ಶಾಶ್ವತವಾಗಿ ಕಾಂಗ್ರೆಸ್‌ ಧ್ವಜ ರಾರಾಜಿಸುವುದು ನಿಶ್ಚಿತ-ಡಿಸಿಎಂ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಶಿವಪುರದ ಧ್ವಜ ರಾರಾಜಿಸಿದಂತೆ ರಾಜ್ಯದಲ್ಲಿ ಶಾಶ್ವತವಾಗಿ ಕಾಂಗ್ರೆಸ್‌ ಧ್ವಜ ರಾರಾಜಿಸುವುದು ನಿಶ್ಚಿತ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮದ್ದೂರು ತಾಲೂಕಿನ ಸೋಮನಹಳ್ಳಿಯಲ್ಲಿ ಸೋಮವಾರ ವಿವಿಧ ಇಲಾಖೆಯ 1146 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡು, ಮಾತನಾಡಿದರು.

- Advertisement - 

ಮದ್ದೂರಿಗೆ ದೊಡ್ಡ ಇತಿಹಾಸವಿದೆ. ಈ ಹಿಂದೆ ಬ್ರಿಟಿಷರ ಕಾಲದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ತಂದೆಯಾದ ಮಲ್ಲಯ್ಯನವರು ಮೈಸೂರು ಸಂಸ್ಥಾನದ ಆಳ್ವಿಕೆಯಲ್ಲಿ ಪ್ರಜಾಪ್ರತಿನಿಧಿಯಾಗಿ ಸೇವೆ ಸಲ್ಲಿಸಿರುವುದು ಇತಿಹಾಸ. ನಮ್ಮ ನಾಯಕರಾದ ಎಸ್‌.ಎಂ. ಕೃಷ್ಣ ಅವರನ್ನು ಈ ಪುಣ್ಯ ಭೂಮಿಯಲ್ಲಿ ಸ್ಮರಿಸದಿದ್ದರೆ ನನ್ನ ಕರ್ತವ್ಯಕ್ಕೆ ಲೋಪವಾದಂತೆ.

ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರಾಗಿ, ರಾಜ್ಯದ ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿ, ರಾಜ್ಯಪಾಲರಾಗಿ ಮಂಡ್ಯ ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಎಸ್‌.ಎಂ. ಕೃಷ್ಣ ಅವರು ಮೆರುಗನ್ನು ಕೊಟ್ಟಿರುವುದು ಮರೆಯಲು ಸಾಧ್ಯವಿಲ್ಲ. ಇತಿಹಾಸ ಮರೆತವರು ಇತಿಹಾಸ ಸೃಷ್ಠಿಸಲು ಸಾಧ್ಯವಿಲ್ಲ ಎಂದು ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಅವರು ಹೇಳಿದ್ದಾರೆ.

- Advertisement - 

ಅದರಂತೆ ಮಂಡ್ಯ ಜಿಲ್ಲೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು, ವಿಶ್ವೇಶ್ವರಯ್ಯನವರು, ಸಾಹುಕಾರ ಚನ್ನಯ್ಯನವರು, ಹಾಗೂ ಮಂಡ್ಯ ಜಿಲ್ಲೆ ರಚನೆಗೆ ಶ್ರಮಿಸಿದ ಮಲ್ಲಯ್ಯನವರು ನೀಡಿದ ಕೊಡುಗೆ ಇತಿಹಾಸ‌ ಪುಟ ಸೇರಿದೆ ಎಂದು ಉಪಮುಖ್ಯಮಂತ್ರಿಗಳು ತಿಳಿಸಿದರು.

