ಸ್ಥಳೀಯ ಸಂಸ್ಥೆಗಳ ಅನುದಾನ ಹೆಚ್ಚಳಕ್ಕೆ ಶಿಫಾರಸ್ಸು- ಆಯೋಗದ ಅಧ್ಯಕ್ಷ ಡಾ.ಸಿ.ನಾರಾಯಣಸ್ವಾಮಿ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನಗರಸಭೆ ಸೇರಿದಂತೆ ಇತರೆ ಸ್ಥಳೀಯ ಸಂಸ್ಥೆಗಳ ಆರ್ಥಿಕ ಸ್ಥಿತಿಗತಿಗಳನ್ನು ಅವಲೋಕಿಸಿ, ಸ್ಥಳೀಯ ಸಂಸ್ಥೆಗಳ ಅನುದಾನ ಹೆಚ್ಚಳಕ್ಕೆ ಶಿಫಾರಸ್ಸು ಮಾಡುವುದಾಗಿ 5ನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ ಡಾ.ಸಿ.ನಾರಾಯಣಸ್ವಾಮಿ ಹೇಳಿದರು.
ನಗರಸಭೆಯ ಕೌನ್ಸಿಲ್ ಸಭಾಂಗಣದಲ್ಲಿ ಮಂಗಳವಾರ ಚಿತ್ರದುರ್ಗ ನಗರಸಭೆಯ ಚುನಾಯಿತ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜೊತೆ ಸಮಾಲೋಚನಾ ಸಭೆ ನಡೆಸಿ ಅವರು ಮಾತನಾಡಿದರು.

ಸಂವಿಧಾನದ 75ನೇ ತಿದ್ದುಪಡಿ ನಂತರ, ಸಂವಿಧಾನ 243 () ವಿಧಿ ಅನುಸಾರ 5 ವರ್ಷಗಳ ಅವಧಿಗೆ ರಾಜ್ಯಪಾಲರು ರಾಜ್ಯ ಹಣಕಾಸು ಆಯೋಗವನ್ನು ರಚಿಸುತ್ತಾರೆ. ಆಯೋಗವು ರಾಜ್ಯ ಸರ್ಕಾರ ತೆರಿಗೆ, ಸುಂಕ ಹಾಗೂ ಶುಲ್ಕ ಸಂಗ್ರಹದ ಮೂಲಕ ಗಳಿಸುವ ಆದಾಯವನ್ನು ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಪಂಚಾಯತ್ ರಾಜ್ ಸಂಸ್ಥೆಗಳ ನಡುವೆ ಸಮರ್ಪಕವಾಗಿ ಹಂಚಿಕೆ ಮಾಡುವ ಕುರಿತು ಶಿಫಾರಸ್ಸು ನೀಡುತ್ತದೆ. ಮಹಾನಗರ ಪಾಲಿಕೆ, ನಗರಸಭೆ ಸೇರಿದಂತೆ ಇತರೆ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯಿತಿಗಳಿಗೆ ಮಾತ್ರ ತೆರಿಗೆ ಹಾಗೂ ಸುಂಕ ವಿಧಿಸುವ ಹಕ್ಕಿದೆ. ಸ್ಥಳೀಯ ಸಂಸ್ಥೆಗಳು ಆರ್ಥಿಕವಾಗಿ ಸ್ವಾವಲಂಬಿಯಾದರೆ ಮಾತ್ರ ಪ್ರಗತಿ ಸಾಧ್ಯವಾಗುತ್ತದೆ ಎಂದು ಅಧ್ಯಕ್ಷ ಡಾ.ಸಿ.ನಾರಾಯಣಸ್ವಾಮಿ ತಿಳಿಸಿದರು.

