ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ಕಾಂಗ್ರೆಸ್ ಸರ್ಕಾರ ನಿರಂತರವಾಗಿ ಬೆಲೆ ಏರಿಕೆ ಮಾಡುವುದನ್ನ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಜನಾಕ್ರೋಶ ಮೊಳಗಿದೆ. ಹಾಲು, ಮೊಸರು, ವಿದ್ಯುತ್, ಡೀಸೆಲ್ ದರ, ಕಸ ತೆರಿಗೆ ಹೀಗೆ ಒಂದರ ಹಿಂದೆ ಒಂದರಂತೆ ದರ ಏರಿಕೆಗೆ ರಾಜ್ಯಾದ್ಯಂತ ಜನ ಕಿಡಿಕಾರಿದ್ದಾರೆ. ಹಾಲು, ಮೊಸರಿನ ಬೆನ್ನಲ್ಲೇ ಡೀಸೆಲ್ ದರವೂ 2 ರೂಪಾಯಿ ಏರಿಕೆಯಾಗಿದ್ದು ಜನಾಕ್ರೋಶಕ್ಕೆ ಗುರಿಯಾಗಿದೆ. ಇದೇ ವಿಚಾರ ಮುಂದಿಟ್ಟುಕೊಂಡು ಪ್ರತಿಪಕ್ಷ ಬಿಜೆಪಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದೆ.
ಹೋರಾಟದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಇತರ ಮಾಜಿ ಸಿಎಂಗಳು, ಶಾಸಕರು, ಮಾಜಿ ಶಾಸಕರು, ಪರಿಷತ್ ಸದಸ್ಯರು ಹಾಜರಾಗಿದ್ದಾರೆ. ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ.
ನಾಡಿನ ಜನರಿಗೆ ದರ ಏರಿಕೆಯ ಬರೆ ಎಳೆಯುತ್ತಾ ಬರಿದಾಗಿರುವ ಬೊಕ್ಕಸ ತುಂಬಿಸಿಕೊಳ್ಳಲು ಜನರನ್ನು ಸಂಕಷ್ಟದ ಕೂಪಕ್ಕೆ ತಳ್ಳುತ್ತಿರುವ ಭ್ರಷ್ಟ ಹಾಗೂ ಜನವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು. ಅಗತ್ಯ ವಸ್ತುಗಳಾದ ಹಾಲು, ಮೊಸರು ಸೇರಿದಂತೆ ವಿದ್ಯುತ್, ಬಸ್ ಪ್ರಯಾಣ ದರ, ಬೆಂಗಳೂರಿನಲ್ಲಿ ಕಸದ ತೆರಿಗೆ, ನೋಂದಣಿ ಮತ್ತು ಮುದ್ರಾಂಕ ಶುಲ್ಕ, ಅಫಿಡವಿಟ್ ಛಾಪಾ ಕಾಗದ, ಡೀಸೆಲ್ ಸೇರಿದಂತೆ ಎಲ್ಲದರ ಬೆಲೆ ಏರಿಕೆ ಮಾಡಿ ದೈನಂದಿನ ಬದುಕನ್ನೇ ಕಷ್ಟಕ್ಕೆ ನೂಕಿದೆ. ಕಾಂಗ್ರೆಸ್ ಸರ್ಕಾರದ ದರ ಏರಿಕೆಯ ನಿರ್ಧಾರಗಳನ್ನು ವಾಪಸ್ ಪಡೆಯಬೇಕೆಂದು ಆಗ್ರಹ ಮಾಡಿದರು.
ಈ ಸಂದರ್ಭದಲ್ಲಿ ಪಕ್ಷದ ರಾಜ್ಯ ಸಹ ಉಸ್ತುವಾರಿ ಸುಧಾಕರ್ ರೆಡ್ಡಿ, ವಿಧಾನ ಪರಿಷತ್‌ವಿಪಕ್ಷ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಶಾಸಕರುಗಳು ಹಾಗೂ ವಿಧಾನ ಪರಿಷತ್‌ಸದಸ್ಯರುಗಳು, ಪಕ್ಷದ ಪ್ರಮುಖರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.