ನಿಮ್ಮ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದ್ದೇವೆ. ನಿಮ್ಮ ಋಣ ತೀರಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಮದ್ದೂರಿನಿಂದ ಮಳವಳ್ಳಿವರೆಗೂ ನೀರು ಹರಿದುಹೋಗಬೇಕು ಎಂಬ ಉದ್ದೇಶದಿಂದ 500 ಕೋಟಿ ರೂ. ಅನುದಾನವನ್ನು ನೀಡಿದ್ದೇವೆ. ಮಾಜಿ ಮುಖ್ಯಮಂತ್ರಿಗಳಾದ ಶ್ರೀ ದೇವರಾಜು ಅರಸು ಅವರ ಕಾಲವನ್ನು ಹೊರತುಪಡಿಸಿ ಮಂಡ್ಯ ಜಿಲ್ಲೆಯಲ್ಲಿ ಹೆಚ್ಚು ಶಾಸಕರು ಕಾಂಗ್ರೆಸ್‌ ಪಕ್ಷದಿಂದ ಆಯ್ಕೆಯಾದ ಸಂದರ್ಭದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಆಡಳಿತಕ್ಕೆ ಬಂದಿರುವುದು ವಿಶೇಷ ಎಂದರು.

ಕೊಟ್ಟ ಮಾತನ್ನು ನಾವು ಉಳಿಸಿಕೊಂಡಿದ್ದೇವೆ. ಐದು ಗ್ಯಾರಂಟಿ ಘೋಷಿಸುವ ಮುನ್ನ ದಾನ-ಧರ್ಮ‌ ಮಾಡುವ ಈ ಕೈಅಧಿಕಾರದಲ್ಲಿದ್ದರೆ ಚೆನ್ನ ಎಂಬ ಮಾತನ್ನು ಹೇಳಿದ್ದೆ. ಗ್ಯಾರಂಟಿ ಯೋಜನೆಗಳು ಬಡವರ ಬದುಕಿಗೆ ಆಸರೆಯಾಗುತ್ತಿವೆ.

ಕಾಂಗ್ರೆಸ್‌ ಪಕ್ಷ ಜನರ ಬದುಕಿನಲ್ಲಿ ಬದಲಾವಣೆ ತರಲು ಈ ಹಿಂದಿನಿಂದಲೂ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬರುತ್ತಿದೆ. ಈಗೇನಿದ್ದರೂ ಕಾಂಗ್ರೆಸ್‌ ಕಾಲ. ಮದ್ದೂರಿನ ಶಿವಪುರದ ಸತ್ಯಾಗ್ರಹ ಸೌಧದಲ್ಲಿ ಧ್ವಜ ರಾರಾಜಿಸಿದಂತೆ ರಾಜ್ಯದಲ್ಲಿ ಶಾಶ್ವತವಾಗಿ ಕಾಂಗ್ರೆಸ್‌ ಧ್ವಜ ರಾರಾಜಿಸುವುದು ನಿಶ್ಚಿತ ಎಂದು ಶಿವಕುಮಾರ್ ಹೇಳಿದರು.

ಮದ್ದೂರು ಶಾಸಕರಾದ ಉದಯ್ ಅವರು ತಮ್ಮ ಸ್ವಂತ ಹಣದಲ್ಲಿ 2 ಕೋಟಿ ರೂ. ಮೌಲ್ಯದ ನಿವೇಶನವನ್ನು ಕಾಂಗ್ರೆಸ್‌ ಕಚೇರಿ ನಿರ್ಮಿಸಲು ದೇಣಿಗೆಯಾಗಿ ನೀಡಿದ್ದಾರೆ. ರಾಜ್ಯದಲ್ಲಿ 6 ಜನ ಕಾಂಗ್ರೆಸ್‌ ಕಚೇರಿ ನಿರ್ಮಿಸಲು ಭೂಮಿಯನ್ನು ಕೊಟ್ಟಿದ್ದಾರೆ. ಕಾಂಗ್ರೆಸ್‌ ಋಣವನ್ನು ತೀರಿಸಲು ಹೃದಯಶ್ರೀಮಂತಿಕೆ ತೋರಿದ ಎಲ್ಲರಿಗೂ ಪ್ರೀತಿಪೂರ್ವಕ ಧನ್ಯವಾದಗಳು ಶಿವಕುಮಾರ್ ಅರ್ಪಿಸಿದರು.

 

 

 

 

Share This Article
error: Content is protected !!
";