ಜಲಜೀವನ್ ಮಿಷನ್ ಕಾಮಗಾರಿಗಳ ತನಿಖೆಗೆ ಸಮಿತಿ ರಚನೆ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಲ ಜೀವನ್ ಮಿಷನ್ (ಜೆ.ಜೆ.ಎಂ) ಯೋಜನೆಯಡಿ ಮನೆ ಮನೆಗೂ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ಕಾಮಗಾರಿಗಳ ಅನುಷ್ಠಾನ ಜಿಲ್ಲೆಯಲ್ಲಿ ಸಮರ್ಪಕವಾಗಿಲ್ಲ ಎಂಬ ದೂರುಗಳು ಕೇಳಿಬರುತ್ತಿದ್ದು, ಈ ಕುರಿತು ತನಿಖೆಗೆ ಪರಿಣಿತರ ಸಮಿತಿ ರಚಿಸಿ, ಮೂರು ತಿಂಗಳ ಒಳಗಾಗಿ ವರದಿ ನೀಡುವಂತೆ ಯೋಜನೆ ಸಾಂಖ್ಯಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಜರುಗಿದ ಮುಂದುವರೆದ ಕೆ.ಡಿ.ಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

- Advertisement - 

ಜೆ.ಜೆ.ಎಂ ಕಾಮಗಾರಿಗಳು ಪ್ರಾರಂಭವಾಗಿ ಎರಡು ವರ್ಷಗಳಾದರು ಪೂರ್ಣಗೊಂಡಿಲ್ಲ. ಕೈಗತ್ತಿಕೊಂಡ ಕಾಮಗಾರಿಗಳು ಬಹಳೆಡೆ ಅರ್ಧಕ್ಕೆ ನಿಂತಿವೆ. ಪೈಪ್ ಲೈನ್ ಗೆ ಕಳಪೆ ಸಾಮಗ್ರಿ ಬಳಕೆಯಾಗುತ್ತಿದೆ, ಪೈಪ್‍ಲೈನ್ ಅಳವಡಿಕೆಗಾಗಿ ಅಗೆಯಲಾಗಿರುವ ರಸ್ತೆಗಳನ್ನು ಪೂರ್ವ ಸ್ಥಿತಿಗೆ ತರದೆ, ಜನರು ಹಿಡಿಶಾಪ ಹಾಕುತ್ತಿದ್ದಾರೆ.  ಯೋಜನೆಗೆ ಮೀಸಲಿರಿಸಿದ ಅರ್ಧದಷ್ಟು ಅನುದಾನ ಬಳಕೆಯಾಗಿದೆ. ಆದರೆ ಗುತ್ತಿಗೆದಾರರು ಅರ್ಧಕ್ಕೆ ನಿಲ್ಲಿಸಿದ ಕಾಮಗಾರಿಗಳನ್ನು ಪೂರ್ಣಗೊಳಿಸಲು ಆಸಕ್ತಿ ತೋರುತ್ತಿಲ್ಲ. ಕಾಮಗಾರಿಯಲ್ಲಿ ಗುಣಮಟ್ಟ ಸಹ ಕಾಪಾಡಿಕೊಂಡಿಲ್ಲ. ಮನೆ ಮನೆಗೂ ಶುದ್ಧ ಕುಡಿಯುವ ನೀರು ಸರಬಾಜು ಮಾಡಬೇಕು ಎಂಬ ಸರ್ಕಾರಗಳ ಆಶಯ ನೆನೆಗುದಿಗೆ ಬಿದ್ದಿದೆ.  