ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಹೊಸಕೋಟೆ ಮೂಲದ ವಕೀಲ ಎಸ್.ಪಿ ಮುನಿರಾಜು ಮೇಲೆ ಜಿಲ್ಲಾಧಿಕಾರಿ ಎ.ಬಿ ಬಸವರಾಜು ಅವರ ಮುಂದೆಯೇ ಹಲ್ಲೆಗೆ ಯತ್ನ ನಡೆಸಿ, ಪ್ರಾಣ ಬೆದರಿಕೆ ಹಾಕಿರುವವರ ವಿರುದ್ಧ ದೂರು ನೀಡಿದ್ದರು ಪೊಲೀಸರು ಆರೋಪಿತರನ್ನು ಬಂಧಿಸದೇ ಇರುವ ಕ್ರಮ ಖಂಡನೀಯ ಎಂದು ದೊಡ್ಡಬಳ್ಳಾಪುರ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ರವಿ ಮಾವಿನಕುಂಟೆ ಹೇಳಿದರು.
ನಗರದ ತಾಲ್ಲೂಕು ವಕೀಲರ ಸಂಘದಲ್ಲಿ ನಡೆದ ವಕೀಲರ ಸಭೆಯಲ್ಲಿ ಮಾತನಾಡಿದ ಅವರು, ವಕೀಲರ ಮೇಲಿನ ಹಲ್ಲೆ ಯತ್ನ, ಬೆದರಿಕೆ ಇಡೀ ಘಟನೆ ಜಿಲ್ಲಾಧಿಕಾರಿ ಮುಂದೆಯೇ ನಡೆದಿದೆ. ಇದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಪೊಲೀಸರಿಗೆ ಸೂಚಿಸಬೇಕು ಎಂದರು.
ಈ ಪ್ರಕರಣ ವಕೀಲ ಸಮೂಹಕ್ಕೆ ಭೀತಿಯುಂಟು ಮಾಡಿದೆ. ಇದು ಅತ್ಯಂತ ನೋವಿನ ಸಂಗತಿ. ಈ ಪ್ರಕರಣ ಕುರಿತು ವಿಶ್ವನಾಥಪುರ ಠಾಣೆಯಲ್ಲಿ ದೂರು ದಾಖಲಾಗಿದ್ದರೂ ಆರೋಪಿತರ ಬಂಧನ ಮಾಡಿಲ್ಲ. ವಕೀಲರ ರಕ್ಷಣ ಕಾಯ್ದೆ ಇದ್ದರೂ ಉಪಯೋಗವಿಲ್ಲದಂತಾಗಿದೆ. ಪ್ರಕರಣದ ಆರೋಪಿಯನ್ನು ಶೀಘ್ರ ಬಂಧಿಸಿ ಕಾನೂನು ಕ್ರಮ ಕೈಗೊಳ್ಳದಿದ್ದರೆ ಕೋರ್ಟ್ ಕಲಾಪಗಳನ್ನು ಬಹಿಷ್ಕರಿಸಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ನಂತರ ಅಖಿಲ ಭಾರತ ವಕೀಲರ ಒಕ್ಕೂಟದ ಸಂಚಾಲಕ ಎಸ್.ರುದ್ರಾರಾಧ್ಯ ಮಾತನಾಡಿ, ಮಹೇಂದ್ರ ಎಂಬಾತ ವಕೀಲ ಎಸ್.ಪಿ ಮುನಿರಾಜು ಅವರಿಗೆ ಡಿಸಿ ಎದುರೇ ಬೆದರಿಕೆ ಹಾಕಿದ್ದಾನೆ. ಇದನ್ನು ಗಮನಿಸಿದ ಡಿಸಿ ಸುಮ್ಮನೆ ಇದ್ದಾರೆ. ಬೆದರಿಕೆ ಹಾಕಿದ ವ್ಯಕ್ತಿಯ ಮೇಲೆ ಸೂಕ್ತ ಕ್ರಮ ಕೈಗೊಳ್ಳದ ಜಿಲ್ಲಾಧಿಕಾರಿ ನಡೆಯನ್ನು ವಕೀಲರ ಸಂಘ ಹಾಗೂ ಅಖಿಲ ಭಾರತ ವಕೀಲರ ಒಕ್ಕೂಟ ತೀವ್ರವಾಗಿ ಖಂಡಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎ.ಕೃಷ್ಣ ಮೂರ್ತಿ ಖಜಾಂಚಿ ಮುನಿರಾಜ್, ರೇಣುಕಾರಾಧ್ಯ ಹಾಗು ವಕೀಲರ ಸಂಘದ ಪದಾಧಿಕಾರಿಗಳು ಹಾಜರಿದ್ದರು.

