ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಂಡ್ಯಲೋಕ ಸಭಾಕ್ಷೇತ್ರದಲ್ಲಿ 500 ಕೋಟಿ ವೆಚ್ಚದಲ್ಲಿ ಆಟೋಮೋಟಿವ್ ರಿಸರ್ಚ್ ಆಸೋಸಿಯೇಷನ್ ಆಪ್ ಇಂಡಿಯಾ ಸಂಶೋಧನಾ ಕೇಂದ್ರ ತೆರೆಯಲು 105 ಎಕರೆ ಭೂಮಿ ನೀಡಲು ರಾಜ್ಯ ಸರ್ಕಾರ ಸಿದ್ದ ಎಂದು ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ನಡೆಯನ್ನು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಶ್ಲಾಘಿಸಿದ್ದಾರೆ.
ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಯವರು ಕಳೆದ ಮೂರು ದಿನದ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ಪತ್ರ ಬರೆದು ಉದ್ದೇಶಿತ ಯೋಜನೆ ಜಾರಿ ಮಾಡಲು ನೂರು ಎಕರೆ ಭೂಮಿ ಅಗತ್ಯವಿದೆ ಅದಷ್ಟು ಬೇಗ ಭೂಮಿ ಮಂಜೂರು ಮಾಡುವಂತೆ ಮನವಿ ಮಾಡಿದ್ದರು.
ಈ ಪತ್ರ ಕುರಿತಂತೆ ರಾಜ್ಯ ಸರ್ಕಾರ ಮಂಡ್ಯ ಜಿಲ್ಲಾಧಿಕಾರಿ ಡಾ. ಕುಮಾರ್ ರವರಿಗೆ ವಿಳಂಬ ಮಾಡದಂತೆ ಅಗತ್ಯ ಭೂಮಿ ಗುರುತಿಸುವಂತೆ ಸೂಚನೆ ನೀಡಲಾಗಿತ್ತು. ಈ ಸೂಚನೆಯಂತೆ ಜಿಲ್ಲಾಧಿಕಾರಿಗಳು ಮಂಡ್ಯ ತಾಲ್ಲೂಕು ಬಸರಾಳು ಹೋಬಳಿಯ ಮುದ್ದನಘಟ್ಟ ಮತ್ತು ಹೆಗ್ಗಡಹಳ್ಳಿ ಬಳಿ 105 ಎಕರೆ ಸರ್ಕಾರಿ ಭೂಮಿ ಖಾಲಿ ಇರುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಹಾಗೂ ಈ ಭೂಮಿಯು ನಾಗಮಂಗಲ- ಮಂಡ್ಯ ರಾಜ್ಯ ಹೆದ್ದಾರಿಗೆ ಕೇವಲ 500 ಮೀಟರ್ ದೂರದಲ್ಲಿರುವುದಾಗಿ ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಕೇಂದ್ರದಿಂದ ಕೈಗಾರಿಕೆ ಸ್ಥಾಪಿಸಲು ಅಗತ್ಯ ಭೂಮಿ ನೀಡುತ್ತಿಲ್ಲ ರಾಜ್ಯದ ಯಾವ ಸಚಿವರು ನನಗೆ ಮನವಿ ಮಾಡಿಲ್ಲವೆಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಯವರು ಆರೋಪಿಸುತ್ತಿದ್ದರು.
ಆದರೆ ರಾಜ್ಯ ಸರ್ಕಾರದ ಬೃಹತ್ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ರವರು ಕೇಂದ್ರ ಸಚಿವ ಕುಮಾರಸ್ವಾಮಿ ಯವರಿಗೆ ಅಧಿಕೃತವಾಗಿ ಪತ್ರ ಬರೆದು ತಾವು ಉದ್ದೇಶಿಸಿರುವ ಕೈಗಾರಿಕೆಗೆ ಅಗತ್ಯ ಭೂಮಿ ನೀಡುವುದಾಗಿ ಭರವಸೆ ನೀಡಿದ್ದಾರೆ.
ಆದಕಾರಣ ಆಟೋಮೋಟಿವ್ ರಿಸರ್ಚ್ ಅಸೋಷಿಯನ್ ಆಪ್ ಇಂಡಿಯಾ, ಕೇಂದ್ರ ಸರ್ಕಾರದ ತಂಡ ಮತ್ತು ARAI ತಂಡಗಳು ಜಂಟಿಯಾಗಿ ರಾಜ್ಯಕ್ಕೆ ಬೇಟಿ ನೀಡಿ ಉದ್ದೇಶಿತ ಜಾಗ ಮತ್ತು ಕೈಗಾರಿಕಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳನ್ನು ಭೇಟಿ ಮಾಡಿ ಅಗತ್ಯ ನೆರವು ಪಡೆದುಕೊಳ್ಳಲಿ ಎಂದು ಸಚಿವ ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಇನ್ನಾದರೂ ಕೇಂದ್ರ ಸಚಿವರು ಯಾವುದೇ ಸಬೂಬು ಹೇಳದೆ ಕೇಂದ್ರ ಸರ್ಕಾರದ ಕೈಗಾರಿಕೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುವ ಮೂಲಕ ಮಂಡ್ಯ ಜಿಲ್ಲೆಯ ನಿರುದ್ಯೋಗಿಗಳ ಯುವಕರ ನೆರವಿಗೆ ಮುಂದಾಗಲಿ ಎಂದು ಸಚಿವ ಚಲುವರಾಯಸ್ವಾಮಿ ಮನವಿ ಮಾಡಿದ್ದಾರೆ.

