ಬೊಕ್ಕಸ ತುಂಬಿಸಿಕೊಳ್ಳಲು ವಸೂಲಿಗೆ ಇಳಿದ ಕಾಂಗ್ರೆಸ್ ಸರ್ಕಾರ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬರಿದಾಗಿರುವ ಬೊಕ್ಕಸ ತುಂಬಿಸಿಕೊಳ್ಳಲು ಜನರಿಂದಲೇ ವಸೂಲಿಗೆ ಇಳಿದಿದೆ ಕಾಂಗ್ರೆಸ್ ಸರ್ಕಾರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಪ್ರತಿ ಇಲಾಖೆಯ ಸಂಬಳ ನೀಡುವುದಕ್ಕೂ ಪರದಾಡುತ್ತಿರುವ ನಿರಂತರ ಬಯಲಾಗುತ್ತಿದೆ. ಕೆಪಿಟಿಸಿಎಲ್ ಮತ್ತು ಎಸ್ಕಾಂ ನೌಕರರ ಪಿಂಚಣಿ, ಗ್ರಾಚ್ಯುಟಿಗೆ ಹಣ ಹೊಂದಿಸಲು ಪ್ರತಿ ಯುನಿಟ್ ವಿದ್ಯುತ್ ದರವನ್ನು 36 ಪೈಸೆ ಹೆಚ್ಚಿಸಲಾಗಿದೆ ಅಲ್ಲದೆ ಇದೇ ತಿಂಗಳ ಕೊನೆಯ ಭಾಗದಲ್ಲಿ ಮತ್ತೆ ದರ ಹೆಚ್ಚಿಸುವ ನಿರ್ಧಾರ “ಕದ್ದು ಮುಚ್ಚಿ ಭ್ರಷ್ಟಾಚಾರ ಮಾಡುವುದಷ್ಟೇ ಅಲ್ಲ, ಕದ್ದು ಮುಚ್ಚಿ ದರ ಏರಿಕೆಯ ಮೂಲಕವೂ ಜನರ ಸುಲಿಗೆ ಮಾಡಬೇಕು ಎಂಬ ನಿಲುವಿಗೆ ಬಂದಿರುವುದನ್ನು ಸಾಕ್ಷೀಕರಿಸುತ್ತಿದೆ” ಎಂದು ಅವರು ಟೀಕಾಪ್ರಹಾರ ಮಾಡಿದ್ದಾರೆ.

ಬೆಸ್ಕಾಂ ಸಂಸ್ಥೆ ತನ್ನ ವ್ಯಾಪ್ತಿಯಲ್ಲಿ ಸ್ಮಾರ್ಟ್ ಮೀಟರ್ ಅಳವಡಿಸುವುದನ್ನು ಕಡ್ಡಾಯಗೊಳಿಸಿ ಶೇ 400-800 ರಷ್ಟು ದರ ಏರಿಕೆ ಮಾಡಿರುವ ನಿರ್ಧಾರ ಪ್ರಕಟಿಸಿರುವುದು ಕೇವಲ ವಿದ್ಯುತ್ ಶಾಕ್ ಅಲ್ಲ, ಜನ ಸುಲಿಗೆಯ ಲೂಟಿಕೋರತನವಾಗಿದೆ. ಇದೀಗ ಪ್ರತಿ ಯುನಿಟ್ ಗೆ 36 ಪೈಸೆ ಹೆಚ್ಚಳ ಹಾಗೂ ತಿಂಗಳಾಂತ್ಯಕ್ಕೆ ಮತ್ತೆ ಪರಿಷ್ಕರಣೆ ಮಾಡಿ ನೌಕರರ ಪಿಂಚಣಿ ಹಾಗೂ ಗ್ರಾಚ್ಯುಟಿಗೆ ಗ್ರಾಹಕರ ಜೇಬಿಗೆ ಕತ್ತರಿ ಪ್ರಯೋಗಿಸಲು ಹೊರಟಿರುವುದಲ್ಲದೇ ಸ್ವತಃ ಇಂಧನ ಸಚಿವರೇ ಇದು ದರ ಏರಿಕೆಯಲ್ಲ ಎಂಬ ಬೇಜವಾಬ್ದಾರಿ ಹೇಳಿಕೆ ನೀಡುವುದು ಜನಪರ ಚಿಂತನೆ ಮರೆತು ಅಧಿಕಾರ ದರ್ಪದ ಪರಮಾವಧಿಯಲ್ಲದೇ ಬೇರೇನೂ ಅಲ್ಲ ಎಂದು ವಿಜಯೇಂದ್ರ ಹರಿಹಾಯ್ದಿದ್ದಾರೆ.

ಸರ್ಕಾರದ ಆರ್ಥಿಕ ಸ್ಥಿತಿ ದಿವಾಳಿಯಾಗಿರುವುದರ ಸ್ಪಷ್ಟ ಸೂಚನೆ ಇಂತಹ ಜನವಿರೋಧಿ ಆರ್ಥಿಕ ನಿರ್ಧಾರಗಳಿಂದ ವ್ಯಕ್ತವಾಗುತ್ತಿದೆ. ವಿದ್ಯುತ್ ದರ ಏರಿಕೆ ಹಾಗೂ ಸ್ಮಾರ್ಟ್ ಮೀಟರ್ ದರದ ಹೆಚ್ಚಳವನ್ನು ಈ ಹಿಂದಿನಂತೆ ನಿಗದಿಪಡಿಸದೇ ಹೋದರೆ ಜನರ ಆಕ್ರೋಶ ಎದುರಿಸಲು ಕಾಂಗ್ರೆಸ್ ಸರ್ಕಾರ ಸಿದ್ಧವಾಗಲಿ ಎಂದು ಅವರು ಎಚ್ಚರಿಸಿದ್ದಾರೆ.

 

- Advertisement -  - Advertisement - 
Share This Article
error: Content is protected !!
";