ಕೋಟ್ಯಂತರ ರೂ.ಅವ್ಯವಹಾರ ಶಂಕೆ, ಜಿಲ್ಲಾಧಿಕಾರಿ ದಿವ್ಯಪ್ರಭು ಸೇರಿ ಐವರ ವಿರುದ್ಧ ಲೋಕಾಯುಕ್ತಕ್ಕೆ ದೂರು

News Desk

ಚಂದ್ರವಳ್ಳಿ ನ್ಯೂಸ್, ಧಾರವಾಡ:
ಗ್ಯಾರಂಟಿ ಯೋಜನೆಗಳ ಸಮಾವೇಶಕ್ಕೆ ಕೋಟ್ಯಂತರ ರೂ. ಅವ್ಯವಹಾರ ನಡೆದಿದ್ದು ಜಿಲ್ಲಾಧಿಕಾರಿ ಸೇರಿ ಐವರ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ.
ಆರ್‌ಟಿಐ ಕಾರ್ಯಕರ್ತ ಮಾಬುಸಾಬ್ ಯರಗುಪ್ಪಿ ಈ ಕುರಿತು ಲೋಕಾಯುಕ್ತಕ್ಕೆ ದೂರು ನೀಡಿ
ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.

ಮಾಬುಸಾಬ್ ಯರಗುಪ್ಪಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗ್ಯಾರಂಟಿ ಯೋಜನೆಗಳ ಸಮಾವೇಶದಲ್ಲಿ ಸಮಿತಿಯವರು ಸುಳ್ಳು ದಾಖಲೆ ಸೃಷ್ಟಿಸಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆಸಿದ್ದು ಮಾಹಿತಿ ಹಕ್ಕು ಕಾಯ್ದೆ ಅಡಿ ಪಡೆಯಲಾದ ಮಾಹಿತಿಯಿಂದ ಪ್ರಕರಣ ಬೆಳಕಿಗೆ ಬಂದಿದೆ ಎಂದು ಅವರು ತಿಳಿಸಿದರು.

ಮಾಹಿತಿ ಹಕ್ಕಿನಡಿ ಪಡೆದಿರುವ ದಾಖಲೆಗಳಿಂದ ಅವ್ಯವಹಾರವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು ಲೋಕಾಯುಕ್ತಕ್ಕೆ ಸಮಗ್ರ ತನಿಖೆ ಮಾಡುವಂತೆ  ದಾಖಲೆಗಳನ್ನು ಲಗತ್ತಿಸಿ ದೂರು ನೀಡಿರುವುದಾಗಿ ಯರಗುಪ್ಪಿ ಸ್ಪಷ್ಟಪಡಿಸಿದರು.

ಪ್ರಕರಣ ಏನು?:
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳನ್ನು ಧಾರವಾಡ ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಯ ಫಲಾನುಭವಿಗಳ ಐದು ಸಮಾವೇಶಗಳನ್ನು ಸರ್ಕಾರದಿಂದ ನಡೆಸಲಾಗಿದೆ.

ಫೆ. 3ರಂದು ಹುಬ್ಬಳ್ಳಿ ರೈಲ್ವೆ ಮೈದಾನ, ಫೆ. 5ರಂದು ಧಾರಾವಾಡ ಕರ್ನಾಟಕ ಕಾಲೇಜು ಮೈದಾನ, ಫೆ. 24ರಂದು ನವಲಗುಂದದ ಮಾಡೆಲ್ ಹೈಸ್ಕೂಲ್ ಮೈದಾನ, ಮಾ. 9ರಂದು ಕುಂದಗೋಳ ಹಾಗೂ ಮಾ.11ರಂದು ಕಲಘಟಗಿಯಲ್ಲಿ ಸರ್ಕಾರದ ವತಿಯಿಂದ ಸಮಾವೇಶ ಏರ್ಪಡಿಸಲಾಗಿತ್ತು.

ಧಾರವಾಡ ಜಿಲ್ಲೆಯಲ್ಲಿ ನಡೆದ ಐದು ಸಮಾವೇಶಗಳ ಉಸ್ತುವಾರಿಯನ್ನು ಜಿಲ್ಲಾಧಿಕಾರಿ ದಿವ್ಯಪ್ರಭು ವಹಿಸಿದ್ದು, ಲೆಕ್ಕಪತ್ರದಲ್ಲಿ ಅವ್ಯವಹಾರ ಆಗಿದ್ದು ಕಂಡು ಬಂದಿದೆ. ಹೀಗಾಗಿ ಲೋಕಾಯುಕ್ತಕ್ಕೆ ದೂರು ನೀಡಲು ಮುಖ್ಯ ಕಾರಣ ಎಂದು ಅವರು ತಿಳಿಸಿದರು.

