ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್ ನಾಯಕರಾದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಸೇರಿದಂತೆ ಇತರರ ಕುರಿತು ಸುಳ್ಳು ಹಾಗೂ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿರುವ ಆರೋಪದಡಿ ಕರ್ನಾಟಕ ಬಿಜೆಪಿಯ ಎಕ್ಸ್ ಖಾತೆ ವಿರುದ್ಧ ದೂರು ದಾಖಲಾಗಿದೆ.
ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮಿತಿ (ಕೆಪಿಸಿಸಿ)ಯ ವಕೀಲರ ಘಟಕ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದು ಎನ್ಸಿಆರ್ (ಗಂಭೀರವಲ್ಲದ) ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಜನವರಿ 29ರಂದು “ಕರ್ನಾಟಕವನ್ನು ಹಗಲಿರುಳು ಲೂಟಿ ಹೊಡೆಯುತ್ತಿರುವ ಸ್ಕ್ಯಾಮ್ ಸಾಮ್ರಾಜ್ಯದ ಅಸಲಿ ಕಥೆ ಎಂಬ ಶೀರ್ಷಿಕೆಯಡಿ ಬಿಜೆಪಿ ಕರ್ನಾಟಕ ಎಕ್ಸ್ ಖಾತೆಯಲ್ಲಿ ಪೋಟೋವೊಂದನ್ನು ಪೋಸ್ಟ್ ಮಾಡಲಾಗಿತ್ತು. ಯಾವುದೇ ಸಾಕ್ಷ್ಯಾಧಾರಗಳಿಲ್ಲದೇ ಈ ರೀತಿಯ ತಿರುಚಿದ ಫೋಟೋ ಹಂಚಿಕೊಳ್ಳುವ ಮೂಲಕ ಸಾಂವಿಧಾನಿಕ ಹುದ್ದೆಯಲ್ಲಿರುವ ನಾಯಕರ ಫೋಟೋಗಳನ್ನು ದುರುದ್ದೇಶಪೂರ್ವಕವಾಗಿ ಬಳಸಿಕೊಳ್ಳಲಾಗಿದೆ.
ಇದರಿಂದ ವ್ಯಕ್ತಿತ್ವ ಹರಣ ಹಾಗೂ ಸಮಾಜದಲ್ಲಿ ಗೊಂದಲ, ಅಶಾಂತಿ ಸೃಷ್ಟಿಗೆ ಯತ್ನಿಸಲಾಗಿದೆ. ಆದ್ದರಿಂದ ಬಿಜೆಪಿ ಕರ್ನಾಟಕದ ಎಕ್ಸ್ ಖಾತೆಯ ನಿರ್ವಾಹಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೆಪಿಸಿಸಿಯ ವಕೀಲರ ಘಟಕ ದೂರು ನೀಡಿದೆ. ಸದ್ಯ ದೂರು ಸ್ವೀಕರಿಸಿರುವ ಪೊಲೀಸರು ಎನ್ಸಿಆರ್ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಧಾನಿ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕುತ್ತಿರುವ ವ್ಯಕ್ತಿಯ ವಿರುದ್ಧ ಬಿಜೆಪಿ ಕೂಡ ಈ ಹಿಂದೆ ಸೈಬರ್ ಠಾಣೆಗೆ ದೂರು ನೀಡಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಜೆಪಿ ನಿಯೋಗ ದೂರು ನೀಡಿತ್ತು.
ಟಿ.ಎಫ್.ಹಾದಿಮನಿ ಎಂಬ ವ್ಯಕ್ತಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಅವಮಾನ ಆಗುವಂತೆ ಎಡಿಟ್ ಮಾಡಿ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. ಹಾದಿಮನಿ ಅವರ ವಿರುದ್ಧ ಕೇಸ್ ದಾಖಲಿಸಿ ಬಂಧಿಸಬೇಕೆಂದು ಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್ ಆಗ್ರಹಿಸಿದ್ದರು.
ದೂರು ನೀಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ್ದ ಅವರು, ಮೋದಿಯವರ ಬಗ್ಗೆ ಅತ್ಯಂತ ಅವಹೇಳನಕಾರಿಯಾಗಿರುವ ಪೋಸ್ಟ್ ಅನ್ನು ಜಾಲತಾಣದಲ್ಲಿ ಟಿ.ಎಫ್.ಹಾದಿಮನಿ ಹರಿಬಿಟ್ಟಿದ್ದಾರೆ.
ಮೋದಿ ಅವರ ಬಗ್ಗೆ ಕೋಟ್ಯಂತರ ಜನರು ಗೌರವ – ಅಭಿಮಾನ ಹೊಂದಿದ್ದು, ಅವರ ಮನಸ್ಸಿಗೆ ಈ ಪೋಸ್ಟ್ ನೋಡಿ ನೋವಾಗಿದೆ. ಮೋದಿಯವರಿಗೆ ಕೆಟ್ಟ ಹೆಸರು ತರುವುದು ದೊಡ್ಡ ತಪ್ಪು. ಮೋದಿಯವರ ಚಾರಿತ್ರ್ಯವಧೆ ಮಾಡುವ ಹಾದಿಮನಿ ಮತ್ತು ಇತರರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಯಶವಂತಪುರದ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದೇವೆ. ಎಫ್ಐಆರ್ ಮಾಡುವುದಾಗಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ ಎಂದು ಹೇಳಿದ್ದರು.

