ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು, ಕೇಂದ್ರ ಕಚೇರಿ ಜೆ.ಪಿ. ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ, ಕರ್ನಾಟಕ ಕಾಂಗ್ರೆಸ್ ಸರ್ಕಾರ “ಸ್ಮಾರ್ಟ್‌ಮೀಟರ್” ಹೆಸರಲ್ಲಿ 15 ಸಾವಿರ ಕೋಟಿಗೂ ಹೆಚ್ಚು ಭ್ರಷ್ಟಾಚಾರ ನಡೆಸಿದೆ ಎಂದು ಗಂಭೀರ ಆರೋಪ ಮಾಡಿದರು.
ಕೆಟಿಟಿಪಿ ಕಾಯ್ದೆ ಉಲ್ಲಂಘಿಸಿ, ನಿಯಮಗಳನ್ನು ಗಾಳಿಗೆ ತೂರಿ ತರಾತುರಿಯಲ್ಲಿ ಟೆಂಡರ್‌ಪ್ರಕ್ರಿಯೆ ನಡೆಸಿ ಸಾವಿರಾರು ಕೋಟಿ ಅಕ್ರಮ ಎಸಗಲಾಗಿದೆ ಎಂದು ಅವರು ದೂರಿದರು.
ರಾಜ್ಯದ ಪ್ರತಿಯೊಬ್ಬ ಗ್ರಾಹಕನ ಮೇಲೆ 8,520 ರೂ ಹೊರೆ ಬೀಳಲಿದೆ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು. ಸ್ಮಾರ್ಟ್‌ಮೀಟರ್‌ಟೆಂಡರ್‌ಪ್ರಕ್ರಿಯೆ ರದ್ದು ಮಾಡಿ, ಪಾರದರ್ಶಕವಾಗಿ ಮರು ಟೆಂಡರ್‌ನಡೆಸಬೇಕು ಎಂದು ರಾಜ್ಯ ಸರ್ಕಾರಕ್ಕೆ ನಿಖಿಲ್ ಕುಮಾರಸ್ವಾಮಿ ಒತ್ತಾಯಿಸಿದರು.
ಮುಂದುವರೆದು ಮಾತನಾಡಿದ ನಿಖಿಲ್, ರಾಹುಲ್ ಗಾಂಧಿ ಮತ್ತು ರಾಜ್ಯದ ಕಾಂಗ್ರೆಸ್ ನಾಯಕರು ಕೇವಲ ಸಂವಿಧಾನದ ಪ್ರತಿಯನ್ನು ಕೈಯಲ್ಲಿ ಹಿಡಿದು ಓಡಾಡಿದರೆ ಸಾಲದು, ಡಾ ಬಿಆರ್ ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನದ ಅಂಶಗಳನ್ನು ಬುದ್ಧಿವಂತರಿಂದ ಕೇಳಿ ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಗೇಲಿ ಮಾಡಿದರು.
ನರೇಂದ್ರ ಮೋದಿಯವರು ಪುನಃ ಪ್ರಧಾನಿಯಾದರೆ ಸಂವಿಧಾನವನ್ನು ಬದಲಾಯಿಸಲಿದ್ದಾರೆ ಅಂತ ಡಿಸಿಎಂ ಡಿಕೆ ಶಿವಕುಮಾರ್ ಲೋಕಸಭಾ ಚುನಾವಣೆ ಸಮಯದಲ್ಲಿ ಅಪಪ್ರಚಾರ ಮಾಡಿದ್ದರು. ಆದರೆ ಈಗ ಅವರೇ ಸಂವಿಧಾನದಲ್ಲಿ ಬದಲಾವಣೆ ತರುವ ಮಾತಾಡುತ್ತಿದ್ದಾರೆ ಎಂದು ನಿಖಿಲ್ ದೂರಿದರು.