ಗ್ರಾಮೀಣ ಕುಡಿಯುವ ನೀರು  ಮತ್ತು ನೈರ್ಮಲ್ಯ ಇಲಾಖೆ ಇಂಜಿನಿಯರ್‍ಗಳು ಈ ಕಾಮಗಾರಿಗಳ ಪರಿಶೀಲನೆ ನಡೆಸದೇ ಶೇ.50 ರಷ್ಟು ಮೊತ್ತವನ್ನು ಗುತ್ತಿಗೆದಾರರಿಗೆ ಬಿಡುಗಡೆ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಗುತ್ತಿಗೆದಾರರು ಕಾಮಗಾರಿಗಳನ್ನು ಪೂರ್ಣಗೊಳಿಸಲು ಆಸಕ್ತಿ ತೋರುತ್ತಿಲ್ಲ. ನಿಯಮ ಉಲ್ಲಂಘಿಸಿ ಅನುದಾನವನ್ನು ಬಳಕೆ ಮಾಡಿದ ಅಧಿಕಾರಿಗಳ ವಿರುದ್ಧವೂ ಶಿಸ್ತುಕ್ರಮ ಕೈಗೊಳ್ಳಬೇಕು. ತನಿಖೆ ನಡೆಸಿ ಕಾಮಗಾರಿಗಳ ಅನುಷ್ಠಾನದಲ್ಲಿ ಅವ್ಯವಹಾರ ನಡೆದಿರುವುದು ಕಂಡುಬಂದರೆ, ಸಂಬಂಧಪಟ್ಟ ಅಧಿಕಾರಿಗಳಿಂದಲೇ ನಷ್ಟ ಭರಿಸುವಂತೆ ಹೊಳಲ್ಕೆರೆ ಶಾಸಕ ಡಾ. ಎಂ. ಚಂದ್ರಪ್ಪ ಅವರು ಸಭೆಯಲ್ಲಿ ಒತ್ತಾಯಿಸಿದರು.    

ಇದಕ್ಕೆ ಸ್ಪಂದಿಸಿದ ಸಚಿವರು, ಕೂಡಲೆ ತನಿಖೆಗೆ ತಜ್ಞ ಇಂಜಿನಿಯರ್‍ಗಳು ಹಾಗೂ ಅಧಿಕಾರಿಗಳನ್ನು ಒಳಗೊಂಡಂತೆ ಸಮಿತಿ ರಚಿಸಿ, ಮೂರು ತಿಂಗಳ ಒಳಗಾಗಿ ವರದಿ ಪಡೆದು ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.  
ಜೆ.ಜೆ.ಎಂ ಕಾಮಗಾರಿಗಳ ತನಿಖೆ ನೇಮಿಸುವ ಸಮಿತಿ ಅವಸರವಾಗಿ ವರದಿ ನೀಡುವುದು ಬೇಕಿಲ್ಲ. ಮುಂದಿನ ಕೆ.ಡಿ.ಪಿ ಸಭೆಯ ಒಳಗಾಗಿ ಹಳ್ಳಿ ಹಳ್ಳಿಗಳಿಗೂ ಭೇಟಿ ವಾಸ್ತವ ಪರಿಸ್ಥಿತಿಯನ್ನು ಅಧ್ಯಯನ ಮಾಡಿ ವರದಿ ನೀಡಲಿ ಎಂದು ಚಳ್ಳಕರೆ ಶಾಸಕ ಟಿ.ರಘುಮೂರ್ತಿ ತಿಳಿಸಿದರು.  ಶಾಸಕ ಬಿ.ಜಿ.ಗೋವಿಂದಪ್ಪ ಜೆ.ಜೆ.ಎಂ. ಕಾಮಗಾರಿಗಳ ತನಿಖೆಗೆ ಸಹಮತ ವ್ಯಕ್ತಪಡಿಸಿದರು.
ಜಿಲ್ಲಾ ನಗರಾಭಿವೃದ್ಧಿ ಕೋಶದ ಇಂಜಿನಿಯರ್ ನೇತೃತ್ವದಲ್ಲಿ ಸಮಿತಿ ರಚಿಸಿ ಜೆ.ಜೆ.ಎಂ. ಕಾಮಗಾರಿಗಳ ತನಿಖೆ ನಡೆಸುವುದಾಗಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.