ಮಾರ್ಗಸೂಚಿ ಪರಿಷ್ಕರಣೆಗೆ ಶಿಫಾರಸ್ಸು:
15
ನೇ ಕೇಂದ್ರ ಹಣಕಾಸು ಆಯೋಗ ಕೇಂದ್ರ ಸರ್ಕಾರದ ಅನುದಾನ ಹಂಚಿಕೆಗೆ ಅಳವಡಿಸಿಕೊಂಡಿದ್ದ ಮಾರ್ಗಸೂಚಿಗಳನ್ನು ಪರಿಷ್ಕರಣೆ ಮಾಡುವಂತೆ, 16ನೇ ಕೇಂದ್ರ ಹಣಕಾಸು ಆಯೋಗದ ಅಧ್ಯಕ್ಷರಿಗೆ ಶಿಫಾರಸ್ಸು ಮಾಡುವುದಾಗಿ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ ಡಾ.ಸಿ.ನಾರಾಯಣಸ್ವಾಮಿ ಸಂದರ್ಭದಲ್ಲಿ ಹೇಳಿದರು.

ಜನಸಂಖ್ಯೆ ಹಾಗೂ ಭೌಗೋಳಿಕ ಪ್ರದೇಶ ವ್ಯಾಪ್ತಿಯನ್ನು ಪ್ರಮುಖ ಮಾನದಂಡವಾಗಿ ಅನುಸರಿಸಿ 15ನೇ ಕೇಂದ್ರ ಹಣಕಾಸು ಆಯೋಗ, ಕೇಂದ್ರ ಸರ್ಕಾರದ ಅನುದಾನ ಹಂಚಿಕೆಗೆ ಶಿಫಾರಸ್ಸು ಮಾಡಿದೆ. ಇದರಿಂದಾಗಿ ದಕ್ಷಿಣ ಭಾರತದ ರಾಜ್ಯಗಳಿಗೆ ಕಡಿಮೆ ಅನುದಾನ ಲಭಿಸಿದೆ. ಕೇಂದ್ರ ಸರ್ಕಾರವೇ ರೂಪಿಸಿದ ಜನಸಂಖ್ಯೆ ನಿಯಂತ್ರಣ ಕಾರ್ಯಕ್ರಮಗಳನ್ನು ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲಾಗಿದೆ. ಇದರಿಂದಾಗಿ ಜನಸಂಖ್ಯೆ ಬೆಳವಣಿಗೆ ದರ ಉತ್ತರದ ರಾಜ್ಯಗಳಿಗೆ ಹೊಲಿಸಿದರೆ ರಾಜ್ಯದಲ್ಲಿ ನಿಯಂತ್ರಣದಲ್ಲಿದೆ. ಇನ್ನು ಭೌಗೋಳಿಕವಾಗಿ ವಿಸ್ತೀರ್ಣದಲ್ಲಿ ಉತ್ತರದ ರಾಜ್ಯಗಳಿಗೆ ಹೊಲಿಸಿದರೆ ರಾಜ್ಯಕ್ಕೆ ಕಡಿಮೆ ಅನುದಾನ ಲಭಿಸಿದೆ. ಇದಕ್ಕೆ ವ್ಯತಿರಿಕ್ತವಾಗಿ ಕೇಂದ್ರ ಸರ್ಕಾರಕ್ಕೆ ರಾಜ್ಯದಿಂದ ಹೆಚ್ಚಿನ ತೆರಿಗೆ ಹಾಗೂ ಸುಂಕಗಳು ಸಲ್ಲಿಕೆಯಾಗುತ್ತಿವೆ. ಅನುದಾನ ಹಂಚಿಕೆಯಲ್ಲಿನ ತಾರತಮ್ಯ ಸರಿಪಡಿಸಿ, ರಾಜ್ಯ ತೆರಿಗೆ ಸಂಗ್ರಹದಲ್ಲಿನ ಪಾಲಿಗೆ ಅನುಗುಣವಾಗಿ ಅನುದಾನ ಹಂಚಿಕೆ ಮಾರ್ಗಸೂಚಿಗಳನ್ನು ರಚಿಸಲು ಕೇಂದ್ರ ಹಣಕಾಸು ಆಯೋಗಕ್ಕೆ ಮನವಿ ಮಾಡುವುದಾಗಿ ಹೇಳಿದರು.

