ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾರ್ಯಕರ್ತರ ಪಾಲಿಗೆ ‘ಕಾಂಗ್ರೆಸ್ ಭವನ‘ ದೇವಾಲಯ ಇದ್ದಂತೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದರು.
ಮೈಸೂರಿನ ಕಾಂಗ್ರೆಸ್ ಭವನದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಶ್ರೀಮತಿ ಇಂದಿರಾ ಗಾಂಧಿ ಕಾಂಗ್ರೆಸ್ ಭವನದ ಭೂಮಿ ಪೂಜೆಯನ್ನು ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರೊಂದಿಗೆ ಶನಿವಾರ ನೆರವೇರಿಸಿ ಮಾತನಾಡಿದರು.
“ಕಾಂಗ್ರೆಸ್ ಭವನ” ಎಂಬುದು ಹೆಸರಿಗಷ್ಟೇ ಭವನ ಇದ್ದಂತೆ, ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾಲಿಗೆ ಇದೊಂದು ದೇವಸ್ಥಾನ. ಪ್ರಜಾಪ್ರಭುತ್ವ ಉಳಿಸುವ ಸೌಧವಿದು ಎಂದು ಡಿಸಿಎಂ ಹೇಳಿದರು.
ಕಾಂಗ್ರೆಸ್ ಭವನ ಕಟ್ಟಡ ನಿರ್ಮಾಣದಲ್ಲಿ ಪಕ್ಷದ ಕಾರ್ಯಕರ್ತರೂ ದೇಣಿಗೆಯನ್ನು ನೀಡಬೇಕು. ಒಂದು ಸಾವಿರ ರೂ. ದೇಣಿಗೆ ನೀಡಿದರೂ ಕಾಂಗ್ರೆಸ್ ಭವನದ ಕಟ್ಟಡಕ್ಕೆ ಕೊಡುಗೆ ಇರುತ್ತದೆ ಎಂಬ ಹೆಮ್ಮೆ ನಮಗಿರಲಿದೆ.
ಕಾಂಗ್ರೆಸ್‌ನಿಂದ ಆರು ಬಾರಿ ಶಾಸಕರಾಗಿರುವ ತನ್ವೀರ್ ಸೇಠ್ ಅವರು ಕಾಂಗ್ರೆಸ್ ಭವನ ನಿರ್ಮಿಸಲು ಭೂಮಿಯನ್ನು ದೇಣಿಗೆಯಾಗಿ ನೀಡಿದ್ದಾರೆ. ಕೆಪಿಸಿಸಿ ಅಧ್ಯಕ್ಷನಾಗಿ ನಾನು ಅವರನ್ನು ಅಭಿನಂದಿಸುತ್ತೇನೆ ಎಂದು ಶಿವಕುಮಾರ್ ತಿಳಿಸಿದರು.
ಮಹಾತ್ಮ ಗಾಂಧಿ ಅವರು ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿ ಶತಮಾನೋತ್ಸವ ಪೂರೈಸಿದ ಸವಿನೆನಪಿಗಾಗಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಹಾಗೂ ಇತರೆಡೆ 100 ಕಚೇರಿ ನಿರ್ಮಿಸಲಾಗುತ್ತಿದೆ.
ಪ್ರತಿ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರು ಕಾಂಗ್ರೆಸ್ ಭವನ ನಿರ್ಮಿಸಲು ಬೆಂಬಲ ನೀಡಬೇಕು. ಈಗಾಗಲೇ ಸಚಿವರಾದ ಸಂತೋಷ್ ಲಾಡ್, ಶರಣ್ ಪ್ರಕಾಶ್ ಪಾಟೀಲ್, ಮದ್ದೂರು ಶಾಸಕರಾದ ಕೆಎಂ ಉದಯ್, ರೋಣ ಶಾಸಕ ಗುರುಪಾದಗೌಡ ಸಂಗನಗೌಡ ಪಾಟೀಲ್ ಅವರು ಕಾಂಗ್ರೆಸ್ ಭವನ ನಿರ್ಮಿಸಲು ದೇಣಿಗೆಯಾಗಿ ನೀಡಿದ್ದಾರೆ.
ನಾನೂ ಕೂಡ ರಾಮನಗರದಲ್ಲಿ ಕಾಂಗ್ರೆಸ್ ಭವನ ನಿರ್ಮಿಸಲು ಜಾಗವನ್ನು ಕೊಟ್ಟಿದ್ದೇನೆ. ಕಾಂಗ್ರೆಸ್ ಶಾಸಕರು ಕಾಂಗ್ರೆಸ್ ಭವನ ಕಟ್ಟುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಶಿವಕುಮಾರ್ ತಿಳಿಸಿದರು.

