ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರ ವಿರುದ್ಧ ಲೋಕಾಯುಕ್ತಕ್ಕೆ ಮತ್ತೊಂದು ದೂರು ಸಲ್ಲಿರೆಯಾಗಿದೆ.
ಅಬಕಾರಿ ಸನ್ನದುಗಳ ಹಂಚಿಕೆಯಲ್ಲಿ ಬಯಲಾಗಿರುವ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ಲಕ್ಷ್ಮೀನಾರಾಯಣ್ ಅವರು ಲೋಕಾಯುಕ್ತಕ್ಕೆ ದೂರು ನೀಡಿ ಸಮಗ್ರ ತನಿಖೆ ಮಾಡುವಂತೆ ಒತ್ತಾಯಿಸಿದ್ದಾರೆ.
ಅಬಕಾರಿ ಉಪ ಆಯುಕ್ತ (ಡಿಸಿ) ಜಗದೀಶ್‌ನಾಯ್ಕ್ ಅವರು ಲಂಚಕ್ಕೆ ಬೇಡಿಕೆಯಿಟ್ಟ ಪ್ರಕರಣದಲ್ಲಿ ಸಚಿವರ ಪಾತ್ರದ ಕುರಿತು ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಸಹಿತ ದಾಖಲೆಗಳನ್ನು ದೂರುದಾರ ಲಕ್ಷ್ಮೀನಾರಾಯಣ್ ಅವರು ಲೋಕಾಯುಕ್ತಕ್ಕೆ ಸಲ್ಲಿಕೆ ಮಾಡಿದ್ದಾರೆ.
ಮಾಧ್ಯಮದವರೊಂದಿಗೆ ದೂರು ಸಲ್ಲಿಸಿದ ಬಳಿಕ ಲಕ್ಷ್ಮೀನಾರಾಯಣ್ ಮಾತನಾಡಿ, ಲೋಕಾಯುಕ್ತರು ದಾಳಿ ಮಾಡಿ ಟ್ರ್ಯಾಪ್ ಮಾಡಿದಾಗ ಮೂವರ ಅಧಿಕಾರಿಗಳ ಬಂಧನವಾಗಿದೆ. ಅಬಕಾರಿ ಮಂತ್ರಿಯವರಿಗೆ ಎಷ್ಟು ಹಣ ಕೊಡಬೇಕಿದೆ ಎಂದು ಅಬಕಾರಿ ಡಿಸಿಯವರು ಬಹಿರಂಗವಾಗಿ ಪ್ರಸ್ತಾಪಿಸಿದ್ದರು. ಆದ್ದರಿಂದ ಮಂತ್ರಿಯವರ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳುವಂತೆ ದೂರು ನೀಡಿದ್ದೇವೆ ಎಂದು ಅವರು ತಿಳಿಸಿದರು.
ನಾನು ಸರ್ಕಾರಕ್ಕೆ ಪಾವತಿಸಬೇಕಿರುವ ಎಲ್ಲಾ ಶುಲ್ಕವನ್ನು ಪಾವತಿಸಿದ್ದರೂ ಸಹ ಲಂಚಕ್ಕೆ ಬೇಡಿಕೆಯಿಟ್ಟು, ಪರವಾನಗಿಯನ್ನ ಕೊಟ್ಟಿರಲಿಲ್ಲ. ಟ್ರ್ಯಾಪ್ ಆಗುವ ಐದು ನಿಮಿಷಗಳಿಗೂ ಮುಂಚೆ ಡಿಸಿ ಮಾತಾಡಿರುವ ಆಡಿಯೋ ನನ್ನ ಬಳಿ ಇದೆ. ಆ ಆಡಿಯೋ ಸೇರಿದಂತೆ ಸೂಕ್ತ ದಾಖಲೆಗಳನ್ನ ಲೋಕಾಯುಕ್ತ ಎಸ್‌ಪಿಯವರಿಗೆ ನೀಡಿದ್ದೇನೆ. ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಒಂದು ವೇಳೆ ಕ್ರಮ ತೆಗೆದುಕೊಳ್ಳದಿದ್ದರೆ, ಬೇರೆ ಕಾನೂನು ಮಾರ್ಗಗಳ ಬಗ್ಗೆ ಪರಿಶೀಲಿಸುತ್ತೇವೆ ಎಂದು ದೂರುದಾರರು ತಿಳಿಸಿದರು.
