ಬಿಜೆಪಿ ಕಾರ್ಯಕರ್ತೆ ಒಬ್ಬರನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಬಗ್ಗೆ ಸ್ಪಷ್ಟನೆ ನೀಡಿದ ಆಯುಕ್ತ ಎನ್.ಶಶಿಕುಮಾರ್

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಹುಬ್ಬಳ್ಳಿ:
ಬಿಜೆಪಿ ಕಾರ್ಯಕರ್ತೆಯನ್ನ ಬಂಧಿಸುವ ಸಂದರ್ಭದಲ್ಲಿ ನಮ್ಮ ಪೊಲೀಸರ ಮೇಲೆ ಹಲ್ಲೆ ಮಾಡಿದರು. ಬಂಧಿಸಿ ವಾಹನದಲ್ಲಿ ಕೂರಿಸಿದಾಗ ಅವರೇ ಬಟ್ಟೆ ತೆಗೆದರು ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್​ ಕಮಿಷನರ್​ ಎನ್​.ಶಶಿಕುಮಾರ್​ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಬಿಜೆಪಿ ಕಾರ್ಯಕರ್ತೆ ಒಬ್ಬರನ್ನು ಪೊಲೀಸರು ವಿವಸ್ತ್ರಗೊಳಿಸಿ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಕಮಿಷನರ್​ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

- Advertisement - 

ಬುಧವಾರ ಕೇಶವಪುರ ಪೊಲೀಸ್ ಠಾಣೆಗೆ ಭೇಟಿ ನೀಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶಶಿಕುಮಾರ್ ಅವರು, ಪೊಲೀಸರು ವಶಕ್ಕೆ ಪಡೆದುಕೊಂಡ ಸಂದರ್ಭದಲ್ಲಿ ಆಕೆ ಬೆತ್ತಲಾಗಿಲ್ಲ ಅಥವಾ ಬಟ್ಟೆಗಳನ್ನು ಕಳಚುವಂಥದ್ದು ಮಾಡಿಲ್ಲ. ವಶಕ್ಕೆ ತೆಗೆದುಕೊಳ್ಳುವ ಸಂದರ್ಭದಲ್ಲಿ ಅವರು ಬಹಳಷ್ಟು ಪ್ರತಿರೋಧ ಮಾಡಿದರು. ಹಲ್ಲೆ ಮಾಡಿದರು. ಮಹಿಳಾ ಸಿಬ್ಬಂದಿಗೆ ಮಾತ್ರವಲ್ಲ, ನಮ್ಮ ಪುರುಷ ಸಿಬ್ಬಂದಿಯನ್ನೂ ತಳ್ಳಾಡಿ, ದಬ್ಬಿ, ರಂಪಾಟ ಮಾಡಿ, ತಪ್ಪಿಸಿಕೊಂಡು ಹೋಗುವ ಪ್ರಯತ್ನ ಮಾಡಿದರು ಎಂದು ಆಯುಕ್ತರು ತಿಳಿಸಿದರು.

ಬಂಧಿಸುವ ಸಂದರ್ಭದಲ್ಲಿ ಅವರು ಬಹಳ ದೊಡ್ಡ ಮಟ್ಟದಲ್ಲಿ ಸೀನ್ ಕ್ರಿಯೆಟ್​ ಮಾಡಲು ಪ್ರಯತ್ನಿಸಿದರು. ಅಷ್ಟಾಗಿಯೂ ಅವರನ್ನು ನಮ್ಮ ಸಿಆರ್​ ವಾಹನಕ್ಕೆ ಹತ್ತಿಸಿಕೊಳ್ಳುವ ಸಂದರ್ಭದಲ್ಲಿ ವಿವಸ್ತ್ರ ಮಾಡಿಕೊಳ್ಳಲು ಪ್ರಯತ್ನಿಸಿದರು. ವಾಹನದೊಳಗೆ ಬಂದ ತಕ್ಷಣ ಏಕಾಏಕಿ ಬಟ್ಟೆಗಳನ್ನೆಲ್ಲ ತೆಗೆದರು. ನಂತರ ನಮ್ಮ ಸಿಬ್ಬಂದಿಯೇ ಸ್ಥಳೀಯರ ಸಹಾಯದಿಂದ ಬೇರೆ ಬಟ್ಟೆ ತರಿಸಿ ಹಾಕಿಸಿದರು ಎಂದು ಆಯುಕ್ತ ಶಶಿಕುಮಾರ್ ತಿಳಿಸಿದರು.

