ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಾಲ್ಮೀಕಿ, ಮುಡಾ ಹಗರಣ ಬಿಟ್ಟು ಬಿಡದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾಡುತ್ತಿರುವ ಬೆನ್ನಲ್ಲೇ ಮತ್ತೊಂದು ಸಂಕಷ್ಟ ಎದುರಾಗಿದೆ. ಬೆಂಗಳೂರಿನ ಅರ್ಕಾವತಿ ಬಡಾವಣೆಯ ನಿವೇಶನಗಳ ಹಂಚಿಕೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ನಿವೇಶನ ಖರೀದಿದಾರರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬಿಡಿಎ ಅಧಿಕಾರಿಗಳ ವಿರುದ್ಧ ರಾಜ್ಯಪಾಲರಿಗೆ ದಾಖಲೆ ಸಮೇತ ದೂರು ನೀಡಿದ್ದಾರೆ.
ನಿವೇಶನದ ಮಾಲೀಕರಾದ ಎಂ.ಎಸ್.ಶಿವಲಿಂಗಪ್ಪ, ಎಂ.ಚಂದ್ರಶೇಖರನ್, ಕೆ.ರಾಮಚಂದ್ರಯ್ಯ ಮತ್ತು ಡಾ.ವೆಂಕಟಕೃಷ್ಣಪ್ಪ ಅವರು ರಾಜ್ಯಪಾಲರಿಗೆ ದೂರು ನೀಡಿದ್ದಾರೆ.
ನಿವೇಶನ ಖರೀದಿದಾರರು ನೀಡಿರುವ ದೂರು ಪತ್ರದಲ್ಲಿ, ಥಣಿಸಂದ್ರ, ಸಂಪಿಗೆಹಳ್ಳಿ, ಜಕ್ಕೂರು ಕೆ.ನಾರಾಯಣಪುರ ಹಾಗೂ 16 ಹಳ್ಳಿಗಳೂ ಸೇರಿ ಸುಮಾರು 800 ಎಕರೆ ಪ್ರದೇಶದಲ್ಲಿ ಬಿಡಿಎ ವತಿಯಿಂದ ಅರ್ಕಾವತಿ ಬಡಾವಣೆ ನಿರ್ಮಾಣ ಮಾಡವಾಗಿತ್ತು.
ನಿವೇಶನಕ್ಕಾಗಿ 2004ರಲ್ಲಿ ಅರ್ಜಿ ಆಹ್ವಾನಿಸಿದ್ದ ಬಿಡಿಎಗೆ ಒಂದು ಲಕ್ಷಕ್ಕೂ ಹೆಚ್ಚು ಅರ್ಜಿಗಳನ್ನು ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದು ಆ ಪೈಕಿ 20 ಸಾವಿರ ಅರ್ಜಿದಾರರನ್ನು ಪರಿಗಣಿಸಲಾಗಿತ್ತು. 12 ಸಾವಿರ ಅರ್ಜಿದಾರರಿಗೆ ಬಿಡಿಎ ನಿವೇಶನ ನೋಂದಣಿ ಮಾಡಿ ಕ್ರಯಪತ್ರ ಕೊಡಲಾಗಿತ್ತು.
ಬಿಡಿಎಯಿಂದ 2006ರಲ್ಲಿ ನೂರಾರು ಮಂದಿಗೆನಿವೇಶನ ಹಂಚಿಕೆ ಮಾಡಲಾಗಿತ್ತು. 30/40 ನಿವೇಶನಕ್ಕೆ ಎರಡೂವರೆ ಲಕ್ಷ, 40/60 ನಿವೇಶನಕ್ಕೆ ನಾಲ್ಕೂವರೆ ಲಕ್ಷ ಹಣ ಪಡೆದು ನಿವೇಶನಗಳನ್ನು ಹಂಚಿಕೆ ಮಾಡಿತ್ತು. ನೋಂದಣಿ ಪತ್ರ ಹಾಗೂ ಕ್ರಯಪತ್ರ ಪಡೆದ ನಿವೇಶನದಾರರು ಕನಿಷ್ಠ ಹತ್ತು ವರ್ಷ ನಿವೇಶನ ಮಾರಾಟ ಮಾಡುವಂತಿರರಲ್ಲ. 2014ರಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರ ಅರ್ಕಾವತಿ ಲೇಔಟ್ನಲ್ಲಿ ನೀಡಲಾಗಿದ್ದ ನಿವೇಶನ ಹಿಂಪಡೆದಿತ್ತು ಎಂದು ದೂರುದಾರರು ಆಕ್ಷೇಪಿಸಿ ದೂರು ನೀಡಿದ್ದಾರೆ. ಅಲ್ಲದೆ ನಿವೇಶನ ಸಂಬಂಧ ತೆರಿಗೆ ಪಾವತಿಸಲಾಗಿದೆ.
