ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ತೊಗರಿ ಬೆಳೆ ಸಮೀಕ್ಷೆಯಲ್ಲಿ ಪಾಲ್ಗೊಳ್ಳದೆ ನಿರ್ಲಕ್ಷ್ಯ ತೋರಿದ ವಿಮಾ ಕಂಪನಿ ಪ್ರತಿನಿಧಿಗಳ ಧೋರಣೆಗೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತೀವ್ರವಾಗಿ ಖಂಡನೆ ವ್ಯಕ್ತಪಡಿಸಿ, ಕೂಡಲೇ ತೊಗರಿ ಬೆಳದ ರೈತರಿಗೆ ಮಧ್ಯಂತರ ಪರಿಹಾರ ನೀಡಲು ಶಿಫಾರಸ್ಸು ಮಾಡುವಂತೆ ತಾಕೀತು ಮಾಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಈ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಚಳ್ಳಕೆರೆ ತಾಲ್ಲೂಕಿನಲ್ಲಿ ಆಗಸ್ಟ್, ಸೆಪ್ಟಂಬರ್, ಅಕ್ಟೋಬರ್ ತಿಂಗಳಿನಲ್ಲಿ ವಾಡಿಕೆ ಮಳೆಗಿಂತ ಕಡಿಮೆ ಮಳೆಯಾದ ಪರಿಣಾಮ ತೊಗರಿ ಬೆಳೆಯಲ್ಲಿ ಹೂ ಕಟ್ಟುವಿಕೆ ನಿಂತು ಹೋಗಿ ಸಾಕಷ್ಟು ನಷ್ಟ ಉಂಟಾಗಿದೆ. ಈ ಕುರಿತು ಅಕ್ಟೋಬರ್ 13 ರಂದು ಜರುಗಿದ ಜಿಲ್ಲಾ ಮಟ್ಟದ ಸಭೆಯಲ್ಲಿ ತೊಗರಿ ಬೆಳೆ ಸಮೀಕ್ಷೆ ನಡಿಸಿ, ಮಧ್ಯಂತರ ಪರಿಹಾರ ನೀಡಲು ತೀರ್ಮಾನಿಸಲಾಗಿತ್ತು.
ಇದರಂತೆ ಚಳ್ಳಕೆರೆ ಕೃಷಿ ಇಲಾಖೆ ಅಧಿಕಾರಿಗಳು ಬೆಳೆ ಸಮೀಕ್ಷೆಗೆ ವೇಳಾಪಟ್ಟಿ ಸಿದ್ದಪಡಿಸಿ, ವಿಮಾ ಕಂಪನಿಗೆ ಈ-ಮೇಲ್ ಮುಖಾಂತರ ಮಾಹಿತಿ ನೀಡಿದ್ದಾರೆ. ಈ-ಮೇಲ್ ಪ್ರತಿಕ್ರಿಯಿಸಿ ಸಮೀಕ್ಷೆ ಕಾರ್ಯದಲ್ಲಿ ಪಾಲ್ಗೊಳ್ಳುವುದಾಗಿ ವಿಮಾ ಕಂಪನಿ ಅಧಿಕಾರಿಗಳು ಪ್ರತ್ಯತ್ತರದಲ್ಲಿ ತಿಳಿಸಿದ್ದೀರಿ. ಆದರೆ ಸಮೀಕ್ಷೆ ಕಾರ್ಯದಲ್ಲಿ ಪಾಲ್ಗೊಳ್ಳದೆ ಸಭೆಯಲ್ಲಿ ಇಲ್ಲ ಸಲ್ಲದ ಸಬೂಬು ಹೇಳುತ್ತಿದ್ದೀರಿ.
