ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ದಕ್ಷಿಣದ ಜಿಲ್ಲಾಧಿಕಾರಿಗೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಮೊಬೈಲ್ ಕರೆ ಮಾಡಿ ಬಿಗ್ ಬಾಸ್ ಕನ್ನಡ ಚಿತ್ರೀಕರಣ ನಡೆಯುತ್ತಿರುವ ಜಾಲಿವುಡ್ ಆವರಣದ ಬೀಗ ತೆಗೆಯುವಂತೆ ನಿರ್ದೇಶಿಸಿದ್ದು ನಟ ಮತ್ತು ನಿರೂಪಕ ಕಿಚ್ಚ ಸುದೀಪ್ ಅವರು ಡಿಸಿಎಂ ಮತ್ತು ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
ಸುದೀಪ್ ಹೇಳಿಕೆ-
ಡಿಸಿಎಂ ಡಿಕೆ ಶಿವಕುಮಾರ್ ಅವರು ಸಮಯಕ್ಕೆ ಸರಿಯಾಗಿ ಬೆಂಬಲ ಸೂಚಿಸಿದ್ದಕ್ಕಾಗಿ ಅವರಿಗೆ ನಾನು ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ತಿಳಿಸಿದ್ದಾರೆ.
ಇತ್ತೀಚಿನ ಅವ್ಯವಸ್ಥೆ ಅಥವಾ ಅಡಚಣೆಗಳಲ್ಲಿ ಬಿಗ್ ಬಾಸ್ ಕನ್ನಡ ಭಾಗಿಯಾಗಿಲ್ಲ ಅಥವಾ ಭಾಗವಾಗಿರಲಿಲ್ಲ ಎಂಬುದನ್ನು ಒಪ್ಪಿಕೊಂಡಿದ್ದಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಧನ್ಯವಾದ ಅರ್ಪಿಸಲು ಬಯಸುತ್ತೇನೆ. ನನ್ನ ಕರೆಗೆ ತಕ್ಷಣ ಸ್ಪಂದಿಸಿದ್ದಕ್ಕಾಗಿ ಡಿಸಿಎಂ ಅವರಿಗೆ ನಾನು ನಿಜವಾಗಿಯೂ ಕೃತಜ್ಞನಾಗಿದ್ದೇನೆ ಮತ್ತು ನಲ್ಪಾಡ್ ಅವರ ಸಮರ್ಪಿತ ಪ್ರಯತ್ನಗಳಿಗಾಗಿಯೂ ಧನ್ಯವಾದಗಳು ಎಂದು ಸುದೀಪ್ ತಿಳಿಸಿದ್ದಾರೆ.
ಬಿಗ್ ಬಾಸ್ ಕನ್ನಡ-12 ಈಸ್ ಹಿಯರ್ ಟು ಸ್ಟೇ ಎಂದು ಟ್ವೀಟ್ ಮಾಡಿದ್ದಾರೆ. ಡಿಸಿಎಂ ಏನು ಹೇಳಿದರು:
ಸುದೀಪ್ ಟ್ವೀಟ್ಗೂ ಮುನ್ನ ಎಕ್ಸ್ ಪೋಸ್ಟ್ ಹಂಚಿಕೊಂಡಿದ್ದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಬಿಗ್ ಬಾಸ್ ಕನ್ನಡ ಚಿತ್ರೀಕರಣ ನಡೆಯುತ್ತಿರುವ ಬಿಡದಿಯ ಜಾಲಿವುಡ್ ಆವರಣದ ಸೀಲ್ ತೆಗೆದುಹಾಕಲು ಬೆಂಗಳೂರು ದಕ್ಷಿಣ ಜಿಲ್ಲೆಯ ಜಿಲ್ಲಾಧಿಕಾರಿಗೆ ನಾನು ನಿರ್ದೇಶಿಸಿದ್ದೇನೆ.
