ಆಯೋಗಗಳು ಪಾರದರ್ಶಕತೆ, ವೃತ್ತಿಪರತೆಯಿಂದ ಕೆಲಸ ನಿರ್ವಹಿಸಬೇಕು: ಉಪರಾಷ್ಟ್ರಪತಿ ಜಗದೀಪ್ ಧನಕರ್

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯಗಳ ಲೋಕಸೇವಾ ಆಯೋಗಗಳು ಪಾರದರ್ಶಕತೆ, ಜವಾಬ್ದಾರಿ ಹಾಗೂ ಬದ್ಧತೆಯಿಂದ ಕೆಲಸ ನಿರ್ವಹಿಸಿ ವೃತ್ತಿಪರತೆಯನ್ನು ಎತ್ತಿಹಿಡಿಯಬೇಕೆಂದು ಉಪರಾಷ್ಟ್ರಪತಿ ಜಗದೀಪ್ ಧನಕರ್ ತಿಳಿಸಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಕರ್ನಾಟಕ ಹಾಗೂ ಕೇಂದ್ರ ಲೋಕಸೇವಾ ಆಯೋಗಗಳ ಸಹಭಾಗಿತ್ವದಲ್ಲಿ ಶನಿವಾರ ಹಮ್ಮಿಕೊಳ್ಳಲಾದ ರಾಜ್ಯ ಲೋಕಸೇವಾ ಆಯೋಗಗಳ ಅಧ್ಯಕ್ಷರುಗಳ ೨೫ ನೇ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

 ಎಲ್ಲಾ ರಾಜ್ಯಗಳ ಲೋಕಸೇವಾ ಆಯೋಗಗಳು ಬಲವರ್ಧನೆಗೆ ಅದರ ಅಧ್ಯಕ್ಷರ, ಸದಸ್ಯರ ಪಾತ್ರ ಹಿರಿದಾಗಿದೆ. ಇದು ಒಳ್ಳೆಯ ಆಡಳಿತಕ್ಕೆ ಕೈಗನ್ನಡಿಯಾಗಬೇಕು. ಇಂದಿನ ಯುವಜನರ ಆಕಾಂಕ್ಷೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಆಯೋಗ ಕೆಲಸ ನಿರ್ವಹಿಸಬೇಕೆಂದರು.

ಆಡಳಿತಶಾಹಿ ವರ್ಗವನ್ನು ಬಲವರ್ಧನೆಗೊಳಿಸಲು ಆಯೋಗ ಸ್ಪಷ್ಟದಿಟ್ಟ ಹೆಜ್ಜೆಗಳನ್ನಿಡಬೇಕು.  ಉತ್ತಮ ಆಡಳಿತ, ನಡಾವಳಿಗಳನ್ನು ಜನರಿಗೆ ನೀಡಬೇಕು ವಿಕಸಿತ ಭಾರತ -೨೦೨೭ ರ ದೂರದೃಷ್ಟಿಯನ್ನು ಸಕಾರಗೊಳಿಸಬೇಕು. ಈಗಾಗಲೇ ನಾವು ಜಿ.ಎಸ್.ಟಿ. ಮೂಲಕ ಏಕ ರೂಪದ ರಾಷ್ಟ್ರೀಯ ತೆರಿಗೆ ನೀಡಿ ತಂದಿದ್ದೇವೆ. ಕೇಂದ್ರ ಹಾಗೂ ರಾಜ್ಯಮಟ್ಟದ ಸೇವಾ ಆಯೋಗಗಳು ಪಾರದರ್ಶಕತೆ, ದಕ್ಷತೆ ಹಾಗೂ ನಿಷ್ಠಯಿಂದ ಕೆಲಸ ನಿರ್ವಹಿಸಬೇಕೆಂದರು.

