ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗದಲ್ಲಿ ಜಂಬೂ ದ್ವೀಪ ಕರ್ನಾಟಕ ಸಂಸ್ಥೆಯ ಅಡಿಯಲ್ಲಿ ಮಹಾತ್ಮಾ ಫುಲೆ ಸ್ಪರ್ಧಾತ್ಮಕ ಪರೀಕ್ಷೆಗಳ ಮತ್ತು ಕೌಶಲ್ಯಾಭಿವೃದ್ಧಿ ತರಬೇತಿ ಹಾಗೂ ಅಧ್ಯಯನ ಕೇಂದ್ರದ ಕಟ್ಟಡ ನಿರ್ಮಾಣದ ಭೂಮಿ ಪೂಜೆ ಕಾರ್ಯವನ್ನು ಇಂಗಳದಾಳ್ ಸರ್ವೆ ನಂ.89 ಕುರುಮರಡಿಕೆರೆ ರಸ್ತೆ ವಿ.ಆರ್.ಎಲ್.ಸಮೂಹ ಸಂಸ್ಥೆಗಳ ಪಕ್ಕದ ಸಂಸ್ಥೆಯ ಜಾಗದಲ್ಲಿ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಬೋಧಿಸತ್ವ ಬಂತೇಜಿಯವರು ಗೌತಮ ಬುದ್ಧ ಮಹಾತ್ಮಾ ಫುಲೆ ಹಾಗೂ ಬಾಬಾ ಸಾಹೇಬ್ ಡಾ ಬಿ.ಆರ್.ಅಂಬೇಡ್ಕರ್ ರವರಿಗೆ ಪುಷ್ಪಾರ್ಚನೆ ಮಾಡುವುದರ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿದರು. ಆದಿ ಜಾಂಬವ ಅಭಿವೃದ್ದಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್ ಭೂಮಿ ಪೂಜೆಗೆ ಚಾಲನೆ ನೀಡಿ ಶಂಕುಸ್ಥಾಪನೆ ನೆರವೇರಿಸಿದರು.
ನಂತರ ಮಾತನಾಡಿದ ಜಿ.ಎಸ್.ಮಂಜುನಾಥ್, ಸ್ಪರ್ಧಾತ್ಮಕ ಪರೀಕ್ಷೆಗಳ ಮತ್ತು ಕೌಶಲ್ಯಾಭಿವೃದ್ಧಿ ತರಬೇತಿಗಾಗಿ ಮಹಾತ್ಮಾ ಫುಲೆ ಹೆಸರಲ್ಲಿ ಒಂದು ಅಧ್ಯಯನ ಕೇಂದ್ರ ಸ್ಥಾಪನೆ ಮಾಡಿರುವುದು ನಿಜಕ್ಕೂ ಅಭಿನಂದನಾರ್ಹ ಕೆಲಸ. ಇದು ಈ ಭಾಗದಲ್ಲಿ ಅಗತ್ಯವಾಗಿ ಅವಶ್ಯಕವಾಗಿತ್ತು.
ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗೆ ಮಕ್ಕಳು ತರಬೇತಿ ಪಡೆಯಬೇಕಾಗಿದ್ದಲ್ಲಿ ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಬಿಜಾಪುರ, ಮೈಸೂರು ಮುಂತಾದ ಕಡೆಗಳಲ್ಲಿ ಹೋಗಬೇಕಾಗಿತ್ತು ಎಂದರು. ಮಧ್ಯ ಕರ್ನಾಟಕದ ಮಕ್ಕಳಿಗೆ ಅದರಲ್ಲೂ ಹಿಂದುಳಿದ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಮಕ್ಕಳಿಗೆ ಅಭ್ಯಾಸ ಮಾಡಲು ಇದೊಂದು ದೊಡ್ಡ ಉಪಕಾರವಾಗುತ್ತದೆ ಎಂದರು.