ಪರಿಸರ ರಕ್ಷಣೆ ಪ್ರಮುಖ ಆದ್ಯತೆಯಾಗಿದ್ದು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಿಗದಿಪಡಿಸಿದ ಮಾನದಂಡಗಳಿಗೆ ಅನುಗುಣವಾಗಿ ಉಲ್ಲಂಘನೆಗಳನ್ನು ಪರಿಹರಿಸಲು ಸ್ಟುಡಿಯೋಗೆ ಸಮಯ ನೀಡಲಾಗುವುದು. ಪರಿಸರ ಸಂರಕ್ಷಣೆ ಬಗೆಗಿನ ನಮ್ಮ ಜವಾಬ್ದಾರಿ ಎತ್ತಿಹಿಡಿಯುವುದರ ಜೊತೆಗೆ ಕನ್ನಡ ಮನರಂಜನಾ ಉದ್ಯಮವನ್ನು ಬೆಂಬಲಿಸಲು ನಾನು ಬದ್ಧನಾಗಿರುತ್ತೇನೆ ಎಂದು ಡಿಸಿಎಂ ಶಿವಕುಮಾರ್ ಟ್ವೀಟ್ ಮಾಡಿ ತಿಳಿಸಿದ್ದರು.
ಉಪಮುಖ್ಯಮಂತ್ರಿಗಳ ನಿರ್ದೇಶನದ ಮೇರೆಗೆ ಬಿಗ್ ಬಾಸ್ ಸೆಟ್ ಇರುವ ಜಾಲಿವುಡ್ಗೆ ಜಿಲ್ಲಾಧಿಕಾರಿ ಹಾಗೂ ಎಸ್ಪಿ ಇಬ್ಬರೂ ಬಂದು ಸೀಲ್ ತೆರೆದು ಗೇಟ್ ರೀ ಓಪನ್ ಮಾಡಿದ್ದಾರೆ. ಡಿಸಿಎಂ ಸೂಚನೆ ಮೇರೆಗೆ ಗೇಟ್ ತೆರೆಯಲಾಗಿದೆ ಎಂದು ತಿಳಿಸಿದ್ದಾರೆ.
ಬಿಗ್ ಬಾಸ್ಗೆ ಬೀಗ ಹಾಕಿದ ಹಿನ್ನೆಲೆಯಲ್ಲಿ ಎಲ್ಲಾ ಸ್ಪರ್ಧಿಗಳನ್ನು ಬಿಗ್‌ಬಾಸ್ ಕಾರ್ಯಕ್ರಮದ ಆಯೋಜಕರು ಬಿಡದಿ ಬಳಿಯ ಖಾಸಗಿ ರೆಸಾರ್ಟ್ ನಲ್ಲಿ ಇರಿಸಿದ್ದರು. ಇದೀಗ, ಬಿಗ್ ಬಾಸ್ ಮನೆ ಓಪನ್ ಆಗಿದ್ದು, ಎಲ್ಲ ಕೆಲಸಗಳು ಮೊದಲಿನಂತೆ ಮತ್ತೆ ಕಾರ್ಯಾಚರಿಸುವ ಸಾಧ್ಯತೆ ಇದೆ. ಸದ್ಯಕ್ಕೆ ಡಿಸಿ ಅವರು ಶೋ ಆರಂಭಕ್ಕೆ ಅನುಮತಿ ಕೊಟ್ಟಿದ್ದು, ಮುಂದಿನ ಅಪ್ಡೇಟ್ಸ್ಗಾಗಿ ಅಭಿಮಾನಿಗಳು ಕಾತರರಾಗಿದ್ದಾರೆ.
ಬಿಗ್ ಬಾಸ್ ತಂಡವೂ ಸಣ್ಣ ವಿಡಿಯೋ ಹಂಚಿಕೊಂಡು, ಬಿಗ್ ಬಾಸ್ ಕನ್ನಡ 12 ಈಸ್ ಹಿಯರ್ ಟು ಸ್ಟೇ, ಎಂದಿನಂತೆ ಅದೇ ಸಮಯದಲ್ಲಿ… ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9:30 | ಶನಿ-ಭಾನು ರಾತ್ರಿ 9ಕ್ಕೆ ಎಂದು ಬರೆದುಕೊಂಡಿದೆ.