ಪರೀಕ್ಷೆಗಳನ್ನು ಸಮರ್ಥವಾಗಿ ನಡೆಸಿ ಜನರ ವಿಶ್ವಾಸಾರ್ಹತೆ ಪಾತ್ರವಾಗಬೇಕು. ಆಕಾಂಕ್ಷಿಗಳಲ್ಲಿ ಪರೀಕ್ಷೆಗಳ ಹಾಗೂ ಪ್ರಶ್ನೆ ಪತ್ರಿಕೆಯ ಸೋರಿಕೆಯ ಭಯ ಹೋಗಲಾಡಿಬೇಕು. ಭ್ರಷ್ಟಾಚಾರ ನಿರ್ಮೂಲನೆಗೆ ಕರ್ನಾಟಕ ಸಾರ್ವಜನಿಕ ಪರೀಕ್ಷೆ (ನೇಮಕಾತಿಯಲ್ಲಿನ ಭ್ರಷ್ಟಾಚಾರ ಮತ್ತು ಅನುಚಿತ ವಿಧಾನಗಳ ನಿಗ್ರಹ) ಕಾಯ್ದೆ ೨೦೨೪ ಅನ್ನು ತಂದಿರುವುದು ಗಮನಾರ್ಹ. ಆದರೂ ಯಾವುದೇ ಅಡೆ ತಡೆಗಳಿಲ್ಲದೆ ಇವನ್ನು ಅನುಷ್ಠಾನಗೊಳಿಸಲು ರಾಜ್ಯ ಸಜ್ಜಾಗಬೇಕು ಎಂದರು.

ಆಯೋಗಗಳು ಸಾಮರ್ಥ್ಯ ನಿರ್ಮಾಣ, ವೃತ್ತಿ ಪರತೆಗಳಿಗೆ ಒತ್ತು ನೀಡಿ ತರಬೇತಿಗಳನ್ನು ಸಹ ನಡೆಸಬೇಕಿದೆ. ಆಗಿಂದಾಗ್ಗೆ ಆಗುವ ನಿಯಮಗಳು, ಕಾಯ್ದೆಗಳಿಗೆ ಅನ್ವಯ ಆಯೋಗ ತನ್ನ ಕೆಲಸ ನಿರ್ವಹಣೆ ಜೊತೆಗೆ ಉತ್ತಮ ಪ್ರತಿಫಲ ನೀಡಬೇಕಿದೆ. ಸಂವಿಧಾನದ  ತತ್ವ ಮತ್ತು ಮೌಲ್ಯಗಳನ್ನು ಎತ್ತಿ ಹಿಡಿದು, ವ್ಯಕ್ತಿ, ಸಮಾಜದ ಏಳ್ಗೆಗೆ ಶ್ರಮಿಸಬೇಕೆಂದು ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ೧೯೫೧ ರಲ್ಲಿ ಸ್ಥಾಪಿಸಲಾದ ಕರ್ನಾಟಕ ಲೋಕಸೇವಾ ಆಯೋಗ ತನ್ನಡೆ ಆದ ಕಾರ್ಯಕ್ಷಮತೆ ಪಾರದರ್ಶಕತೆಗೆ ಹೆಸರಾಗಿದೆ. ಪಿ.ಸಿ. ಹೋಟಾ ಸಮಿತಿ ಶಿಫಾರಸ್ಸಿನಂತಹ ಸರ್ಕಾರ ನೇಮಕಾತಿಯಲ್ಲಿ ಸೂಕ್ತ ಬದಲಾವಣೆ ತಂದಿದೆ. ಗ್ರೂಪ್ ಸಿ ಮತ್ತು ಗ್ರೂಪ್ ಬಿ ಹುದ್ದೆಗಳಿಗೆ ಸಂದರ್ಶನವನ್ನು ರದ್ದು ಮಾಡಿ ಪ್ರಕ್ರಿಯೆಯಲ್ಲಿ ಸಮತೋಲನ ತರಲಾಗಿದೆ. ಗೆಜೆಟೆಡ್ ಪ್ರೊಬೇಷನರ್‍ಸ್ ಹುದ್ದೆಯ ಸಂದರ್ಶನ ಅಂಕಗಳನ್ನು ೨೫ ಕ್ಕೆ ಇಳಿಸಿ ನೇಮಕಾತಿಯಲ್ಲಿ ಪಾರದರ್ಶಕತೆ ತರಲಾಗಿದೆ. ಆದಾಗ್ಯೂ ಪ್ರಶ್ನೆ ಪತ್ರಿಕೆ ಸೋರಿಕೆ ಮುಂತಾದ ಸಮಸ್ಯೆಗಳು ಉದ್ಭವಿಸುತ್ತಿದ್ದು, ಸರ್ಕಾರ ಇದನ್ನು ತಡೆಗಟ್ಟಲು ಕಠಿಣ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ.

