ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯನ ವಿರುದ್ಧ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಕೆಯಾಗಿದೆ.
ದೇವನಹಳ್ಳಿಯ ”ಏರೋಸ್ಪೇಸ್ ಪಾರ್ಕ್‌ನಲ್ಲಿನ ಐದು ಎಕರೆ ಭೂಮಿಯನ್ನು ಕೆಐಎಡಿಬಿಯಿಂದ ಸಿಎ ಸೈಟ್ ಹೆಸರಿನಲ್ಲಿ ಮಲ್ಲಿಕಾರ್ಜುನ ಖರ್ಗೆ ಮತ್ತು ಇವರ ಅಳಿಯ ಸಿದ್ದಾರ್ಥ ವಿಹಾರ ಟ್ರಸ್ಟ್ಗೆ ಮಂಜೂರು ಮಾಡಿಕೊಂಡಿರುವ ಆರೋಪ ಕೇಳಿ ಬಂದಿತ್ತು. ಏರೋಸ್ಪೇಸ್, ರಿಸರ್ಚ್ ಇತ್ಯಾದಿಗಳಲ್ಲಿ ಅನುಭವವಿಲ್ಲದಿದ್ದರೂ ಭರ್ತಿ ಮಾಡದ ಅರ್ಜಿ ಸಲ್ಲಿಸಿ ಭೂಮಿ ಮಂಜೂರು ಪಡೆದಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಮತ್ತು ಇವರ ಅಳಿಯನ ವಿರುದ್ಧ ವಿಜಯ ರಾಘವನ್ ಎಂಬುವರು ಖಾಸಗಿ ದೂರು ನೀಡಿರುವ ಘಟನೆ ಜರುಗಿದೆ.
ಇದರ ಜೊತೆಯಲ್ಲಿ 2014ರಲ್ಲಿ ಬಿಟಿಎಂ 4ನೇ ಸ್ಟೇಜ್ನ ಎರಡನೇ ಬ್ಲಾಕ್ನಲ್ಲಿ 2 ಎಕರೆ ಬಿಡಿಎ ವ್ಯಾಪ್ತಿಯ ಸಿಎ ನಿವೇಶನವನ್ನು ಪರಭಾರೆ ಮಾಡಿಕೊಳ್ಳಲಾಗಿದೆ. ಜೊತೆಗೆ ದಲಿತರೆಂದು ಶೇಕಡಾ 50ರಷ್ಟು ಸಬ್ಸಿಡಿ ಪಡೆದಿದ್ದಾರೆ ಎಂದು ಮತ್ತೊಂದು ದೂರು ದಾಖಲಿಸಲಾಗಿದೆ.
ಈಗಾಗಲೇ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಭೂಮಿ ಹಂಚಿಕೆ ಪ್ರಕರಣ ರಾಜ್ಯಪಾಲರ ಅಂಗಳ ತಲುಪಿತ್ತು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಕಾನೂನು ತಜ್ಞರಿಂದ ಮಾಹಿತಿ ಪಡೆದಿದ್ದರು.
ತಜ್ಞರ ಅಭಿಪ್ರಾಯವೇನು?
ರಾಜ್ಯಪಾಲರಿಗೆ ಸಲ್ಲಿಕೆ ಮಾಡಿರುವ ಅಭಿಪ್ರಾಯದಲ್ಲಿ ತರಾತುರಿಯಲ್ಲಿ ಭೂಮಿ ಹಂಚಿಕೆ ಮಾಡಿರುವ ಬಗ್ಗೆ ತಜ್ಞರು ಸಂಶಯ ವ್ಯಕ್ತಪಡಿಸಿದ್ದರು. ಅರ್ಜಿ ಸಲ್ಲಿಕೆಯಾದ ಎರಡೇ ದಿನಗಳಲ್ಲಿ ಭೂ ಹಂಚಿಕೆ ಪ್ರಕ್ರಿಯೆ ಮಾಡಿರುವುದರಿಂದ ಪ್ರಶ್ನೆ ಮೂಡಿದೆ ಎಂದಿದ್ದರು.
ನಿವೇಶನ ವಾಪಸ್ -
ಕೆಐಎಡಿಬಿಯಿಂದ ಅಕ್ರಮವಾಗಿ ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಟ್ರಸ್ಟ್ ನಿವೇಶನ ಪಡೆದಿದೆ ಎಂದು ವಿಪಕ್ಷಗಳು ಆರೋಪ ಮಾಡಿದ್ದರ ಬೆನ್ನಲ್ಲೇ ರಾಹುಲ್, ಮಲ್ಲಿಕಾರ್ಜುನ ಖರ್ಗೆ ಅವರು ಕೆಐಎಡಿಬಿಗೆ ಪತ್ರ ಬರೆದು ಕೌಶಲ ಅಭಿವೃದ್ಧಿ ತರಬೇತಿಗಾಗಿ ನಿವೇಶನ ಪಡೆಯಲಾಗಿತ್ತು. ಆದರೆ, ಅನಗತ್ಯ ವಿವಾದ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಸ್ವಯಂಪ್ರೇರಣೆಯಿಂದ ನಿವೇಶನವನ್ನು ವಾಪಸ್ ನೀಡಲಾಗುತ್ತಿದೆ ಎಂದು ಹೇಳಿಕೆ ನೀಡಿದ್ದನ್ನು ಸ್ಮರಿಸಬಹುದಾಗಿದೆ.