- Advertisement - 

ಆರ್.ಓ. ಘಟಕಗಳ ಹಸ್ತಾಂತರಕ್ಕೆ ತಾಕೀತು:
ಗ್ರಾಮೀಣ ಭಾಗದಲ್ಲಿನ ಆರ್.ಓ. (ಶುದ್ಧ ಕುಡಿಯುವ ನೀರನ) ಘಟಕಗಳನ್ನು ಕೂಡಲೇ ದುರಸ್ಥಿಗೊಳಿಸಿ ಗ್ರಾಮ ಪಂಚಾಯಿತಿಗಳಿಗೆ ಹಸ್ತಾಂತರಿಸುವಂತೆ ಸಚಿವ ಡಿ.ಸುಧಾಕರ್ ತಾಕೀತು ಮಾಡಿದರು.
ಸದ್ಯ ಸುಸ್ಥಿತಿಯಲ್ಲಿ ಇದ್ದು ಕಾರ್ಯನಿರ್ವಹಿಸುತ್ತಿರುವ ಆರ್.ಓ. ಘಟಕಗಳ ಪಟ್ಟಿ ತಯಾರಿಸಿ ಅವುಗಳನ್ನು ಗ್ರಾಮ ಪಂಚಾಯಿತಿಗಳ ನಿರ್ವಹಣೆಗೆ ನೀಡಲು ಜಿಲ್ಲಾ ಪಂಚಾಯಿತಿ ಸಿಇಓ ಅವರು ಕ್ರಮ ವಹಿಸಿ ಕುಡಿಯುವ ನೀರಿನ ಸಮಸ್ಯೆಗಳ ಪರಿಹಾರಕ್ಕೆ ಅಂತ್ಯ ಹಾಡಬೇಕು ಎಂದ ಸಚಿವ ಡಿ.ಸುಧಾಕರ್ ಹೇಳಿದರು.

ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಒಟ್ಟು 1056 ಆರ್.ಓ. ಗಳನ್ನು ಅಳವಡಿಸಲಾಗಿದ್ದು, ಇದರಲ್ಲಿ 226ಕ್ಕೂ ಹೆಚ್ಚು ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ. ಇವುಗಳ ದುರಸ್ಥಿಗೆ ರೂ.6.15 ಕೋಟಿ ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಇಂಜಿಯರ್ ಬಸವನಗೌಡ ಪಾಟೀಲ್ ಮಾಹಿತಿ ನೀಡಿದರು.
ಬಹಳಷ್ಟು ಆರ್.ಓ. ಘಟಕಗಳ ದುರಸ್ಥಿ ಕಾಮಗಾರಿ ಮೊತ್ತ ಬಾಕಿ ಹಾಗೂ ವಿದ್ಯುತ್ ಶುಲ್ಕ ಬಾಕಿ ಉಳಿಸಿಕೊಂಡಿರುವುದರಿಂದ ಗ್ರಾಮ ಪಂಚಾಯಿತಿಗಳು ನಿರ್ವಹಣೆ ಹೊಣಗಾರಿಕೆ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಕೂಡಲೇ ಈ ಕುರಿತು ಸಭೆ ನಡೆಸಿ ಆರ್.ಓ. ಘಟಕಗಳ ಹಸ್ತಾಂತರಕ್ಕೆ ಕ್ರಮ ಕೈಗೊಳ್ಳುವುದಾಗಿ ಜಿ.ಪಂ.ಸಿಇಓ ಡಾ.ಆಕಾಶ್ ತಿಳಿಸಿದರು.