ಸಂಸ್ಥೆಯ ಸದಸ್ಯರುಗಳು ಇಂತಹ ಮಹತ್ವದ ವಿಚಾರ ಆಲೋಚನೆ ಮಾಡಿ ಚಿತ್ರದುರ್ಗದಲ್ಲಿ ಕೇಂದ್ರ ಕಚೇರಿ ಮಾಡಿ ಇಲ್ಲಿ ತರಬೇತಿಗೆ ಆಯೋಜಿಸಿ ಈಗಾಗಲೆ ಮೂರು ತರಬೇತಿ ಶಿಬಿರಗಳನ್ನು ನಡೆಸಿ ಸುಮಾರು 250 ಜನ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಯಾವುದೇ ಉದ್ಯೋಗ ಪಡೆಯುವಲ್ಲಿ ಸ್ಪರ್ದಾತ್ಮಕ ಮನೋಭಾವ ಬೆಳೆಸಿ ಯಶಸ್ವಿಗೆ ಕಾರಣರಾದ ಈ ಸಂಸ್ಥೆಗೆ ನಾನೂ ಕೂಡ ನನ್ನ ಆದಾಯದ ಪ್ರತಿಶತ ಶೇ.20 ರಷ್ಟು ಹಣ ನೀಡುವುದಾಗಿ ಜಿ.ಎಸ್.ಮಂಜುನಾಥ್ ಘೋಶಿಸಿದರು.
ಸಂಸ್ಥೆಯ ಸಂಸ್ಥಾಪಕ ಹಾಗೂ ಗೌರವಾಧ್ಯಕ್ಷ ಹಿರಿಯ ಕೆ.ಎ.ಎಸ್ ಅಧಿಕಾರಿ ಹೊ.ಬ.ನಾಗಸಿದ್ದಾರ್ಥ ಮಾತನಾಡಿ, ಈ ಹಿಂದೆ ಚಾಮರಾಜ ನಗರ, ಮೈಸೂರು, ಬೆಂಗಳೂರು, ತುಮಕೂರು ಮುಂತಾದ ಕಡೆಗಳಲ್ಲಿ ಸಭೆ ನಡೆಸಿದ್ದೇವೆ.
ಆದರೆ ಚಿತ್ರದುರ್ಗದಲ್ಲಿ ನಮ್ಮ ಅಧ್ಯಯನ ಕೇಂದ್ರದ ಸಹಕಾರ್ಯದರ್ಶಿ ಶ್ರೀನಿವಾಸಮೂರ್ತಿ ಹತ್ತು ಗುಂಟೆ ಜಮೀನನ್ನು ಗುರುತಿಸಿದ್ದು ಅದು ಅಧ್ಯಯನ ಕೇಂದ್ರಕ್ಕೆ ಸೂಕ್ತವೆನಿಸಿದ್ದರಿಂದ ಇಲ್ಲಿಯೇ ಪ್ರಾರಂಭಿಸಲು ನಿರ್ಧರಿಸಲಾಯಿತು. ಇಲ್ಲಿಯ ಭೌಗೋಳಿಕ ಸನ್ನಿವೇಶ ಕೂಡ ಈ ಕೇಂದ್ರದಲ್ಲಿ ಚೆನ್ನಾಗಿಯೆ ಇದೆ. ಬೆಟ್ಟದ ಸಾಲಿನಲ್ಲಿ ಉತ್ತಮ ವಾತಾವರಣ ಇರುವುದರಿಂದ ಕಲಿಯುವ ಮಕ್ಕಳಿಗೆ ಚೆನ್ನಾಗಿರುತ್ತದೆ ಎಂದರು.
ಬಹಳ ಜನಸಂಖ್ಯೆಯಲ್ಲಿ ಹಿಂದುಳಿದವರೆ ಇರುವ ಈ ಪ್ರದೇಶದ ಮಕ್ಕಳಿಗೆ ಇದೊಂದು ವರದಾನವಾಗಲಿ. ಇದೊಂದು ಹೆಮ್ಮರವಾಗಿ ಬೆಳೆಯಲಿ ಎಂದು ಆಶಯ ವ್ಯಕ್ತಪಡಿಸಿದರು.