ಛಲವಾದಿ ನಾರಾಯಣಸ್ವಾಮಿ ಮತ್ತು ವಿಪಕ್ಷ ನಾಯಕ ಅಶೋಕ್ ಅವರು ಜಂಟಿ ಮಾಧ್ಯಮಗೋಷ್ಠಿ ನಡೆಸಿ, ಅಬಕಾರಿ ಇಲಾಖೆಗೆ ವರ್ಷದಿಂದ ವರ್ಷಕ್ಕೆ ಕಲೆಕ್ಷನ್ ಟಾರ್ಗೆಟ್ ಕೊಡುತ್ತಿದ್ದರು. ಅದರ ಪರಿಣಾಮ ಸನ್ನದುಗಳು ಅಬಕಾರಿ ಇಲಾಖೆಯಲ್ಲಿ ಹರಾಜು ಆಗುತ್ತಿದೆ. ಲೋಕಾಯುಕ್ತ ಅಧಿಕಾರಿಗಳು ದೊಡ್ಡ ತಿಮಿಂಗಿಲ ಬಂಧಿಸಿದ್ದಾರೆ. ಒಂದೇ ಒಂದು ಸನ್ನದಿಗೆ 2.30 ಕೋಟಿ ರೂ. ಲಂಚ ಕೇಳಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಅಬಕಾರಿ ಇಲಾಖೆಯು ಆರ್ಥಿಕ ಇಲಾಖೆಯಡಿ ಬರುತ್ತದೆ. ಅಬಕಾರಿ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಸಿದ್ದರಾಮಯ್ಯ ನೇರ ಕಾರಣ ಎಂದು ಅವರು ಆರೋಪಿಸಿದ್ದರು.
ಇವರೆಲ್ಲ ನಕಲಿ ಗಾಂಧಿಗಳು, ಗಾಂಧಿ ಹೆಸರು ಹೇಳಲು ನೈತಿಕತೆ ಇಲ್ಲ. ಗಾಂಧಿಯವರ ಬಗ್ಗೆ ಮಾತಾಡ್ತಾರೆ?, ಎಲ್ಲಿದೆ ಆದರ್ಶ? ಜನರನ್ನು ಕುಡಿಸಿ ಕುಡಿಸಿ ಹಾಳು ಮಾಡುತ್ತಿದ್ದಾರೆ. ಇನ್ನೊಂದು ಕಡೆ ಬೆಂಗಳೂರನ್ನು ನಶೆಯಲ್ಲಿ ಮುಳುಗಿಸಿದ್ದಾರೆ. ಕಳ್ಳ ಕಾಂಗ್ರೆಸಿಗರು ಒಂದು ಕಡೆ ಕುಡಿಸೋದು, ಇನ್ನೊಂದು ಕಡೆ ವಸೂಲಿ. ಅಬಕಾರಿ ಮಂತ್ರಿ ತಿಮ್ಮಾಪುರ ಒಂದು ಕ್ಷಣವೂಅಧಿಕಾರದಲ್ಲಿ ಇರಬಾರದು, ರಾಜೀನಾಮೆ ಕೊಡಬೇಕು. ಇಲ್ಲವೆಂದರೆ ಮಂತ್ರಿಗಳನ್ನು ಸಂಪುಟದಿಂದ ಸಿಎಂ ತೆಗೆಯಲಿ ಎಂದು ಅವರು ಒತ್ತಾಯಿಸಿದ್ದರು.
ಅಬಕಾರಿ ಡಿಸಿ ಜಗದೀಶ್ ನಾಯ್ಕ್ ಎ1 ಖದೀಮ, ಸೂಪರಿಂಟೆಂಡೆಂಟ್ ತಮ್ಮಣ್ಣ ಮಿನಿ ಖದೀಮ, ಲಕ್ಕಪ್ಪ ಗಣಿ ಹೆಸರಲ್ಲೇ ಗಣಿ ಇದೆ. ಮೂವರೂ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ ಎಂದು ಅವರು ಟೀಕಿಸಿದರು.
ಸಿಎಲ್-7 ಒಟ್ಟು 750 ಲೈಸೆನ್ಸ್ ಕೊಡುತ್ತಿದ್ದಾರೆ. ಪ್ರತಿ ಸಿಎಲ್7ಗೆ 1.5 ಕೋಟಿ ರೂ. ಲಂಚ, 650 ಸಿಎಲ್-2 ಸನ್ನದುಗಳು 1.5 ಕೋಟಿ ರೂ.ಗೆ ಹರಾಜು, ಒಟ್ಟು 950 ಕೋಟಿ ಲಂಚ, 1 ಕೋಟಿಗೆ ಸಿಎಲ್-9 ಕೊಡುತ್ತಿದ್ದಾರೆ, ಒಟ್ಟು 92 ಕೋಟಿ, ಮೈಕ್ರೋಬ್ರೆವರಿಗಳಿಗೆ ಅತೀ ಹೆಚ್ಚು ಲಂಚ ಕೊಡಬೇಕು. 1 ಮೈಕ್ರೋಬ್ರೆವರಿಗೆ 2.5 ಕೋಟಿ ರೂ., ಅಂತಹ 550 ಮೈಕ್ರೋಬ್ರೆವರಿಗಳಿವೆ ಎಂದು ಅವರು ವಿವಿರಿಸಿದ್ದರು.