ಸಭೆಗೆ ಗೈರು, ಕರ್ತವ್ಯದಿಂದ ನಿಗಮದ ವ್ಯವಸ್ಥಾಪಕಿ ಬಿಡುಗಡೆಗೆ ಸೂಚನೆ :
ಡಿ. ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಸೇರಿದಂತೆ ಹಿಂದುಳಿದ ವರ್ಗಗಳ 12 ಅಭಿವೃದ್ಧಿ ನಿಗಮಗಳಿಗೂ ಒಬ್ಬರೇ ಅಧಿಕಾರಿ ಇದ್ದು, ಈ ಎಲ್ಲ ನಿಗಮಗಳ ಜಿಲ್ಲಾ ವ್ಯವಸ್ಥಾಪಕರು ಸಭೆಗೆ ಗೈರು ಹಾಜರಾಗಿದ್ದರು.  ಈ ಕುರಿತಂತೆ ವಿಷಯ ಪ್ರಸ್ತಾಪಿಸಿದ ಹೊಸದುರ್ಗ ಶಾಸಕ ಬಿ.ಜಿ. ಗೋವಿಂದಪ್ಪ ಅವರು ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಾರ್ಯವೈಖರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಅವರ ಮೇಲೆ ವಿವಿಧ ಆರೋಪಗಳಿರುವ ಬಗ್ಗೆ ಸಭೆಯ ಗಮನಕ್ಕೆ ತಂದರು.  ಈ ನಿಗಮಗಳ ಜಿಲ್ಲಾ ವ್ಯವಸ್ಥಾಪಕರ ಮೇಲೆ ಸಾಕಷ್ಟು ದೂರುಗಳು ಕೇಳಿ ಬಂದಿವೆ.  ಉದ್ಯೋಗ ಹಾಗೂ ಶಿಕ್ಷಣದ ನೇರಸಾಲ ಯೋಜನೆ, ಹೊಲಿಗೆ ಯಂತ್ರ ವಿತರಣೆ, ಸ್ವಾವಲಂಬಿ ಸಾರಥಿ ಸೇರಿದಂತೆ ಸಹಾಯಧನ ಯೋಜನೆಗಳ ಸಾಧನೆ ಶೂನ್ಯವಿದೆ. ನಿಗಮಗಳ ಪರಿಶೀಲನೆಗೆ ಉತ್ತರಿಸಬೇಕಾದ ಅಧಿಕಾರಿಯೇ ಕೆ.ಡಿ.ಪಿ ಸಭೆಗೆ ಗೈರು ಹಾಜರಾಗಿದ್ದಾರೆ ಎಂದು ಸಚಿವ ಡಿ.ಸುಧಾಕರ್ ತೀವ್ರ ಅಸಮಧಾನ ವ್ಯಕ್ತಪಡಿಸಿದರು.
ವ್ಯವಸ್ಥಾಪಕಿ ಗೈರು ಹಾಜರಿ ಕುರಿತು ನಿಗಮದ ಸಿಬ್ಬಂದಿಗೆ ಸಭೆಯಲ್ಲಿ ಪ್ರಶ್ನಿಸಿದಾಗ, ಅಧಿಕಾರಿಗೆ ಆರೋಗ್ಯ ಸರಿಯಿಲ್ಲ, ಅವರಿಗೆ ಅಪಘಾತವಾಗಿದ್ದು ಚಿಕಿತ್ಸೆಗಾಗಿ ರಜೆ ಪಡೆದಿದ್ದಾರೆ ಎಂದು ತಿಳಿಸಿದರು.  ಕೂಡಲೇ ಸಚಿವ ಡಿ.ಸುಧಾಕರ್ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಮೊಬೈಲ್ ಕರೆ ಮಾಡಿ ಈ ಕುರಿತು ಸ್ಪಷ್ಟನೆ ಕೇಳಿದರು. ಜಿಲ್ಲಾ ವ್ಯವಸ್ಥಾಪಕರು ಅಧಿಕೃತವಾಗಿ ರಜೆ ಪಡೆದಿಲ್ಲ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರು ಉತ್ತರಿಸಿದರು. ಉತ್ತಮವಾಗಿ ಕಾರ್ಯನಿರ್ವಹಿಸದ ಜಿಲ್ಲಾ ವ್ಯವಸ್ಥಾಪಕಿಯನ್ನು ಕೂಡಲೇ ಜಿಲ್ಲೆಯ ಕರ್ತವ್ಯದಿಂದ ಬಿಡುಗಡೆ ಮಾಡುವುದಾಗಿ ಎಂದು ಸಚಿವ ಡಿ.ಸುಧಾಕರ್ ವ್ಯವಸ್ಥಾಪಕ ನಿರ್ದೇಶಕರಿಗೆ ತಿಳಿಸಿದರು.