ತೊಗರಿ ಬೆಳೆ ನಷ್ಟ ಕುರಿತು ನಾಲ್ಕೈದು ಬಾರಿ ಸಭೆ ನಡೆಸಿ ಸೂಚನೆ ನೀಡಲಾಗಿದೆ. ವಿಮಾ ಕಂಪನಿ ಯಾವುದಕ್ಕೂ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ. ರೈತರಿಗೆ ನಷ್ಟ ಪರಿಹಾರ ದೊರಕುವುದು ವಿಳಂಬವಾಗುತ್ತಿದೆ. ಸಭೆ ನಡಾವಳಿಯಲ್ಲಿ ವಿಮಾ ಕಂಪನಿ ಅಧಿಕಾರಿಗಳು ನೀಡುವ ಬೇಜಬ್ದಾರಿ ಹೇಳಿಕೆಗಳನ್ನು ಪದಶಃ ದಾಖಲಿಸಿ ಸರ್ಕಾರಕ್ಕೆ ವರದಿ ನೀಡುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚಿಸಿದರು.
ಹೂ ಕಟ್ಟಲಿಲ್ಲ ತೊಗರಿ:
ಈ ಬಾರಿಯ ಮುಂಗಾರು ಹಂಗಾಮಿನ ಆರಂಭದ ಜೂನ್ ತಿಂಗಳ ನಂತರ ಜುಲೈನಲ್ಲಿ ಉತ್ತಮ ಮಳೆಯಾಗಿತ್ತು. ಚಳ್ಳಕೆರೆ ಭಾಗದ ರೈತರು ಹರ್ಷದಿಂದ ಹೊಲಕ್ಕೆ ತೊಗರಿ ಬಿತ್ತಿದ್ದರು. ಆರಂಭದಲ್ಲಿ ತೊಗರಿ ಗಿಡಗಳು ಉತ್ತಮವಾಗಿ ಬೆಳೆದು ಹಸಿರಿನಿಂದ ಕಂಗೊಳಿಸುತ್ತಿದ್ದವು. ಆದರೆ ತೊಗರಿ ಗಿಡ ಟಿಸಿಲೊಡೆದು, ಹೂ ಬಿಟ್ಟು, ಕಾಯಿತೊಟ್ಟು ಉತ್ತಮ ಇಳುವರಿ ನೀಡುವ ಸಮಯದಲ್ಲಿ, ಆಗಸ್ಟ್ ನಿಂದ ಅಕ್ಟೋಬರ್ ವರೆಗೆ ಸತತ 6 ವಾರಗಳ ಮಳೆಯ ಕೊರತೆ ಉಂಟಾಯಿತು. ಇದರಿಂದಾಗಿ ತೊಗರಿ ಗಿಡಗಳು ಉತ್ತಮ ಫಸಲು ನೀಡುವಲ್ಲಿ ವಿಫಲವಾಗಿವೆ. ಇದರಿಂದಾಗಿ ರೈತರಿಗೆ ಇಳುವರಿಯಲ್ಲಿ ಸಾಕಷ್ಟು ನಷ್ಟ ಉಂಟಾಗಿದೆ ಎಂದು ಬಬ್ಬೂರು ಕೃಷಿ ವಿ.ವಿ. ವಿಜ್ಞಾನಿಗಳಾದ ಓಂಕಾರಪ್ಪ ಹಾಗೂ ಡಾ.ಹನುಮಂತರಾಯ ಸಭೆಯಲ್ಲಿ ತಿಳಿಸಿದರು.
