ಚಂದ್ರವಳ್ಳಿ ನ್ಯೂಸ್, ತುಮಕೂರು:
ತ್ರಿವಿಧ ದಾಸೋಹಿ, ನಡೆದಾಡುವ ದೇವರು ಸಿದ್ಧಗಂಗಾ ಮಠದ ಶಿವೈಕ್ಯ ಡಾ ಶಿವಕುಮಾರ ಸ್ವಾಮೀಜಿಗಳು ಲಿಂಗೈಕ್ಯರಾಗಿ ಜನವರಿ-21ಕ್ಕೆ ಏಳು ವರ್ಷ ಪೂರ್ಣಗೊಳ್ಳಲಿದೆ.
ಈ ಹಿನ್ನೆಲೆ ತುಮಕೂರಿನ ಸಿದ್ದಗಂಗಾ ಮಠದಲ್ಲಿ ಡಾ. ಶಿವಕುಮಾರ ಸ್ವಾಮೀಜಿಗಳ 7ನೇ ವರ್ಷದ ಪುಣ್ಯ ಸಂಸ್ಮರಣೋತ್ಸವ ನಡೆಯಲಿದೆ. ಉಪರಾಷ್ಟ್ರಪತಿ ಸಿ.ಪಿ ರಾಧಾಕೃಷ್ಣನ್ ಅವರು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾಗಿಯಾಗುತ್ತಿದ್ದಾರೆ. ಆ ಮೂಲಕ ಕರ್ನಾಟಕಕ್ಕೆ ಮೂರನೇ ಬಾರಿಗೆ ಆಗಮಿಸುತ್ತಿದ್ದಾರೆ. ಹೀಗಾಗಿ ಸಿದ್ಧಗಂಗಾ ಮಠದಲ್ಲಿ ಪೊಲೀಸ್ ಬಿಗಿಭದ್ರತೆ ನಿಯೋಜನೆ ಮಾಡಲಾಗಿದೆ.
ಉಪರಾಷ್ಟ್ರಪತಿ ಅವರ ವೇಳಾಪಟ್ಟಿ-
ತುಮಕೂರು ವಿವಿ ಹೆಲಿಪ್ಯಾಡ್ನಿಂದ ನೇರವಾಗಿ ಉಪರಾಷ್ಟ್ರಪತಿ ಸಿ.ಪಿ ರಾಧಾಕೃಷ್ಣನ್ ಅವರು ಸಿದ್ಧಗಂಗಾ ಮಠಕ್ಕೆ ಆಗಮಿಸುತ್ತಾರೆ. ಶ್ರೀಗಳ ಗದ್ದುಗೆಗೆ ಭೇಟಿ ನೀಡಿ ಪೂಜೆ ಸಲ್ಲಿಸಿ, ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಕಾರ್ಯಕ್ರಮ ಮುಗಿದ ಬಳಿಕ ಹೆಲಿಪ್ಯಾಡ್ನಿಂದ ನೇರವಾಗಿ ಬೆಂಗಳೂರಿಗೆ ತೆರಳಿದ್ದಾರೆ ಎಂದು ಅವರ ಪ್ರವಾಸದ ಟಿಪಿಯಲ್ಲಿ ವಿವರಿಸಲಾಗಿದೆ.
ಪೊಲೀಸ್ ಭದ್ರತೆ-ಎಸ್ಪಿ ಅಶೋಕ್
ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ ಅಶೋಕ್ ಮಾಧ್ಯಮಗಳೊಂದಿಗೆ ಮಾತನಾಡಿ, ಉಪರಾಷ್ಟ್ರಪತಿಗಳ ಆಗಮನ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಭದ್ರತೆ ವ್ಯವಸ್ಥೆ ಮಾಡಲಾಗಿದೆ. 7ನೇ ವರ್ಷದ ಪುಣ್ಯ ಸಂಸ್ಮರಣೋತ್ಸವ ಕಾರ್ಯಕ್ರಮಕ್ಕೆ ಉಪರಾಷ್ಟ್ರಪತಿಗಳು ಆಗಮಿಸುತ್ತಿದ್ದಾರೆ. ಸಿದ್ಧಗಂಗಾ ಮಠದ ಆವರಣದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸುಮಾರು 10 ರಿಂದ 12 ಸಾವಿರ ಜನರು ಸೇರುವ ನಿರೀಕ್ಷೆ ಇದೆ. ಕಾರ್ಯಕ್ರಮ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.
1 ಸಾವಿರ ಪೊಲೀಸರ ನಿಯೋಜನೆ-
ಶ್ರೀಮಠದಲ್ಲಿ ಒಂದೇ ಕಾರ್ಯಕ್ರಮ ಇರುವುದು. ಈ ಕಾರ್ಯಕ್ರಮಕ್ಕೆ ಬೇಕಾದ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. 1 ಸಾವಿರ ಪೊಲೀಸರನ್ನ ಭದ್ರತೆಗೆ ನಿಯೋಜನೆ ಮಾಡಲಾಗಿದೆ. 3 ಕೆಎಸ್ಆರ್ಪಿ ತುಕಡಿ, ಡಿಆರ್ ಸಿಬ್ಬಂದಿ, ಗುಪ್ತಚರ ಇಲಾಖೆಯ ಸಿಬ್ಬಂದಿ ಸೇರಿದಂತೆ 1 ಸಾವಿರ ಪೊಲೀಸರನ್ನ ಭದ್ರತೆಗೆ ನಿಯೋಜನೆ ಮಾಡಲಾಗಿದೆ.
ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ ಎಂದು ಎಸ್ಪಿ ಅವರು ಹೇಳಿದ್ದಾರೆ.
ಉಪರಾಷ್ಟ್ರಪತಿ ಸಿ.ಪಿ ರಾಧಾಕೃಷ್ಣನ್ ಅವರೊಂದಿಗೆ ರಾಜ್ಯಪಾಲರು, ಕೇಂದ್ರ ಸಚಿವ ವಿ. ಸೋಮಣ್ಣ, ಡಾ. ಜಿ. ಪರಮೇಶ್ವರ್, ಸಂಸದರು, ಶಾಸಕರು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ತುಮಕೂರು ಎಸ್ಪಿ ಅಶೋಕ್ ಕೆವಿ ಹೇಳಿದರು.