ಜಿಲ್ಲೆಯ ಎಲ್ಲಾ ಅಭಿವೃದ್ಧಿ ನಿಗಮಗಳ ಅಧಿಕಾರಿಗಳು ಏಜಂಟ್‍ರೊಂದಿಗೆ ಸೇರಿ ಬಡವರ ಜೀವ ಹಿಂಡುತ್ತಿದ್ದಾರೆ. ಸರ್ಕಾರ ಯೋಜನೆಗಳನ್ನು ಸರಿಯಾಗಿ ತಲುಪಿಸುತ್ತಿಲ್ಲ. ಪ್ರತಿಯೊಂದಕ್ಕೂ ರೇಟ್ ಕಾರ್ಡು ಫಿಕ್ಸ್ ಮಾಡಿದ್ದಾರೆ. ಇವರಿಗೆ ಹೇಳುವರು ಕೇಳುವವರು ಯಾರು ಇಲ್ಲದಂತಾಗಿದೆ. ಎಂದು ಶಾಸಕ ಬಿ.ಜಿ.ಗೋವಿಂದಪ್ಪ ನಿಗಮದ ಅಧಿಕಾರಿಗಳ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.  ಕೂಡಲೇ ಜಿಲ್ಲಾಧಿಕಾರಿ ಹಾಗೂ ಸಿಇಓ ಎಚ್ಚೆತ್ತು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಎಲ್ಲ ಅಭಿವೃದ್ಧಿ ನಿಗಮಗಳ ಯೋಜನೆ ಕುರಿತು ಪರಿಶೀಲನೆ ನಡೆಸಬೇಕು. ಅರ್ಹ ಫಲಾನುಭವಿಗಳಿಗೆ ಯೋಜನೆಯ ಲಾಭ ತಲುಪಿಸಬೇಕು ಎಂದರು. ಈ ವೇಳೆ ನಿಗಮಗಳ ಅವ್ಯವಹಾರಕ್ಕೆ ಕಡಿವಾಣ ಹಾಕುವಂತೆ ಶಾಸಕ ಟಿ.ರಘೂಮೂರ್ತಿ ಹಾಗೂ ಡಾ.ಚಂದ್ರಪ್ಪ ದನಿಗೂಡಿಸಿದರು.

ಸಾವೆ, ನವಣೆ, ರಾಗಿ ಖರೀದಿಗೆ ಅ. 01 ರಿಂದ ನೊಂದಣಿ ಪ್ರಾರಂಭ :
ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಸಾಮೆ, ನವಣೆ ಹಾಗೂ ರಾಗಿಯನ್ನು ಖರೀದಿಸಲು ಅ. 01 ರಿಂದ ನೊಂದಣಿ ಪ್ರಾರಂಭವಾಗಲಿದ್ದು, ಅ. 12 ರವರಗೆ ನೊಂದಣಿ ಮಾಡಬಹುದು.  2026 ರ ಜನವರಿ 01 ರಿಂದ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಪ್ರಕ್ರಿಯೆ ಪ್ರಾರಂಭವಾಗಲಿದ್ದು, ಖರೀದಿಯು 2026 ಮಾರ್ಚ್ ಅಂತ್ಯದವರೆಗೂ ಮುಂದುವರೆಯಲಿದೆ ಎಂದು ಆಹಾರ ಇಲಾಖೆ ಜಂಟಿನಿರ್ದೇಶಕ ಸಿದ್ದರಾಮ ಮರಿಯಾಳ್ ಅವರು ಹೇಳಿದರು.  ಹೊಸದುರ್ಗ ಶಾಸಕ ಬಿ.ಜಿ. ಗೋವಿಂದಪ್ಪ ಅವರು ಪ್ರತಿಕ್ರಿಯಿಸಿ, ಈಗಾಗಲೆ ಸಾವೆ ಬೆಳೆಯ ಕಟಾವು ಪ್ರಾರಂಭವಾಗಿದ್ದು, ಶೀಘ್ರ ಖರೀದಿ ಪ್ರಾರಂಭಿಸಬೇಕಿದೆ.  ನಿಗದಿತ ಏಜೆನ್ಸಿಯ ಜೊತೆಗೆ ಸೊಸೈಟಿಗಳ ಮೂಲಕವೂ ಖರೀದಿಗೆ ಕ್ರಮ ವಹಿಸಲು ಸಲಹೆ ನೀಡಿದ್ದೇನೆ.  ಸಾಮೆ ಖರೀದಿ ಪ್ರಕ್ರಿಯೆ ಬೇಗ ಪ್ರಾರಂಭಿಸಲು ಸರ್ಕಾರದಿಂದ ಪರಿಷ್ಕøತ ವೇಳಾಪಟ್ಟಿ ನಿಗದಿಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ ನೀಡಿದರು.  ಈ ಕುರಿತಂತೆ ಅಗತ್ಯ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ತಿಳಿಸಿದರು.