ಧಾರವಾಡ ಜಿಲ್ಲಾಧಿಕಾರಿ ದಿವ್ಯಪ್ರಭು, ಅಪರ ಜಿಲ್ಲಾಧಿಕಾರಿ ಸಿ.ಡಿ ಗೀತಾ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಡಾ.ಈಶ್ವರ ಉಳ್ಳಾಗಡ್ಡಿ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ವಿಜಯಕುಮಾರ, ಮಹಾನಗರ ಪಾಲಿಕೆ ಮುಖ್ಯ ಲೆಕ್ಕಾಧಿಕಾರಿ ವಿಶ್ವನಾಥ ವಿರುದ್ಧ ಯರಗುಪ್ಪಿ ಅವರು ಲೋಕಾಯುಕ್ತಕ್ಕೆ ದೂರು ನೀಡಿ ದಾಖಲು ಮಾಡಲಾಗಿದೆ.

ಎಷ್ಟು ಖರ್ಚು ಪಟ್ಟಿ:
ನವಲಗುಂದದಲ್ಲಿ ನಡೆದ ಸಮಾವೇಶಕ್ಕೆ ಉಪಹಾರ
, ಬಸ್ ವ್ಯವಸ್ಥೆ ಹಾಗೂ ಸೌಂಡ್ ಸಿಸ್ಟಂಗಾಗಿ 87,93,004, ಧಾರವಾಡಲ್ಲಿ ನಡೆದ ಸಮಾವೇಶಕ್ಕೆ  1,37,50,133, ಹುಬ್ಬಳ್ಳಿಯಲ್ಲಿ ನಡೆದ ಸಮಾವೇಶದಲ್ಲಿ ಉಪಹಾರ, ಸೌಂಡ್ ಸಿಸ್ಟಂ ಹಾಗೂ ಬಸ್ ವ್ಯವಸ್ಥೆಗಾಗಿ 1,24,20,041, ಕಲಘಟಗಿಯ ಸಮಾವೇಶಕ್ಕೆ 57,26,400, ಕುಂದಗೋಳದಲ್ಲಿ ನಡೆದ ಸಮಾವೇಶಕ್ಕೆ 54,26,400 ಖರ್ಚಾಗಿದೆ ಎಂದು ದಾಖಲೆಗಳು ಹೇಳುತ್ತವೆ.

ವ್ಯತ್ಯಾಸ:

ಬಿಲ್ ತೆಗೆಯಲು ಲಗತ್ತಿಸಿರುವ ದಾಖಲೆಗಳಲ್ಲಿ ಸಮಾವೇಶ ನಡೆದ ದಿನಾಂಕ, ಬಿಲ್‌ನಲ್ಲಿ ನಮೂದಿಸಿರುವ ದಿನಾಂಕಗಳಲ್ಲಿ ವ್ಯತ್ಯಾಸವಾಗಿದೆ. ಜತೆಗೆ ಹೋಟೆಲ್‌ನ ಜಿಎಸ್‌ಟಿ ನಂಬರ್ ಕೂಡ ಬಿಲ್‌ನಲ್ಲಿ ನಮೂದಾಗಿಲ್ಲ. ಸಾರ್ವ ಜನಿಕರ ದುಡ್ಡನ್ನು ಅವ್ಯವಹಾರ ಮಾಡಲಾಗಿದೆ.

ಈ ಕುರಿತು ಲೋಕಾಯುಕ್ತದಿಂದ ತನಿಖೆ ನಡೆಸಬೇಕು. ಅಂದಾಗ ಮಾತ್ರ ಸತ್ಯಾಸತ್ಯತೆ ಹೊರಬೀಳಲಿದೆ. ಈ ಹಿನ್ನೆಲೆಯಲ್ಲಿ ಈ ಕುರಿತು ದೂರು ದಾಖಲಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಮಲ್ಲಿಕಾರ್ಜುನ ಸ್ವಾಮಿ ಮಠಪತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

- Advertisement -  - Advertisement - 
Share This Article
error: Content is protected !!
";