- Advertisement - 

ಪೊಲೀಸರು ಸಾಮಾನ್ಯವಾಗಿ ಯಾವುದಾದರೂ ಪ್ರಕರಣದಲ್ಲಿ ಬಂಧಿಸಬೇಕಿದ್ದರೆ, ನಾವು ಹೋಗಿ ನಿಮ್ಮ ಮೇಲೆ ಇಂಥ ಪ್ರಕರಣವಿದೆ ಎಂದು ಹೇಳುತ್ತೇವೆ. ಅವರು ಸಹಕರಿಸುತ್ತಾರೆ ಇಲ್ಲವೇ ಚಾಲೆಂಜ್​ ಮಾಡುತ್ತಾರೆ. ಆದರೆ ಈಕೆಯ ಮೇಲೆ 2025ರಲ್ಲಿ ಒಟ್ಟು 5 ಪ್ರಕರಣಗಳಿದ್ದವು. ಈ ವರ್ಷ ನಾಲ್ಕು ಪ್ರಕರಣಗಳೂ ಸೇರಿದಂತೆ ಒಟ್ಟು 9 ಪ್ರಕರಣಗಳು ದಾಖಲಾಗಿವೆ ಎಂದು ಅವರು ಮಾಹಿತಿ ನೀಡಿದರು.

ಸದರಿ ಮಹಿಳೆ ಕುರಿತು ಈ ಹಿಂದಿನ ನಡವಳಿಕೆಗಳ ಬಗ್ಗೆ ಮಾಹಿತಿ ಇದ್ದ ನಮ್ಮ ಸಿಬ್ಬಂದಿ, ಹೆಚ್ಚಿನ ಮಹಿಳಾ ಸಿಬ್ಬಂದಿಯನ್ನು ಕರೆಸಿಕೊಂಡಿದ್ದಾರೆ. ಕೇಶವಪುರ ಠಾಣೆಯಲ್ಲಿ 9-10 ಮಹಿಳಾ ಸಿಬ್ಬಂದಿ ಇಲ್ಲ. ಹಾಗಾಗಿ ಇನ್​ಸ್ಪೆಕ್ಟರ್​ ಅವರು ಎಸಿಪಿ ಅವರಿಗೆ ಮಾಹಿತಿ ನೀಡಿ ಹೆಚ್ಚುವರಿ ಮಹಿಳಾ ಸಿಬ್ಬಂದಿಯನ್ನು ಹಾಗೂ ಖಾಲಿ ಸಿಆರ್​ ವಾಹನವನ್ನು ತರಿಸಿಕೊಂಡು ಆಕೆಯನ್ನು ವಶಕ್ಕೆ ತೆಗೆದುಕೊಳ್ಳಲು ಪ್ರಯತ್ನ ಮಾಡಿದರು. ವಶಕ್ಕೆ ತೆಗೆದುಕೊಂಡು ವಾಹನದೊಳಗೆ ಹತ್ತಿಸಿದ ಮೇಲೆ ಆಕೆ ಬಟ್ಟೆ ತೆಗೆದಿದ್ದಾರೆ. ಆಮೇಲೆ ನಮ್ಮ ಸಿಬ್ಬಂದಿಯೇ ಸ್ಥಳೀಯರ ಸಹಾಯದಿಂದ ಆಕೆಗೆ ಬಟ್ಟೆ ತೊಡಿಸಿ, ಪ್ರಕರಣದ ತನಿಖೆ ಮಾಡುತ್ತಿದ್ದಾರೆ ಎಂದು ಆಯುಕ್ತರು ಹೇಳಿದರು.