ಅನರ್ಹ ಬಿಪಿಎಲ್ ಪಡಿತರ ಚೀಟಿ ಪರಿವರ್ತನೆಗೆ ಕ್ರಮ :
ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಿಂದಲೂ ನ್ಯಾಯಬೆಲೆ ಅಂಗಡಿಗಳಿಂದ ಪಡಿತರ ಪಡೆಯದಿರುವ 3773 ಪಡಿತರ ಚೀಟಿಗಳನ್ನು ರದ್ದುಪಡಿಸಲು ಕ್ರಮ ಕೈಗೊಳ್ಳಲಾಗಿದೆ.  ಪ್ರಸ್ತುತ ಹೊಸ ಪಡಿತರ ಚೀಟಿಗಾಗಿ 6900 ಅರ್ಜಿಗಳು ಬಾಕಿ ಇವೆ.  1500 ಕ್ಕೂ ಹೆಚ್ಚು ಅನರ್ಹ ಬಿಪಿಎಲ್ ಪಡಿತರ ಚೀಟಿಗಳನ್ನು ಎಪಿಎಲ್ ಕಾರ್ಡ್‍ಗೆ ಪರಿವರ್ತಿಸಲು ಸಹ ಕ್ರಮ ಕೈಗೊಳ್ಳಲಾಗಿದೆ ಎಂದು ಆಹಾರ ಇಲಾಖೆ ಜಂಟಿ ನಿರ್ದೇಶಕ ಸಿದ್ದರಾಮ ಮರಿಯಾಳ್ ಹೇಳಿದರು.  ವಿಧಾನಪರಿಷತ್ ಸದಸ್ಯ ಕೆ.ಎಸ್. ನವೀನ್ ಅವರು ಮಾತನಾಡಿ, ವಿವಿಧ ಜಿಲ್ಲೆಗಳಲ್ಲಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಬೇರೆ ಕಡೆಗಳಿಗೆ ಕಳ್ಳ ಸಾಗಾಣಿಕೆ ಮಾಡಲಾಗುತ್ತಿರುವ ಅಂಶಗಳು ಬೆಳಕಿಗೆ ಬಂದಿವೆ.  ನಮ್ಮ ಜಿಲ್ಲೆಯಲ್ಲಿಯೂ ಇಂತಹ ಪ್ರಕರಣಗಳು ಗಮನಕ್ಕೆ ಬಂದಿವೆಯೇ ಎಂದು ಪ್ರಶ್ನಿಸಿದರು.  ಪ್ರತಿಕ್ರಿಯಿಸಿದ ಆಹಾರ ಇಲಾಖೆ ಜಂಟಿನಿರ್ದೇಶಕರು, ಜಿಲ್ಲೆಯಲ್ಲಿ ಈ ವರ್ಷ 07 ಪ್ರಕರಣಗಳನ್ನು ದಾಖಲಿಸಿದ್ದು, 01 ನ್ಯಾಯಬೆಲೆ ಅಂಗಡಿಯ ಪರವಾನಗಿ ಅಮಾನತು ಮಾಡಲಾಗಿದೆ ಎಂದರು.  ಜಿಲ್ಲೆಯಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಣಿಕೆ ಕುರಿತಂತೆ ಹೆಚ್ಚಿನ ನಿಗಾ ವಹಿಸಿ, ಕ್ರಮ ಜರುಗಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಸೂಚನೆ ನೀಡಿದರು.

