ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಶ್ರೀ ಘಾಟಿ ಸುಬ್ರಹ್ಮಣ್ಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರಕ್ಕೆ ಅಧಿಕಾರೇತರ ನಾಮನಿರ್ದೇಶಿತರಾಗಿ ಆಯ್ಕೆಯಾಗಿರುವ ಏನ್. ರಂಗಪ್ಪ, ವಕೀಲರಾದ ಆರ್ ವಿ ಮಹೇಶ್ ರವರನ್ನು ಸ್ಥಳೀಯ ಮುಖಂಡರು ಸನ್ಮಾನಿಸಿ ಗೌರವಿಸಿದರು. ಗಣ್ಯರಿಗೆ ಪುಷ್ಪಮಾಲೆ ಹಾಕಿ ಸಿಹಿ ತಿನಿಸುವ ಮೂಲಕ ಶುಭಕೋರಿ ಹಾರೈಸಿದರು.
ನೂತನ ನಾಮನಿರ್ದೇಶಕರಾಗಿ ಆಯ್ಕೆಯಾಗಿರುವ ಏನ್ ರಂಗಪ್ಪ ಮಾತನಾಡಿ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ ಎಚ್ ಮುನಿಯಪ್ಪನವರ ಆಶೀರ್ವಾದದೊಂದಿಗೆ ರವಿ ಕೆ.ಎಸ್ ,ಲಕ್ಷ ನಾಯಕ, ಆರ್ ವಿ ಮಹೇಶ್ ಕುಮಾರ್, ಎಂ ಹೇಮಲತರವರನ್ನು ಒಳಗೊಂಡಂತೆ ನಾವು ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ಅಭಿವೃದ್ಧಿ ಪ್ರಾಧಿಕಾರಕ್ಕೆ ಅಧಿಕಾರೇತರ ನಾಮನಿರ್ದೇಶಿತರಾಗಿ ಆಯ್ಕೆಯಾಗಿದ್ದೇವೆ . ಈ ಅವಕಾಶವನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡು ಘಾಟಿ ಕ್ಷೇತ್ರದ ಸಂಪೂರ್ಣ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.
ಕಳೆದ ಘಾಟಿ ಸುಬ್ರಹ್ಮಣ್ಯ ಬ್ರಹ್ಮರಥೋತ್ಸವದ ಸಮಯದಲ್ಲಿ ಉಂಟಾದ ಸಮಸ್ಯೆಗಳನ್ನು ಮುಂದೆ ಸರಿಪಡಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತದೆ, ಜಾತ್ರೆ ಸಮಯದಲ್ಲಿ ಸಾರ್ವಜನಿಕರು ಕಿಲೋಮೀಟರ್ ದೂರ ನಡೆಯುವ ಸನ್ನಿವೇಶಗಳನ್ನು ಕಂಡಿದ್ದೇವೆ , ಮುಂದೆ ಹೀಗಾಗದಂತೆ ಸೂಕ್ತ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದೇವೆ , ಅಲ್ಲದೆ ರಸ್ತೆ ಅಗಲೀಕರಣ , ಉತ್ತಮ ಸುಸಜ್ಜಿತ ಶೌಚಾಲಯ ನಿರ್ಮಾಣ, ಭೋಜನಕೂಟ ಕಟ್ಟಡ ಸೇರಿದಂತೆ ಹಲವು ಯೋಜನೆಗಳನ್ನು ಸರ್ಕಾರದ ಸಹಕಾರದೊಂದಿಗೆ ಹಿರಿಯರ ಮತ್ತು ಹಿತೈಷಿಗಳ ಮಾರ್ಗದರ್ಶನದೊಂದಿಗೆ ಅಭಿವೃದ್ಧಿಪಡಿಸಲಾಗುವುದು ಎಂದರು.
ಆರ್ ವಿ ಮಹೇಶ್ ಮಾತನಾಡಿ ಮುಂದಿನ ದಿನಗಳಲ್ಲಿ ಘಾಟಿ ಸುಬ್ರಹ್ಮಣ್ಯಕ್ಕೆ ಬರುವ ಭಕ್ತಾದಿಗಳಿಗೆ ಬೇಕಾಗುವ ಸಕಲ ಅನುಕೂಲಗಳನ್ನು ವ್ಯವಸ್ಥಾಪಕ ಸಿಬ್ಬಂದಿ ಹಾಗೂ ದೇವಾಲಯದ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಶೀಘ್ರಗತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಘಾಟಿ ಮಾರ್ಗದಲ್ಲಿರುವ ತಿರುಮಗೊಂಡನಹಳ್ಳಿ ರೈಲ್ವೆ ಗೇಟ್ ವಿಚಾರವಾಗಿ ಈಗಾಗಲೇ ಸಾಕಷ್ಟು ಸಾರ್ವಜನಿಕರು ಕರೆ ಮಾಡಿ ದೂರು ನೀಡಿದ್ದಾರೆ. ಈ ಕುರಿತು ಮಾನ್ಯ ಸಚಿವರಿಗೂ ಮೌಖಿಕವಾಗಿ ಮಾಹಿತಿ ನೀಡಿದ್ದೇವೆ , ಪ್ರಾಧಿಕಾರವು ಸಂಪೂರ್ಣವಾಗಿ ಅಧಿಕಾರ ಸ್ವೀಕರಿಸಿ ಅಸ್ತಿತ್ವಕ್ಕೆ ಬಂದ ನಂತರ ಈ ಕುರಿತು ರಾಜ್ಯ ಸಚಿವರ ಮುಖೇನ ನಿಯೋಗ ಹೊರಟು ಕೇಂದ್ರ ರೈಲ್ವೆ ಸಚಿವರಿಗೆ ಮನವಿ ಸಲ್ಲಿಸುವ ಮೂಲಕ ಸಾರ್ವಜನಿಕರ ಸಮಸ್ಯೆಗೆ ತ್ವರಿತ ಗತಿಯಲ್ಲಿ ಪರಿಹಾರ ಕಲ್ಪಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಕೃಷಿಕ ಸಮಾಜದ ಅಧ್ಯಕ್ಷ ಆರ್ ಮುರಳಿಧರ್ ,ತೂಬಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವಿಸಿದ್ದಪ್ಪ, ವಕೀಲರಾದ ಅಶೋಕ್, ಕಾಂಗ್ರೆಸ್ ಮುಖಂಡರಾದ ರಾಜ ಗೋಪಾಲ್, ವಕೀಲರಾದ ಶಿವಕುಮಾರ್,ಮುಖಂಡರಾದ ಹರಿ ಕುಮಾರ್,ರವೀಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು .