ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹಿಂದುಳಿದ ಸಮುದಾಯಗಳ ಶೈಕ್ಷಣಿಕ, ಸ್ವಯಂ ಉದ್ಯೋಗ, ಕೃಷಿ ಸೇರಿದಂತೆ ಆ ಸಮುದಾಯಗಳು ಬದುಕು ಕಟ್ಟಿಕೊಳ್ಳಲು ಉತ್ತೇಜಿಸುವ ಸದುದ್ದೇಶದಿಂದ ಸ್ಥಾಪನೆಗೊಂಡಿರುವ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಸೇರಿದಂತೆ ವಿಶ್ವಕರ್ಮ, ಉಪ್ಪಾರ, ಮಡಿವಾಳ, ಸವಿತಾ, ಹಡಪದ, ಬಲಿಜ, ಗಾಣಿಗ, ನಿಜ ಶರಣ ಅಂಬಿಗರ ಚೌಡಯ್ಯ ನಿಗಮ, ಅಲೆಮಾರಿ ನಿಗಮ ಸೇರಿದಂತೆ ವಿವಿಧ ಹಿಂದುಳಿದ ಹಾಗೂ
ಅತಿ ಹಿಂದುಳಿದ ಅಭಿವೃದ್ಧಿ ನಿಗಮಗಳಿಗೆ ಅನುದಾನ ಕಡಿತ ಗೊಳಿಸಿ ವಂಚಿಸಿರುವ ಕಾಂಗ್ರೆಸ್ ಸರ್ಕಾರದ ಧೋರಣೆ ಅತ್ಯಂತ ಖಂಡನೀಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಟೀಕಾಪ್ರಹಾರ ಮಾಡಿದ್ದಾರೆ.
‘ಅಹಿಂದ ಸಮುದಾಯಗಳ ಚಾಂಪಿಯನ್‘ ಎಂದು ಬೀಗುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರ ರಾಜಕಾರಣಕ್ಕಾಗಿ ಶೋಷಿತ ಹಾಗೂ ಹಿಂದುಳಿದ ಸಮುದಾಯಗಳ ಅಭಿವೃದ್ಧಿಗೆ ಎಳ್ಳಷ್ಟೂ ಕೊಡುಗೆ ನೀಡದೇ ಸಮುದಾಯಗಳ ಕಲ್ಯಾಣಕ್ಕಾಗಿ ಅಸ್ತಿತ್ವಕ್ಕೆ ತಂದಿರುವ ನಿಗಮಗಳನ್ನು ನಿಷ್ಕ್ರಿಯಗೊಳಿಸಿ ಬೀಗ ಜಡಿಯಲು ಹೊರಟಿದ್ದಾರೆ. ಪಂಚ ಗ್ಯಾರಂಟಿಗಳ ಯೋಜನೆಗಳನ್ನು ಜಾರಿಗೊಳಿಸುವುದರಲ್ಲಿ ಮುಳುಗಿ ಹೋಗಿರುವ ಅವರು ಪರಿಶಿಷ್ಟರ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಕಾರ್ಯಕ್ರಮಗಳಿಗೆ ‘ಎಳ್ಳು ನೀರು’ ಬಿಟ್ಟಿದ್ದಾರೆ ಎಂದು ವಿಜಯೇಂದ್ರ ಆರೋಪಿಸಿದ್ದಾರೆ.
ಹಿಂದುಳಿದ ವರ್ಗಗಳ ನಿಗಮಗಳಿಗೆ ಕಳೆದ ನಮ್ಮ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅನುದಾನ ಬಿಡುಗಡೆ ಮಾಡಲಾಗಿದ್ದ ಭಾಗದಲ್ಲಿ ಶೇ 50% ರಷ್ಟನ್ನೂ ಕರ್ನಾಟಕ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಬಿಡುಗಡೆ ಮಾಡಲಾಗಿಲ್ಲ ಎಂದರೆ ಕಾಂಗ್ರೆಸ್ ಸರ್ಕಾರಕ್ಕೆ ಹಿಂದುಳಿದವರ ಬಗೆಗೆ ಇರುವುದು ಡೋಂಗಿ ಕಾಳಜಿ ಎನ್ನುವುದು ಖಾತ್ರಿಯಾಗಿದೆ.
ಅಲಕ್ಷಿತ ಸಮುದಾಯಗಳ ಬಗ್ಗೆ ಸರ್ಕಾರದ ಅಲಕ್ಷ್ಯ ಧೋರಣೆ ನಿಲ್ಲಿಸಿ, ಈ ಕೂಡಲೇ ನಿಗಮಗಳಿಗೆ ಆರ್ಥಿಕ ವರ್ಷ 2023-24 , 2೦24-25, ಹಾಗೂ 2025-26 ಒಟ್ಟು ಗೂಡಿಸಿ ಹೆಚ್ಚಿನ ಅನುದಾನವನ್ನು ಕೂಡಲೇ ಬಿಡುಗಡೆ ಮಾಡುವಂತೆ ವಿಜಯೇಂದ್ರ ಒತ್ತಾಯಿಸಿದ್ದಾರೆ.