ಇತ್ತೀಚಿನ ದಿನಗಳಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಳವಾಗಿದ್ದುತ್ವರಿತ ನೇಮಕಾತಿ ಪ್ರಕ್ರಿಯೆಗಾಗಿ ಕೇಂದ್ರ ಲೋಕ ಸೇವಾ ಆಯೋಗದ ಮಾದರಿಯನ್ನು ಅನುಸರಿಸಲು ಕ್ರಮಕೈಗೊಳ್ಳಲಾಗಿದೆ. ಬ್ಯಾಕ್‌ಲಾಗ್ ಹುದ್ದೆಗಳ ನೇಮಕಾತಿಯನ್ನು ಸಹ ಸರಳೀಕರಣಗೊಳಿಸಲಾಗಿದೆ. ಆಧುನಿಕ ಡಿಜಿಟಲ್ ತಂತ್ರಜ್ಞಾನಗಳಾದ ಕೃತಕ ಬುದ್ಧಿಮತ್ತೆ ಮುಂತಾದವುಗಳ ಬಳಕೆಯನ್ನು ಇತರೆ ರಾಜ್ಯದವರಿಂದ ತಿಳಿದು ಅಳವಡಿಸಿಕೊಳ್ಳಲಾಗುತ್ತಿದೆ. ಇದರಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದಂತಾಗುತ್ತದೆ ಎಂದರು.

ಮಹಿಳೆಯ ಹಾಗೂ ಹಿಂದುಳಿದ ಜನಾಂಗಗಳಿಗೆ ಉದ್ಯೋಗದಲ್ಲಿ ಅವಕಾಶ ಕಲ್ಪಿಸಲು ಸಹ ಕರ್ನಾಟಕ ಲೋಕಸೇವಾ ಆಯೋಗ ಬದ್ಧವಾಗಿದೆ. ಇದಕ್ಕೆ ಡಿಟ್ಟ ಹೆಜ್ಜೆಯನ್ನು ಸಹ ಇಡಲಾಗಿದೆ. ಆಯ್ಕೆಯಾದವರಿಗೆ ಕಾಲಕಾಲಕ್ಕೆ ಸೂಕ್ತ ತರಬೇತಿ ನೀಡಿ ಸಮಾಜದ ಬೇಡಿಕೆಗಳನ್ನು ಪೂರೈಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಆಯೋಗ ದಕ್ಷತೆ, ಪಾರದರ್ಶಕತೆ ಹಾಗೂ ಇನ್ನಷ್ಟು ಹೊಣೆಗಾರಿಕೆಯಿಂದ ಕಾರ್ಯನಿರ್ವಹಿಸುತ್ತದೆ. ಇದರಿಂದ ಉತ್ತಮ ಸಮಾಜ ನಿರ್ಮಾಣಕ್ಕೆ ಬುನಾದಿಯಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿಗಳ ಪತ್ನಿ ಸುದೇಶ ಧನಕರ್, ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷರಾದ ಪ್ರೀತಿ ಸುದಾನ್, ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ  ಶಿವಶಂಕರಪ್ಪ ಸಾಹುಕಾರ್, ಹರಿಯಾಣ ಲೋಕಸೇವಾ ಆಯೋಗದ ಅಧ್ಯಕ್ಷ  ಅಲೋಕ್ ವರ್ಮಾ, ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಡಿಜಿ ಐಜಿಪಿ ಡಾ. ಅಲೋಕ್ ಮೋಹನ್ ಹಾಗೂ ವಿವಿಧ ರಾಜ್ಯಗಳ ಲೋಕಸೇವಾ ಆಯೋಗದ ಅಧ್ಯಕ್ಷರುಗಳು, ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

- Advertisement -  - Advertisement - 
Share This Article
error: Content is protected !!
";