2014ರಿಂದ ಇದುವರೆಗೂ ನಿವೇಶನದಾರರು ಹಂಚಿಕೆಯಾಗಿ ರಿಜಿಸ್ಟರ್ ಆಗಿದ್ದ ಸೈಟ್ ಹಿಂಪಡೆಯಲಾಗಿದೆ. ಮಾಲೀಕರಿಂದ ವಶಪಡಿಸಿಕೊಂಡ ಜಾಗವನ್ನು ಅವರಿಗೂ ಬಿಡಿಎ ಹಿಂದಿರುಗಿಸಿಲ್ಲ. ಹಂಚಿಕೆ ಮಾಡಿ ನೋಂದಣಿ ಮಾಡಿದ ತಮ್ಮ ನಿವೇಶನಗಳಲ್ಲಿ ಮನೆ ನಿರ್ಮಾಣಕ್ಕೆ ಅನುವು ಮಾಡುತ್ತಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ಅರ್ಕಾವತಿಯಲ್ಲಿ ಸೈಟಿಲ್ಲ ಕೆಂಪೇಗೌಡ ಲೇಔಟ್ನಲ್ಲಿ ನೋಡೋಣ ಎಂದು ಬಿಡಿಎ ಅಧಿಕಾರಿಗಳು ಅತ್ಯಂತ ನಿರ್ಲಕ್ಷ್ಯದಿಂದ ಸಬೂಬಿನ ಉತ್ತರ ನೀಡುತ್ತಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಅರ್ಕಾವತಿ ಲೇಔಟ್ನಲ್ಲಿ ಭೂಗಳ್ಳರು ಅಕ್ರಮ ಎಸಗಿರುವುದು ಕಂಡುಬಂದಿದ್ದು, ವಶಪಡಿಸಿಕೊಂಡಿರುವ ಜಾಗ ಭೂಗಳ್ಳರ ಪಾಲಾಗುತ್ತಿದೆ. ಇದರಿಂದ ಅಸಲಿ ಅರ್ಜಿದಾರ ಫಲಾನುಭವಿಗಳಿಗೆ ಮತ್ತು ಹಂಚಿಕೆ ಮಾಡಲಾದ ನಿವೇಶನದಾರರಿಗೆ ಅನ್ಯಾಯವಾಗಿದೆ ಎಂದು ದೂರುದಾರರು ರಾಜ್ಯಪಾಲರಿಗೆ ಬರೆದಿರುವ ದೂರಿನಲ್ಲಿ ತಿಳಿಸಿದ್ದಾರೆ.