ಆಯೋಗದಿಂದ 2024 ಫೆಬ್ರವರಿಯಲ್ಲಿ ರಾಜ್ಯ ಸರ್ಕಾರಕ್ಕೆ ಮಧ್ಯಂತರ ವರದಿಗಳ ಶಿಫಾರಸ್ಸು ಸಲ್ಲಿಸಿದ್ದು, ಇದು ಉಭಯ ಸದನಗಳಲ್ಲಿ ಚರ್ಚೆಯಾಗಿದೆ. ವರದಿಯನ್ನು ಕೇಂದ್ರ ಸರ್ಕಾರಕ್ಕೂ ಕಳುಹಿಸಿಕೊಡಲಾಗಿದೆ. ಕೇಂದ್ರ ಹಣಕಾಸು ಆಯೋಗದ ನಿಬಂಧನೆಗಳಂತೆ ಎಲ್ಲ ಸ್ಥಳೀಯ ಸಂಸ್ಥೆಗಳಿಗೆ ಕಾಲಕಾಲಕ್ಕೆ ಚುನಾವಣೆ ನಡೆಸಬೇಕು.

ರಾಜ್ಯದಲ್ಲಿ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯತಿ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗಳು ನಡೆಯದ ಕಾರಣ ರಾಜ್ಯಕ್ಕೆ ಲಭಿಸಬೇಕಾದ ರೂ.2100 ಕೋಟಿ ಅನುದಾನವನ್ನು ಕೇಂದ್ರ ಹಣಕಾಸು ಆಯೋಗ ತಡೆ ಹಿಡಿದಿದೆ. 2026 ಮಾರ್ಚ್ ಅಂತ್ಯಕ್ಕೆ 15ನೇ ಕೇಂದ್ರ ಹಣಕಾಸು ಆಯೋಗದ ಅವಧಿ ಮುಕ್ತಾಯವಾಗಲಿದೆ. ಇದರ ಒಳಗಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಿದರೆ, ತಡೆ ಹಿಡಿದ ರೂ.2100 ಕೋಟಿ ಅನುದಾನವನ್ನು ಬಳಕೆ ಮಾಡಿಕೊಳ್ಳಬಹುದು. ಮುಂಬರುವ ಜೂನ್ ಮಾಹೆಯ ಒಳಗಾಗಿ ರಾಜ್ಯ ಹಣಕಾಸು ಆಯೋಗದಿಂದ ಅಂತಿಮ ಶಿಫಾರಸ್ಸುಗಳುಳ್ಳ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸುವುದಾಗಿ ಅಧ್ಯಕ್ಷ ಡಾ.ಸಿ. ನಾರಾಯಣಸ್ವಾಮಿ ಹೇಳಿದರು.

ನಗರಸಭೆ ಅಧ್ಯಕ್ಷೆ ಬಿ.ಎನ್. ಸುಮಿತಾ ಮಾತನಾಡಿ, ನಗರಸಭೆಗೆ ತೆರಿಗೆ ಪಾವತಿಯಿಂದಲೇ ಹೆಚ್ಚಿನ ಆದಾಯ ಸಂಗ್ರಹವಾಗಲಿದೆ. ತೆರಿಗೆ ಸಂಗ್ರಹ ಹಣದಿಂದಲೇ ಪೌರಕಾರ್ಮಿಕರ ವೇತನ ಸೇರಿದಂತೆ ಅನೇಕ ಅಭಿವೃದ್ಧಿ ಕಾಮಗಾರಿಗಳಿಗೂ ಅನುದಾನದಿಂದಲೇ ಭರಿಸಲಾಗುತ್ತಿದೆ. ಹೀಗಾಗಿ ನಗರಸಭೆಗೆ ಅನುದಾನ ಕಡಿಮೆ ಇರುವುದರಿಂದ ಅಭಿವೃದ್ಧಿ ಕೆಲಸಗಳಿಗೆ ಕಷ್ಟವಾಗಲಿದ್ದು, ಸರ್ಕಾರದಿಂದ ಹೆಚ್ಚಿನ ಆದಾಯದ ಅವಶ್ಯಕತೆ ಇದೆ ಎಂದರು.
ಶಾಂತಿ ಸಾಗರ ಹಾಗೂ ವಾಣಿವಿಲಾಸ ಸಾಗರದಿಂದ ಚಿತ್ರದುರ್ಗ ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಶಾಂತಿಸಾಗರ ಪೈಪ್ಲೈನ್ ತುಂಬಾ ಹಾಳಾಗಿದ್ದು, ಹೊಸ ಪೈಪ್ಲೈನ್ ಅಳವಡಿಕೆ ಮಾಡಲು ದೊಡ್ಡಮಟ್ಟದ ಅನುದಾನ ಬಿಡುಗಡೆ ಮಾಡಬೇಕು ಎಂದು ರಾಜ್ಯ ಹಣಕಾಸು ಆಯೋಗಕ್ಕೆ ಮನವಿ ಮಾಡಿದರು.

      ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾತನಾಡಿ, ಚಿತ್ರದುರ್ಗ ನಗರದಲ್ಲಿ ಕುಡಿಯುವ ನೀರು ನಿರ್ವಹಣಾ ವ್ಯವಸ್ಥೆಗೆ ಹಾಗೂ ನಗರ ಒಳ ಚರಂಡಿ ವ್ಯವಸ್ಥೆಗೆ ಹೆಚ್ಚಿನ ಅನುದಾನಕ್ಕಾಗಿ ವಿಶೇಷ ಪ್ಯಾಕೇಜ್ ಬಿಡುಗಡೆಗೆ ರಾಜ್ಯ ಹಣಕಾಸು ಆಯೋಗದಿಂದ ಶಿಫಾರಸ್ಸು ಮಾಡಿದರೆ ತುಂಬಾ ಅನುಕೂಲವಾಗಲಿದೆ. ಇದರ ಜೊತೆಗೆ ಚಿತ್ರದುರ್ಗ ನಗರದಲ್ಲಿ 2 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಹೊಂದಿದ್ದು, ನಗರಸಭೆಯಲ್ಲಿ  ಪೌರಕಾರ್ಮಿಕರು, ತಾಂತ್ರಿಕ ಹುದ್ದೆಗಳು ಸೇರಿದಂತೆ ವಿವಿಧ ಹುದ್ದೆಗಳು ಖಾಲಿ ಇದ್ದು, ಇದರಿಂದ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ, ಸಿಬ್ಬಂದಿಗಳಿಗೆ ಹೆಚ್ಚಿನ ಕೆಲಸದ ಒತ್ತಡವಾಗುತ್ತಿದೆ. ಖಾಲಿ ಇರುವ ಹುದ್ದೆಗಳ ಭರ್ತಿ ನಿಟ್ಟಿನಲ್ಲಿ ನೇಮಕಾತಿಗೆ ಕ್ರಮವಹಿಸುವುದು ಅಗತ್ಯವಾಗಿದೆ ಎಂದು ಹೇಳಿದರು.

      ನಗರಸಭೆ ಉಪಾಧ್ಯಕ್ಷೆ ಶ್ರೀದೇವಿ ಮಾತನಾಡಿ, ಚಿತ್ರದುರ್ಗ ನಗರದ 33ನೇ ವಾರ್ಡ್ನಲ್ಲಿ ಮಳೆ ಬಂದರೆ ಚರಂಡಿ ನೀರು ಮನೆಗಳಿಗೆ ನುಗ್ಗುತ್ತದೆ. ಚರಂಡಿಗಳು ತುಂಬಾ ಚಿಕ್ಕದಾಗಿದ್ದು, ಇದರಿಂದ ತುಂಬಾ ಸಮಸ್ಯೆಯಾಗುತ್ತಿದೆ. ದೊಡ್ಡ ಚರಂಡಿಗಳ ನಿರ್ಮಾಣ ಮಾಡಬೇಕು ಎಂದು ಸಲಹೆ ನೀಡಿದರು.

