ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಮ್ಮ ಪಕ್ಷದ ಸುಳ್ಯ ಕ್ಷೇತ್ರದ ಶಾಸಕರು, ದಲಿತ ಸಮುದಾಯಗಳ ಧ್ವನಿಯಾಗಿರುವ ಭಾಗೀರಥಿ ಮುರುಳ್ಯ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಮಾನಕರ ಪೋಸ್ಟ್ ಹಾಕಿರುವುದರ ವಿರುದ್ಧ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಮೌನವಾಗಿರುವುದೇಕೆ? ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪರಿಶಿಷ್ಟ ಜಾತಿಯ ಸಮುದಾಯದಿಂದ ಬಂದ ಒಬ್ಬ ಮಹಿಳಾ ಜನಪ್ರತಿನಿಧಿಯ ವ್ಯಕ್ತಿತ್ವಕ್ಕೆ, ಘನತೆಗೆ ಕುಂದು ತರುವಂತಹ ಪ್ರಕರಣ ನಡೆದಿದ್ದರೂ ರಾಜ್ಯ ಸರ್ಕಾರದ ಕಣ್ಣು ಮುಚ್ಚಿ ಕುಳಿತಿದೆಯೇ? ಮಹಿಳೆಯರ ಗೌರವ ಮತ್ತು ಶಾಸಕರ ಘನತೆಗೆ ಕುಂದು ತರುವಂತಹ ಈ ಘಟನೆಯನ್ನು ವಿಜಯೇಂದ್ರ ತೀವ್ರವಾಗಿ ಖಂಡಿಸಿದ್ದಾರೆ.
ಗೃಹ ಇಲಾಖೆ ತಕ್ಷಣವೇ ಈ ಕೃತ್ಯದ ಹಿಂದಿರುವ ವಿಕೃತ ಮನಸ್ಸುಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತೇನೆ.
ಹುಬ್ಬಳ್ಳಿಯಲ್ಲಿ ನಮ್ಮ ಪಕ್ಷದ ಮಹಿಳಾ ಕಾರ್ಯಕರ್ತೆಯ ಮೇಲೆ ಬಲಪ್ರಯೋಗ ಮಾಡಿ, ಬಂಧಿಸುವಲ್ಲಿ ತೋರಿದ ಅತಿವೇಗ, ಸುಳ್ಯದ ಶಾಸಕರ ವಿರುದ್ಧ ವಿಕೃತ ಮನಸ್ಸುಗಳನ್ನು ಬಂಧಿಸುವಲ್ಲಿ ಗೃಹ ಇಲಾಖೆಗೆ ಏಕೆ ಇಲ್ಲ? ಮಹಿಳೆಯರ ಘನತೆಗಿಂತ ರಾಜಕೀಯ ದ್ವೇಷವೇ ಈ ಕಾಂಗ್ರೆಸ್ ಸರ್ಕಾರಕ್ಕೆ ಮುಖ್ಯವಾಗಿರುವುದು ನಾಡಿನ ದುರ್ದೈವ.
ಕಾಂಗ್ರೆಸ್ ಸರ್ಕಾರದ ದುರಾಡಳಿತ, ರಾಜಕೀಯ ದ್ವೇಷ, ಓಟ್ ಬ್ಯಾಂಕ್ ತುಷ್ಟೀಕರಣಗಳಿಂದ ರಾಜ್ಯದಲ್ಲಿ ಅರಾಜಕತೆಯ ವಾತಾವರಣ ನಿರ್ಮಾಣವಾಗಿದೆ. ವಿರೋಧ ಪಕ್ಷಗಳ ವಿರುದ್ಧ ಯಾರು, ಏನು ಬೇಕಾದರೂ ಮಾಡಬಹುದು, ದುಷ್ಕರ್ಮಿಗಳಿಗೆ ಕಾನೂನನ ಭಯವೇ ಇಲ್ಲದಂತಹ ಪರಿಸ್ಥಿತಿ ಉಂಟಾಗಿದೆ.
ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ, ಅಧಿಕಾರ ಶಾಶ್ವತವಲ್ಲ, ತನ್ನ ಎಲ್ಲ ಕುಕೃತ್ಯಗಳಿಗೆ ಕಾಂಗ್ರೆಸ್ ಶೀಘ್ರವೇ ಬೆಲೆ ತೆರಲಿದೆ. ಕಾಂಗ್ರೆಸ್ ಸರ್ಕಾರದ ದಮನಕಾರಿ ಪ್ರವೃತ್ತಿಗಳ ವಿರುದ್ಧ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ವಿಜಯೇಂದ್ರ ಎಚ್ಚರಿಸಿದ್ದಾರೆ.

