಗಳ ಹಿಂದೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಅವರಿಗೆ ಸೂಚನೆ ನೀಡಲಾಯಿತು. ಆದರೂ ಸಹ ಅವರು ರಸ್ತೆ ಬಿಟ್ಟುಕೊಡಲು ಸಿದ್ದರಿಲ್ಲ. ಆದ್ದರಿಂದ ಕೂಡಲೇ ಸಾರ್ವಜನಿಕರ ಹಿತದೃಷ್ಠಿಯಿಂದ ರಸ್ತೆ ನಿರ್ಮಿಸಲಾಗುವುದು. ಈ ಬಗ್ಗೆ ಈಗಾಗಲೇ ಶಾಸಕ ಟಿ.ರಘುಮೂರ್ತಿ ಸಹ ಸೂಚನೆ ನೀಡಿದ್ದಾರೆ. ಸರ್ಕಾರಿ ಗೋಮಾಳ ಕಬಳಿಕೆಯಿಂದ ನಿವಾಸಿಗಳು ಸುತ್ತಿ ಬಳಿಸಿ ಅಭಿಷೇಕ್ ನಗರಕ್ಕೆ ಹೋಗಬೇಕಿದೆ. ನೇರ ರಸ್ತೆಯಾದರೆ ಎಲ್ಲರಿಗೂ ಅನುಕೂಲವಾಗಲಿದೆ ಎಂದರು.
ನಗರಸಭೆ ಅಧ್ಯಕ್ಷೆ ಜೈತುಂಬಿ, ಪೌರಾಯುಕ್ತ ಎಚ್.ಜಿ.ಜಗರೆಡ್ಡಿ, ಸಹಾಯಕ ಇಂಜಿನಿಯರ್ ಲೋಕೇಶ್, ಸರ್ವೆ ಅಧಿಕಾರಿ ಪ್ರಸನ್ನಕುಮಾರ್ ಮುಂತಾದವರು ಉಪಸ್ಥಿತರಿದ್ದರು.