ಕಾರ್ಮಿಕ ಇಲಾಖೆಯಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಿ :
ಕಾರ್ಮಿಕ ಇಲಾಖೆಯಲ್ಲಿ ವಿವಿಧ ಯೋಜನೆಗಳ ಸವಲತ್ತು ಪಡೆಯಲು ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ.  ಮಧ್ಯವರ್ತಿಗಳ ಮೂಲಕ ಸಲ್ಲಿಸುವ ಅರ್ಜಿಗಳು ಬೇಗ ಮಾನ್ಯ ಪಡೆಯುತ್ತಿದ್ದು, ನೇರವಾಗಿ ಸಲ್ಲಿಸುವ ಅರ್ಜಿಗಳನ್ನು ವಿನಾಕಾರಣ ನಿರ್ಲಕ್ಷಿಸಲಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿವೆ ಎಂದು ಹೊಸದುರ್ಗ ಶಾಸಕ ಬಿ.ಜಿ. ಗೋವಿಂದಪ್ಪ ಆರೋಪಿಸಿದರು.  ಕಾರ್ಮಿಕರ ಆರೋಗ್ಯ ತಪಾಸಣೆ ಯೋಜನೆಯಡಿ ಚಿತ್ರದುರ್ಗ ಜಿಲ್ಲೆಯಲ್ಲಿಯೇ ಹೆಚ್ಚಿನ ಅಕ್ರಮವಾಗಿ ಎಂಬುದಾಗಿ ದೂರುಗಳು ಬಂದಿವೆ ಎಂದು ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಮತ್ತು ವಿಧಾನಪರಿಷತ್ ಸದಸ್ಯ ಕೆ.ಎಸ್. ನವೀನ್ ಸಭೆಯ ಗಮನಕ್ಕೆ ತಂದರು.  ಕಾರ್ಮಿಕ ಅಧಿಕಾರಿ ಮಾತನಾಡಿ, ಕಾರ್ಮಿಕರ ಆರೋಗ್ಯ ತಪಾಸಣೆಗೆ ಜಿಲ್ಲೆಗೆ 03 ವಾಹನಗಳು ಬಂದಿವೆ.  ಈ ಕುರಿತಂತೆ ರಾಜ್ಯ ಮಟ್ಟದಲ್ಲಿಯೇ ಟೆಂಡರ್ ಪ್ರಕ್ರಿಯೆ ಮಾಡಲಾಗಿದೆ.  ಜಿಲ್ಲೆಯಲ್ಲಿ 61818 ಕಾರ್ಮಿಕರು ಇದ್ದು, ಈವರೆಗೆ 3205 ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಲಾಗಿದೆ ಎಂದರು.  ಜಿಲ್ಲೆಯಲ್ಲಿ ಎಷ್ಟು ಜನರಿಗೆ ತಪಾಸಣೆ ಮಾಡಲಾಗಿದೆ, ಎಷ್ಟು ಜನರಿಗೆ ಉನ್ನತ ಚಿಕಿತ್ಸೆಗೆ ಶಿಫಾರಸು ಮಾಡಲಾಗಿದೆ ಎಂಬುದರ ಬಗ್ಗೆ ಸಮಗ್ರ ಮಾಹಿತಿ ಸಲ್ಲಿಸುವಂತೆ ಸಚಿವರು ಕಾರ್ಮಿಕ ಅಧಿಕಾರಿಗೆ ಸೂಚನೆ ನೀಡಿದರು.

