ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
“ದಿನೇ ದೀನೇ ಕನ್ನಡಿಗರ ಪಾಲಿಗೆ ಶಾಪವಾಗುತ್ತಿದೆ ಕಾಂಗ್ರೆಸ್ ಸರ್ಕಾರ” ರಾಜ್ಯದ ರೈತರ ಕಣ್ತಪ್ಪಿಸಿ ತನ್ನ ಮಿತ್ರ ಪಕ್ಷವನ್ನು ತೃಪ್ತಿಪಡಿಸಲು ಹೊರರಾಜ್ಯಕ್ಕೆ ನೀರು ಹರಿಸುವ ಕಾಂಗ್ರೆಸ್ ಸರ್ಕಾರ ಬೆಂಗಳೂರಿನ ಅಪಾರ್ಟ್ಮೆಂಟ್ ನಿವಾಸಿಗಳಿಗೆ ಕಾವೇರಿ ನೀರು ಒದಗಿಸುವುದಾಗಿ ಕೋಟಿ ಕೋಟಿ ಹಣ ಪಡೆದು ದಿನದಿಂದ ದಿನಕ್ಕೆ ದರವನ್ನೂ ಹೆಚ್ಚಿಸಿ ನೀರು ಪೂರೈಕೆ ಮಾಡದಿರುವುದು ನಿಜಕ್ಕೂ ಭಂಡತನತನದ ಪರಮಾವಧಿಯಾಗಿದೆ.
ಬೇಸತ್ತ ಬೆಂಗಳೂರು ನಿವಾಸಿಗಳು ನಿತ್ಯವೂ ಹಿಡಿ ಶಾಪ ಹಾಕುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆರೋಪಿಸಿದ್ದಾರೆ.
ಮಹದೇವಪುರ ಕ್ಷೇತ್ರದ ನಾಗರಿಕರು ದೊಡ್ಡ ಪ್ರಮಾಣದಲ್ಲಿ ತೆರಿಗೆ ತೆತ್ತುತ್ತಿದ್ದರೂ ಈ ವ್ಯಾಪ್ತಿಯಲ್ಲಿಯೇ ಮೂಲಭೂತ ಸೌಕರ್ಯ ಒದಗಿಸಲಾಗದ ಈ ಸರ್ಕಾರ ಬಡವರು, ಶ್ರೀಸಾಮಾನ್ಯರ ಸಮಸ್ಯೆಗಳಿಗೆ ಹೇಗೆ ಕಿವಿಗೊಡಲು ಸಾಧ್ಯವೇ ? ಭ್ರಷ್ಟಾಚಾರದಲ್ಲಿ ಮುಳುಗಿ ಬರಿದಾಗಿರುವ ಬೊಕ್ಕಸ ತುಂಬಿಸಿಕೊಳ್ಳಲು ಜನರಿಂದಲೇ ನಿತ್ಯವೂ ವಸೂಲಿಗೆ ಇಳಿದಿರುವ ದಪ್ಪಚರ್ಮದ ಈ ಕಾಂಗ್ರೆಸ್ ಸರ್ಕಾರಕ್ಕೆ ಜನರೇ ತಕ್ಕ ಪಾಠ ಕಲಿಸುವ ಕಾಲ ಸನ್ನಿಹಿತವಾಗುತ್ತಿದೆ ಎಂದು ತಿಳಿಸಿದ್ದಾರೆ.