ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಿವೃತ್ತ ನ್ಯಾಯಮೂರ್ತಿ ಹೆಚ್. ಎನ್. ನಾಗಮೋಹನ ದಾಸ್ ಆಯೋಗವು ಒಳ ಮೀಸಲಾತಿ ಅಂತಿಮ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸೋಮವಾರ ಸಲ್ಲಿಕೆ ಮಾಡಿತು.
ಎಸ್ಸಿ ಸಮುದಾಯಗಳ ಸಮೀಕ್ಷೆಯ ದತ್ತಾಂಶ ಮತ್ತು ಅನುಬಂಧಗಳು ಸೇರಿದಂತೆ ಸುಮಾರು 1,766 ಪುಟಗಳು ಮತ್ತು ಆರು ಶಿಫಾರಸುಗಳನ್ನೊಳಗೊಂಡ ವರದಿಯನ್ನು ಆಯೋಗವು ಸಿಎಂ ಅವರಿಗೆ ನೀಡಿತು.
ಕಳೆದ 2025 ಮೇ 5 ರಿಂದ ಜುಲೈ 6ರ ವರೆಗೆ ಸಮಗ್ರ ಸಮೀಕ್ಷೆ ನಡೆಸಲಾಗಿದೆ. ರಾಜ್ಯದ ಪರಿಶಿಷ್ಟ ಜಾತಿಯ 27,24,768 ಕುಟುಂಬಗಳು ಮತ್ತು 1,07,01,982 ಜನರು ಸಮೀಕ್ಷೆಯಲ್ಲಿ ಭಾಗಿಯಾಗಿದ್ದಾರೆ.
ಮುಂದಿನ ಸಂಪುಟದಲ್ಲಿ ಚರ್ಚೆ: ಸಿಎಂ
ಮುಖ್ಯಮಂತ್ರಿ ಸಿದ್ದರಾಮಯ್ಯ ಒಳ ಮೀಸಲಾತಿ ವರದಿ ಸ್ವೀಕರಿಸಿ ವಿಧಾನಸೌಧದಲ್ಲಿ ಮಾತನಾಡಿ, ಆ.7ರ ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಕುರಿತು ಸಮಗ್ರ ಚರ್ಚೆ ಮಾಡುತ್ತೇವೆ ಎಂದರು.
ನಾಗಮೋಹನ್ ದಾಸ್ ನೇತೃತ್ವದ ಆಯೋಗವು ವರದಿ ಸಲ್ಲಿಕೆ ಮಾಡಿದೆ. ಅದರಲ್ಲಿ ಏನಿದೆ ಅಂತ ಇನ್ನೂ ನೋಡಿಲ್ಲ. ಆ.7ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ವರದಿ ಇಟ್ಟು ಚರ್ಚೆ ಮಾಡಿದ ಬಳಿಕ ಹೇಳುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.
ಗೃಹ ಸಚಿವ ಜಿ.ಪರಮೇಶ್ವರ್ ಇದೇ ಸಂದರ್ಭದಲ್ಲಿ ಮಾತನಾಡಿ, ನಾಗಮೋಹನ್ ದಾಸ್ ಅವರು ಒಳ ಮೀಸಲಾತಿ ವರದಿಯನ್ನು ಸಿಎಂಗೆ ಒಪ್ಪಿಸಿದ್ದಾರೆ. ಅದರಲ್ಲಿ ಏನಿದೆ ಎಂದು ಗೊತ್ತಿಲ್ಲ. ಸಂಪುಟ ಸಭೆಯಲ್ಲಿಟ್ಟು ಚರ್ಚಿಸಿದ ನಂತರ ಅನುಷ್ಠಾನ ಮಾಡಲಾಗುತ್ತದೆ ಎಂದು ಪ್ರತಿಕ್ರಿಯೆ ನೀಡಿದರು. ಸಚಿವ ಕೆ.ಹೆಚ್.ಮುನಿಯಪ್ಪ ಮತ್ತು ಸಚಿವ ಆರ್.ಬಿ.ತಿಮ್ಮಾಪುರ್ ಮಾತನಾಡಿ, ನ್ಯಾ.ನಾಗಮೋಹನ್ ದಾಸ್ ವರದಿ ಜಾರಿ ಆಗುತ್ತೆ ಎಂಬ ವಿಶ್ವಾಸವಿದೆ.