ಅಧ್ಯಯನ ಕೇಂದ್ರ ರೂಪುಗೊಳ್ಳಲು ರಾಜ್ಯಾದ್ಯಂತ ಅನೇಕ ಸಮಾಜಮುಖಿ ಮನಸ್ಸುಗಳು ತಮ್ಮ ಶಕ್ತ್ಯಾನುಸಾರ ತನು ಮನ ಧನ ಸಹಾಯ ಮಾಡಿ ಈ ಸ್ಥಳಕೊಂಡುಕೊಳ್ಳುವಲ್ಲಿ ಶ್ರಮಿಸಿದ್ದಾರೆ. ಮುಂದೆಯೂ ಸಮಾಜಮುಖಿ ಸೇವಾ ಮನೋಭಾವ ಇರುವ ಅನೇಕ ಜನರ ನೇತೃತ್ವದಲ್ಲಿ ಈ ಸಂಸ್ಥೆ ಮುಂದೆ ಸಾಗಬೇಕಿದೆ.
ಯುವ ಜನ ಈ ನಿಟ್ಟಿನಲ್ಲಿ ಯೋಚಿಸಿ ನಮ್ಮ ನಂತರ ನಮ್ಮ ಮರಣ ಪ್ರಮಾಣ ಪತ್ರ ಮಾತ್ರ ಉಳಿಸದೆ, ನಮ್ಮ ಕುರುಹುಗಾಗಿ ಸಮಾಜದ ಅಭಿವೃದ್ಧಿಗೆ ಏನನ್ನಾದರೂ ಉಳಿಸಿ ಹೋಗಬೇಕಿದೆ ಎಂದು ತಿಳಿಸಿದರು. ಸಭೆಯಲ್ಲಿ ಹಿರಿಯ ಕೆಎಎಸ್ ವಾಣಿಜ್ಯ ತೆರಿಗೆ ಅಧಿಕಾರಿ ಕರುಣಾಕರ್,
ಖ್ಯಾತ ವೈದ್ಯಾಧಿಕಾರಿ ಸುರೇಶ್ ಕನಕಣ್ಣನವರ್, ಜಂಬೂದ್ವೀಪ ಕರ್ನಾಟಕ ಸಂಸ್ಥೆಯ ರಾಜ್ಯಾಧ್ಯಕ್ಷ ಆರ್.ರಾಮಣ್ಣ, ಕಾರ್ಯದರ್ಶಿ ರಾಮಕೃಷ್ಣ ಬೂದಿಹಾಳ್, ಕೋಶಾಧ್ಯಕ್ಷ ಸುರೇಶ್, ಸ್ಥಳೀಯ ಗ್ರಾಮ ಪಂಚಾತಿ ಸದಸ್ಯ ಪ್ರಕಾಶ್, ಗ್ರಾಪಂ ಮಾಜಿ ಅಧ್ಯಕ್ಷ ರಘು, ಮಹಾತ್ಮಾ ಫುಲೆ ಅಧ್ಯಯನ ಕೇಂದ್ರದ ಅಧ್ಯಕ್ಷ ಡಿ.ಟಿ.ಜಗನ್ನಾಥ್,
ಉಪಾಧ್ಯಕ್ಷ ಬಿ.ರುದ್ರಮುನಿ, ಗೌರವಾಧ್ಯಕ್ಷ ಎನ್.ಪಾತಪ್ಪ, ಕಾರ್ಯದರ್ಶಿ ಕೆ.ಸಿದ್ದೇಶ್, ಸಹಕಾರ್ದರ್ಶಿ ಟಿ.ಶ್ರೀನಿವಾಸಮೂರ್ತಿ, ಕೋಶಾಧ್ಯಕ್ಷ ರಾಮಶೇಖರ.ಜಿ, ಉಪಾಧ್ಯಕ್ಷ ಹನುಮಂತಪ್ಪ ಇನ್ನು ಮುಂತಾದವರು ಹಾಜರಿದ್ದರು.