ಧಾರವಾಡದ ವಿದ್ಯಾಗಿರಿ ಪೊಲೀಸ್​ ಠಾಣೆಯಲ್ಲಿ ಈ ಹಿಂದೆ ಅವರ ಮೇಲೆ ಒಂದು ಪ್ರಕರಣ ದಾಖಲಾಗಿತ್ತು. ನಾಲ್ಕು ಪ್ರಕರಣಗಳು ಇದೇ ಕೇಶವಪುರ ಠಾಣೆಯಲ್ಲಿ ದಾಖಲಾಗಿದೆ. ಆಕೆಯನ್ನು ವಶಕ್ಕೆ ತೆಗೆದುಕೊಂಡು, ಬಂಧನದ ಪ್ರಕ್ರಿಯೆಗಳೆಲ್ಲ ಮಾಡಿದ ಮೇಲೆ ಮೊದಲು ನಾವು ವೈದ್ಯಕೀಯ ತಪಾಸಣೆಗೊಳಪಡಿಸುತ್ತೇವೆ. ಅವರಿಗೆ ಏನಾದರೂ ಸಮಸ್ಯೆಗಳಿದ್ದಲ್ಲಿ ವೈದ್ಯರ ಬಳಿ ಹೇಳಿಕೊಳ್ಳಲು ಅವಕಾಶವಿದೆ. ವೈದ್ಯರು ಪೊಲೀಸ್​ ಇಲಾಖೆಯವರು ಅಲ್ವಲ್ಲಾ?. ಎರಡನೇಯದಾಗಿ ಆಕೆಯನ್ನು ಮ್ಯಾಜಿಸ್ಟ್ರೇಟ್​ ಮುಂದೆ ಹಾಜರುಪಡಿಸಿದಾಗಲೂ, ಆಕೆ ಯಾವುದೇ ವಿಚಾರಗಳನ್ನು ಹೇಳಿಲ್ಲ ಎಂದು ಮಾಹಿತಿ ನೀಡಿದರು.

ಮಹಿಳೆ ಬಟ್ಟೆ ತೆಗೆದಿರುವ ಪರಿಸ್ಥಿತಿಯಲ್ಲಿರುವಂತಹ ವಿಡಿಯೋವನ್ನು ಯಾರು ವೈರಲ್​ ಮಾಡಿದ್ದಾರೆ ಎನ್ನುವುದನ್ನೂ ಕೂಡ ತನಿಖೆಯಲ್ಲಿ ಅಳವಡಿಸಿಕೊಳ್ಳಬೇಕಾಗುತ್ತದೆ. ಬಿಎಲ್​ಒ ಯಾವುದೇ ದೂರು ಕೊಟ್ಟಿಲ್ಲ. ನೀವು ಅಲ್ಲಿಗೆ ಹೋದ ಸಂದರ್ಭದಲ್ಲಿ ನಿಮ್ಮ ಜೊತೆ ಸಂಘರ್ಷ ಆಯ್ತು, ಪ್ರತಿರೋಧ ವ್ಯಕ್ತಪಡಿಸಿದರು. ನೀವೇನಾದರೂ ದೂರು ಕೊಡುವುದಿದ್ದರೆ ಕೊಡಿ ಅಂತ ಬಿಎಲ್​ಒಗೆ ಹೇಳಿದಾಗ, ಅವರು, ನಾವು ಸರ್ಕಾರಿ ಹುದ್ದೆಯಲ್ಲಿದ್ದೇವೆ. ಮತ್ತೆ ಅವರು ನಮ್ಮ ಮೇಲೆ ದೂರು ಕೊಡುವುದು, ಇದೆಲ್ಲ ಬೇಡ ಎಂದು ದೂರು ಕೊಡಲು ನಿರಾಕರಿಸಿದ್ದಾರೆ ಎಂದು ತಿಳಿಸಿದರು.