ವಿಮಾ ಕಂಪನಿ ಅಧಿಕಾರಿಗಳ ಉದ್ಧಟತನ:
ಈ ಬಾರಿ ಜಿಲ್ಲೆಗೆ ಓರಿಯಂಟಲ್ ಇನ್ಸೂರೆನ್ಸ್ ಕಂಪನಿಯನ್ನು ಬೆಳೆ ವಿಮಾ ಕಂಪನಿಯನ್ನಾಗಿ ಆಯ್ಕೆ ಮಾಡಲಾಗಿದೆ. ಕೃಷಿ, ತೋಟಗಾರಿಕೆ ಹಾಗೂ ಜಿಲ್ಲಾಡಳಿತ ವತಿಯಿಂದ ರೈತರಿಗೆ ಬೆಳೆ ವಿಮೆ ಬಗ್ಗೆ ಜಾಗೃತಿ ಮೂಡಿಸಿದ ಪರಿಣಾಮ ಸಾಕಷ್ಟು ರೈತರು ತಮ್ಮ ಬೆಳೆಗಳಿಗೆ ವಿಮೆಯನ್ನು ತುಂಬಿದ್ದಾರೆ. ಆದರೆ ವಿಮೆ ತುಂಬಿಸಿಕೊಂಡ ಓರಿಯಂಟಲ್ ಇನ್ಸೂರೆನ್ಸ್ ಕಂಪನಿ ಪ್ರತಿನಿಧಿಗಳು ಅಧಿಕಾರಿಗಳೊಂದಿಗೆ ಉತ್ತಮ ಸಮನ್ವಯ ಇಟ್ಟುಕೊಂಡಿಲ್ಲ.
ಮಂಗೇಶ್ ಎನ್ನುವ ವಿಮಾ ಕಂಪನಿ ಪ್ರತಿನಿಧಿ ತೊಗರಿ ಬೆಳೆ ನಷ್ಟ ಸಮೀಕ್ಷೆಯಲ್ಲಿ ಪಾಲ್ಗೊಳ್ಳದೇ ಬೇಜಬ್ದಾರಿ ಹಾಗೂ ನಿರ್ಲಕ್ಷ ತೋರಿದ್ದಾರೆ. ಇದರ ಹೊರತಾಗಿ ವಿಮಾ ಕಂಪನಿ ವಾಹನಗಳ ಇನ್ಸೂರೆನ್ಸ್ ನೋಡಿಕೊಳ್ಳುವ ಪ್ರತಿನಿಧಿಯನ್ನು ಕೇವಲ ಒಂದು ದಿನದ ತೊಗರಿ ಬೆಳೆ ಸಮೀಕ್ಷಾ ಕಾರ್ಯಕ್ಕೆ ನಿಯೋಜನೆ ಮಾಡಿದೆ. ಆದರೆ ಸಭೆಯಲ್ಲಿ ವಿಮಾ ಕಂಪನಿ ಅಧಿಕಾರಿಗಳು ಅಸಂಬದ್ದವಾಗಿ ಉತ್ತರ ನೀಡುತ್ತಿದ್ದರು.
ಇದನ್ನು ಗಮನಿಸಿದ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ವಿಮಾ ಕಂಪನಿ ಅಧಿಕಾರಿಗಳು ನಿರ್ಲಕ್ಷ ಹಾಗೂ ಉದ್ಧಟತನವನ್ನು ತೀವ್ರವಾಗಿ ಖಂಡಿಸಿ, ಇದೇ ರೀತಿ ಮುಂದುವರೆದರೆ ದಾಖಲೆ ಸಹಿತ ಕಂಪನಿ ಪ್ರತಿನಿಧಿಗಳ ವಿರುದ್ದ ಎಫ್.ಐ.ಆರ್ ದಾಖಲಿಸುವುದಾಗಿ ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಧಿಕಾರಿ ಮೆಹಬೂಬ್ ಜಿಲಾನಿ ಖರೇಷಿ, ಜಂಟಿ ಕೃಷಿ ನಿರ್ದೇಶಕ ಮಂಜುನಾಥ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕಿ ಸವಿತಾ, ಜಿಲ್ಲಾ ಅಂಕೆ ಸಂಖ್ಯೆ ಸಂಗ್ರಹಣಾಧಿಕಾರಿ ರವಿಕುಮಾರ್, ಓರಿಯಂಟ್ ಇನ್ಸೂರೆನ್ಸ್ ಕಂಪನಿ ರಾಜ್ಯ ಪ್ರತಿನಿಧಿ ಸುಚಿತ್ರಾ ಶಾಲಿನಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ರೈತ ಮುಖಂಡರು ಇದ್ದರು.