      ಚಿತ್ರದುರ್ಗ ನಗರಸಭೆಯಲ್ಲಿ ಸಿಬ್ಬಂದಿಯ ಕೊರತೆ ಕಾಡುತ್ತಿದೆ. ಇದರ ಜೊತೆಗೆ ಚಿತ್ರದುರ್ಗ ನಗರಸಭೆ ವ್ಯಾಪ್ತಿಗೆ ಮದಕರಿಪುರ, ಚೋಳಘಟ್ಟ ಸೇರಿದಂತೆ ಐದಾರು ಗ್ರಾಮ ಪಂಚಾಯತಿಗಳು ಸೇರ್ಪಡೆಯಾಗುತ್ತಿವೆ. ಹಾಗಾಗಿ ನಗರಸಭೆಗೆ ಜನಸಂಖ್ಯೆಗೆ ಅನುಗುಣವಾಗಿ ಸಿಬ್ಬಂದಿ ನೇಮಕ ಮಾಡಿಕೊಳ್ಳಬೇಕು. ಇದರಿಂದ ಸಾರ್ವಜನಿಕರಿಂದ ಅನುಕೂಲವಾಗಲಿದೆ ಎಂದು 5ನೇ ವಾರ್ಡ್ ಸದಸ್ಯ ಹರೀಶ್ ಅಭಿಪ್ರಾಯಪಟ್ಟರು.

      ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ನಸರುಲ್ಲಾ ಮಾತನಾಡಿ, ನಗರಸಭೆ ಚುನಾಯಿತ ಪ್ರತಿನಿಧಿಗಳಿಗೆ ನೀಡುವ ಗೌರವಧನ ಮೊತ್ತವನ್ನು ಹೆಚ್ಚಿಸಲು ಮನವಿ ಮಾಡಿದರು.  ನಗರಸಭೆ ವಾಣಿಜ್ಯ ಮಳಿಗೆಗಳು ನಗರಸಭೆಗೆ ಪ್ರಮುಖ ಆದಾಯ ಮೂಲ. ಮಳಿಗೆಗಳ ಟೆಂಡರ್ ವಿಚಾರದಲ್ಲಿ ಸ್ವಲ್ಪ ಗೊಂದಲಗಳು ಇದ್ದು, ಹಾಗಾಗಿ ಇವುಗಳನ್ನು ಸುಲಭವಾಗಿ ಆಗುವ ರೀತಿಯಲ್ಲಿ ಕ್ರಮವಹಿಸಬೇಕು. ಚಿತ್ರದುರ್ಗ ಐತಿಹಾಸಿಕ ನಗರವಾಗಿದೆ. ನಗರದಲ್ಲಿ ರಸ್ತೆಗಳು ಚಿಕ್ಕದಾಗಿದ್ದು, ಹಾಗಾಗಿ ನಗರದ ಅಭಿವೃದ್ಧಿಯ ತುರ್ತು ಅವಶ್ಯಕತೆ ಇದೆ ಸಭೆಗೆ ಸಲಹೆ ನೀಡಿದರು.

ವೇಳೆ ನಗರಸಭೆಗೆ ಅಗತ್ಯ ಇರುವ ಅನುದಾನಗಳ ಕುರಿತು ಆಯೋಗಕ್ಕೆ ನಗರಸಭೆ ವತಿಯಿಂದ ಮನವಿ ಸಲ್ಲಿಸಲಾಯಿತು. ಸಭೆಯಲ್ಲಿ 5ನೇ ರಾಜ್ಯ ಹಣಕಾಸು ಆಯೋಗದ ಸದಸ್ಯರಾದ ಮೊಹಮದ್ ಸನಾವುಲ್ಲಾ, ಆರ್.ಎಸ್.ಪೋಂಡೆ, ಸಮಾಲೋಚಕರಾದ ಕೆಂಪೇಗೌಡ, ಸುಪ್ರಸನ್ನ, ಆಪ್ತ ಕಾರ್ಯದರ್ಶಿ ಯಾಲಕ್ಕಿಗೌಡ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್, ನಗರಸಭೆ ಪೌರಾಯುಕ್ತೆ ಎಂ.ರೇಣುಕಾ ಸೇರಿದಂತೆ ನಗರಸಭೆ ಸದಸ್ಯರು ಹಾಗೂ ಅಧಿಕಾರಿಗಳು ಇದ್ದರು.

 

 

 

Share This Article
error: Content is protected !!
";