ಸಾಲ ನೀಡಲು ಬ್ಯಾಂಕ್‍ಗಳ ನಿರ್ಲಕ್ಷ್ಯ :
ಸರ್ಕಾರವು ಜನಸಾಮಾನ್ಯರ ಆರ್ಥಿಕ ಪ್ರಗತಿಗಾಗಿ ವಿವಿಧ ನಿಗಮಗಳ ಮೂಲಕ ಹಲವು ಯೋಜನೆಗಳಡಿ ಫಲಾನುಭವಿಗಳನ್ನು ಆಯ್ಕೆ ಮಾಡಿ, ಸಾಲ ಒದಗಿಸಲು ಬ್ಯಾಂಕ್‍ಗಳಿಗೆ ಶಿಫಾರಸು ಮಾಡುತ್ತಿವೆ.  ಆದರೆ ಬ್ಯಾಂಕ್‍ಗಳು ಸಿಬಿಲ್ ಸ್ಕೋರ್  ನೆಪವೊಡ್ಡಿ, ಫಲಾನುಭವಿಗಳಿಗೆ ಸಾಲ ಮಂಜೂರು ಮಾಡದೆ ನಿರ್ಲಕ್ಷ್ಯ ಧೋರಣೆ ತೋರುತ್ತಿವೆ.  ಲಾನುಭವಿಗಳು ಸರ್ಕಾರಿ ಕಚೇರಿ, ಬ್ಯಾಂಕ್‍ಗಳಿಗೆ ಅಲೆದಾಡುವುದು ನಿಂತಿಲ್ಲ.  ಸರ್ಕಾರದ ಉದ್ದೇಶ ಸಫಲವಾಗುತ್ತಿಲ್ಲ.  ಈ ಕುರಿತಂತೆ ಎಲ್ಲ ಬ್ಯಾಂಕ್‍ಗಳಿಗೆ ಸರಿಯಾದ ಮಾಹಿತಿ ನೀಡಿ, ಅವರಿಗೆ ಸರಿದಾರಿಗೆ ತರುವ ಕಾರ್ಯ ಆಗಬೇಕು ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲ ಶಾಸಕರುಗಳು ಒಕ್ಕೊರಲ ಮನವಿ ಮಾಡಿದರು.  ಸ್ಪಂದಿಸಿದ ಜಿಲ್ಲಾ ಉಸ್ತುವಾರಿ ಸಚಿವರು, ಈ ಕುರಿತಂತೆ ಎಲ್ಲ ಬ್ಯಾಂಕ್ ಅಧಿಕಾರಿಗಳ ಸಭೆ ಏರ್ಪಡಿಸಿ, ಅವರಿಗೆ ಸರಿಯಾದ ತಿಳುವಳಿಕೆ ನೀಡಬೇಕು.  ಸಹಕರಿಸದ ಬ್ಯಾಂಕ್‍ಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿ.ಪಂ. ಸಿಇಒ ಹಾಗೂ ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಸೂಚನೆ ನೀಡಿದರು.        

ಸಭೆಯಲ್ಲಿ ಹೊಸದುರ್ಗ ಶಾಸಕ ಬಿ.ಜಿ. ಗೋವಿಂದಪ್ಪ, ಹೊಳಲ್ಕೆರೆ ಶಾಸಕ ಡಾ. ಎಂ. ಚಂದ್ರಪ್ಪ, ಚಳ್ಳಕರೆ ಶಾಸಕ ಟಿ. ರಘುಮೂರ್ತಿ, ವಿಧಾನಪರಿಷತ್ ಸದಸ್ಯ ಕೆ.ಎಸ್. ನವೀನ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಆರ್. ಶಿವಣ್ಣ, ಜಿಲ್ಲಾಧಿಕಾರಿ ಟಿ. ವೆಂಕಟೇಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಎಸ್. ಆಕಾಶ್, ಜಿಲ್ಲಾ ಪೊಲೀಸ್ ಅಧೀಕ್ಷಕ ರಂಜಿತ್ ಕುಮಾರ ಬಂಡಾರು, ಕೆಡಿಪಿ ನಾಮನಿರ್ದೇಶಿತ ಸದಸ್ಯರುಗಳಾದ ತಿಮ್ಮಯ್ಯ, ದೀಪಿಕಾ ಸತೀಶ್, ರಂಗಸ್ವಾಮಿ, ರಾಮಸ್ವಾಮಿ, ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ಜಿ.ಪಂ. ಉಪಕಾರ್ಯದರ್ಶಿ ಡಾ. ರಂಗಸ್ವಾಮಿ, ಮುಖ್ಯ ಯೋಜನಾಧಿಕಾರಿ ಗಾಯತ್ರಿ, ಉಪವಿಭಾಗಾಧಿಕಾರಿ ಮೆಹಬೂಬ್ ಜಿಲಾನಿ ಖುರೇಶಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Share This Article
error: Content is protected !!
";