ಅರ್ಕಾವತಿ ಬಡಾವಣೆ ನಿರ್ಮಾಣಕ್ಕಾಗಿ ಭೂ ಸ್ವಾಧೀನ ಮಾಡಲಾಗಿದ್ದ ಕೆಲ ಭೂ ಮಾಲೀಕರು ತಮ್ಮ ಜಮೀನು ಸ್ವಾಧೀನಪಡಿಸಿಕೊಳ್ಳುವುದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿ ದಾವೆ ಹೂಡಿದ್ದರು. ಆದರೆ ಘನ ನ್ಯಾಯಾಲಯವು ಭೂಸ್ವಾಧೀನ ಆದೇಶವನ್ನು ಎತ್ತಿಹಿಡಿದಿತ್ತು. ಆದರೆ, ಕೆಲವು ನಿಯತಾಂಕಗಳನ್ನು ಅನುಸರಿಸಿ ಭೂ ಮಾಲೀಕರ ಅರ್ಜಿಗಳನ್ನು ಪರಿಗಣಿಸಲು ಬಿಡಿಎಗೆ ನಿರ್ದೇಶನ ನೀಡಿತ್ತು. ನಂತರ ನೊಂದ ಕೆಲ ಭೂ ಮಾಲೀಕರು ಸುಪ್ರೀಂ ಕೋರ್ಟ್‌ಮೊರೆ ಹೋಗಿದ್ದು ಸುಪ್ರೀಂ ಕೋರ್ಟ್ ಕೂಡ ಹೈಕೋರ್ಟ್ ತೀರ್ಪನ್ನು ಎತ್ತಿಹಿಡಿದು ಆದೇಶಿಸಿತ್ತು.
ಬಿಡಿಎ ಮತ್ತು ಸರ್ಕಾರವು ನ್ಯಾಯಾಲಯದ ಆದೇಶಗಳನ್ನು ತಪ್ಪಾಗಿ ಅರ್ಥೈಸಿಸಿ ನಿವೇಶನ ಹಂಚಿಕೆಯಲ್ಲಿ ಅವ್ಯವಹಾರ ನಡೆಸಿದೆ. ಕಾನೂನಾತ್ಮಕ ತೊಡಕುಗಳನ್ನು ನಿವಾರಿಸಲು ಸಿದ್ದರಾಮಯ್ಯ ಅವರು ‘ರೀ ಡೂ’ ಅಂತಿಮ ಅಧಿಸೂಚನೆ ಹೊರಡಿಸಿದ್ದು, ಇದರ ಆಧಾರದ ಮೇಲೆ ಬಡಾವಣೆ ನಿರ್ಮಿಸಲು ಸ್ವಾಧೀನಪಡಿಸಿಕೊಂಡ ಹಲವು ಜಮೀನುಗಳನ್ನು ಹಂಚಿಕೆ ಮಾಡಿದ್ದಾರೆ. ಕೆಲ ಮಧ್ಯವರ್ತಿಗಳು, ಬಿಡಿಎ ಅಧಿಕಾರಿಗಳು ಅಕ್ರಮದಲ್ಲಿ ಶಾಮೀಲಾಗಿ ಲಾಭ ಮಾಡಿಕೊಂಡಿದ್ದಾರೆ ಎಂದು ದೂರುದಾರರು ಆಕ್ಷೇಪಿಸಿದ್ದಾರೆ.
ಅರ್ಕಾವತಿ ಬಡಾವಣೆಯಲ್ಲಿ ಸಿಎಂ ಸೇರಿ ಬಿಡಿಎ ಅಧಿಕಾರಿಗಳು ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ. ಅರ್ಕಾವತಿ ಬಡಾವಣೆಯಲ್ಲಿ ನಡೆದಿರುವ ಅಕ್ರಮಗಳ ತನಿಖೆಗೆ ನ್ಯಾಯಮೂರ್ತಿ ಎಚ್.ಎಸ್.ಕೆಂಪಣ್ಣ ಅವರ ನೇತೃತ್ವದಲ್ಲಿ ಸರ್ಕಾರ ಆಯೋಗ ರಚಿಸಿತ್ತು.
ಸರ್ಕಾರ ಎಲ್ಲ ಆರೋಪಿಗಳನ್ನು ರಕ್ಷಿಸುವ ಸಲುವಾಗಿ ವರದಿಯನ್ನು ಇನ್ನೂ ಬಹಿರಂಗಪಡಿಸಿಲ್ಲ. ಈ ಅಕ್ರಮ ಎಸಗಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ದೂರುದಾರರು ರಾಜ್ಯಪಾಲರಿಗೆ ದೂರು ಸಲ್ಲಿಸಿ ಅಗತ್ಯ ಕಾನೂನು ಕ್ರಮ ವಹಿಸುವಂತೆ ಮನವಿ ಮಾಡಿದ್ದಾರೆ.