ಬಂಧಿತ ಮಹಿಳೆಯು ನಮ್ಮ ಸಿಬ್ಬಂದಿಗೆ ಹಲ್ಲಿನಿಂದ ಕಚ್ಚಿದ್ದಾರೆ. ಬೇರೆ ಮಹಿಳಾ ಸಿಬ್ಬಂದಿಗೆ ಕೆಟ್ಟ ರೀತಿಯಲ್ಲಿ ಹಲ್ಲೆ ಮಾಡಿದ್ದಾರೆ. ಜೊತೆಗೆ ಎಳೆದಾಡಿದ್ದಾರೆ. ಇದೆಲ್ಲದರ ಬಗ್ಗೆ ನಾವು ವೈದ್ಯಕೀಯ ತಪಾಸಣೆ ಮಾಡಿಸಿದ್ದೇವೆ. ವೈದ್ಯಕೀಯ ವರದಿಯಲ್ಲಿ ಅವರಿಗೆ ಏನು ಗಾಯವಾಗಿದೆ ಎಂಬುದು ಗೊತ್ತಾಗುತ್ತದೆ. ಜ.5ರಂದು ಅವರನ್ನು ವಶಕ್ಕೆ ಪಡೆಯುವ ಸಂದರ್ಭದಲ್ಲಿ ನಡೆದಂತ ಹಲ್ಲೆ ಸಂಬಂಧ ಪ್ರಕರಣ ದಾಖಲಾಗಿದೆ ಎಂದು ಆಯುಕ್ತ ಶಶಿಕುಮಾರ್ ವಿವರಿಸಿದರು.

ಏನಿದು ಘಟನೆ:
ಬಂಧಿತ ಈ‌ಮಹಿಳೆ ಹಿಂದೆ ಕಾಂಗ್ರೆಸ್ ‌ಪಕ್ಷದಲ್ಲಿ ಇದ್ದರು. ಆದರೆ ಇತ್ತೀಚಿಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರು. ಕಳೆದ ನಾಲ್ಕೈದು ದಿನಗಳ ಹಿಂದೆ ಇವರು ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಹೆಸರು ಡಿಲೀಟ್ ಮಾಡಿಸಿದ್ದಾರೆ ಎಂಬ ಆರೋಪ ಕೇಳಿ‌ಬಂದಿತ್ತು.

ಇದೇ ಆರೋಪದ ಮೇಲೆ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ತಕರ್ತರ ನಡುವೆ ಗಲಾಟೆ ನಡೆದಿತ್ತು. ಈ ವಿಚಾರವಾಗಿ ಮಹಿಳೆಯ ವಿರುದ್ದ ಕಾಂಗ್ರೆಸ್​ ಕಾರ್ಯಕರ್ತೆಯೊಬ್ಬರು ಪೊಲೀಸರಿಗೆ ದೂರು ನೀಡಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.

ಕಾಂಗ್ರೆಸ್ ಮಹಾನಗರ ‌ಪಾಲಿಕೆ ಸದಸ್ಯೆ ಸುವರ್ಣ ಕಲ್ಲಕುಂಟ್ಲ ಅವರು ನೀಡಿದ ದೂರು ಆಧರಿಸಿ ಬಿಜೆಪಿ ಕಾರ್ಯಕರ್ತೆಯನ್ನು ಬಂಧಿಸುವ ವೇಳೆ ಜ.5ರಂದು ಹೈಡ್ರಾಮಾ ನಡೆದಿತ್ತು. ಆದರೆ, ಬಿಜೆಪಿ ಕಾರ್ಯಕರ್ತೆ ಮೇಲೆ ಪೊಲೀಸರು ದಬ್ಬಾಳಿಕೆ ಮಾಡಿದ್ದಾರೆ, ಬಟ್ಟೆ ಬಿಚ್ಚಿದ್ರೂ ಬಿಡದೇ ದೌರ್ಜನ್ಯ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಕೇಶವಪುರ ಪೊಲೀಸ್ ಠಾಣೆ ಸಿಬ್ಬಂದಿಯ ನಡೆ ಟೀಕೆಗೆ ಕಾರಣವಾಗಿದ್ದನ್ನು ಸ್ಮರಿಸಬಹುದಾಗಿದೆ.

Share This Article
error: Content is protected !!
";