ನ್ಯಾ.ನಾಗಮೋಹನ್ ದಾಸ್ ವರದಿ ಸ್ವಿಕಾರ ಆಗಿದೆ. ಎಸ್.ಎಂ.ಕೃಷ್ಣ ಅವರು ಸದಾಶಿವ ಆಯೋಗ ನೇಮಕ ಮಾಡಿದ್ರು. ಅಲ್ಲಿಂದ ಇಲ್ಲಿಯವರೆಗೂ ಆಯೋಗಗಳು ಬದಲಾವಣೆ ಆಗಿವೆ. ಸದಾಶಿವ ಆಯೋಗದ ವರದಿಯನ್ನು ಬಿಜೆಪಿ ತಿರಸ್ಕಾರ ಮಾಡಿದ್ರೂ ಜನರಿಗೆ ಮೋಸ ಮಾಡಲು ಒಳಮೀಸಲಾತಿ ಜಾರಿ ಮಾಡ್ತೀವಿ ಎಂದು ಹೇಳಿದ್ರು. ಇವತ್ತು ವರದಿ ಬಂದಿದೆ ಅದನ್ನ ಜಾರಿಗೆ ತರೋದಕ್ಕೆ ಬದ್ಧವಾಗಿದ್ದೇವೆ. ನಾಗಮೋಹನ್ ದಾಸ್ ಅವರ ತಂಡ ಅಲ್ಪಾವಧಿಯಲ್ಲಿ ವರದಿ ಕೊಟ್ಟಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.
ವರದಿಯಲ್ಲಿ ಏನೇನಿದೆ-
ಒಳಜಾತಿಗಳ ವರ್ಗೀಕರಣಕ್ಕಾಗಿ ಶೈಕ್ಷಣಿಕ ಹಿಂದುಳಿದಿರುವಿಕೆ, ಸರ್ಕಾರಿ ಉದ್ಯೋಗದಲ್ಲಿ ಅಗತ್ಯ ಪ್ರಾತಿನಿಧ್ಯದ ಕೊರತೆ, ಸಾಮಾಜಿಕ ಹಿಂದುಳಿದಿರುವಿಕೆ, ಸಮೀಕ್ಷೆಯಲ್ಲಿ ಸಂಗ್ರಹಿಸಿದ ಮತ್ತು ಸರ್ಕಾರದ ಸಂಸ್ಥೆಗಳಿಂದ ಸಂಗ್ರಹಿಸಿದ ದತ್ತಾಂಶದ ವಿಶ್ಲೇಷಿಸಿ, ಸರ್ವೋಚ್ಚ ನ್ಯಾಯಾಲಯದ ಸೂಚನೆಯಂತೆ ಪರಿಶಿಷ್ಟ ಜಾತಿಯ ಒಳಜಾತಿಗಳನ್ನು ವರ್ಗೀಕರಿಸಿ ಲಭ್ಯವಿರುವ ಮೀಸಲಾತಿಯನ್ನು ಹಂಚಲಾಗಿದೆ. ಪರಿಶಿಷ್ಟ ಜಾತಿಗಳಿಗೆ ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ, ಪರಿಶಿಷ್ಟ ಜಾತಿ ಸಮೀಕ್ಷೆಯನ್ನು ನಡೆಸುವ ಜವಾಬ್ದಾರಿಯನ್ನು ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗಕ್ಕೆ ರಾಜ್ಯ ಸರ್ಕಾರ ನೀಡಿತ್ತು.

