ಚಂದ್ರವಳ್ಳಿ ನ್ಯೂಸ್, ಬೆಂಗಳೂರು :
“ಪೊಲೀಸ್ ವ್ಯವಸ್ಥೆ ದುರ್ಬಳಕೆ ಮಾಡಿಕೊಂಡು ಹಿಂದೂ ಕಾರ್ಯಕರ್ತರಿಗೆ ಕಿರುಕುಳ ನೀಡುತ್ತಿದೆ ಕಾಂಗ್ರೆಸ್ ಸರ್ಕಾರ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಟೀಕಿಸಿದ್ದಾರೆ.
ಓಲೈಕೆ ರಾಜಕಾರಣಕ್ಕಾಗಿ ಸಮಾಜಘಾತಕ ಹಾಗೂ ದೇಶವಿದ್ರೋಹಿ ದುಷ್ಟ ಶಕ್ತಿಗಳ ರಕ್ಷಣೆಗೆ ನಿಂತಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರದಿಂದಾಗುತ್ತಿರುವ ಹಿಂದೂ ಕಾರ್ಯಕರ್ತರ ಬಂಧನ, ಸುಳ್ಳು ಪ್ರಕರಣ ದಾಖಲು ಮತ್ತು ಗಡಿಪಾರು ಆದೇಶ ಹಿನ್ನೆಲೆಯಲ್ಲಿ ಇಂದು ದಕ್ಷಿಣ ಕನ್ನಡ ಜಿಲ್ಲೆಯ ಪಕ್ಷದ ನಿಯೋಗದೊಂದಿಗೆ ತೆರಳಿ ಮಾಹಿತಿ ಸಂಗ್ರಹ ಸಭೆ ನಡೆಸಲಾಯಿತು.
ಕಾಂಗ್ರೆಸ್ ಸರ್ಕಾರದ ಪ್ರಭಾವಿಗಳ ತಾಳಕ್ಕೆ ತಕ್ಕಂತೆ ಪೊಲೀಸರು ಕುಣಿದರೆ, ಅದರ ಪ್ರತಿಫಲವನ್ನು ಅನುಭವಿಸಬೇಕಾಗುತ್ತದೆ. ಈಗಾಗಲೇ ಬೆಂಗಳೂರಿನ ದುರ್ಘಟನೆ ಪೊಲೀಸರಿಗೆ ಎಚ್ಚರಿಕೆಯ ಗಂಟೆಯಾಗಿದೆ ಎಂಬುದನ್ನು ತಿಳಿಸಲಾಯಿತು.
ನ್ಯಾಯೋಚಿತವಾಗಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿ, ನಮ್ಮ ಹಿಂದೂ ಕಾರ್ಯಕರ್ತರ ನೈತಿಕ ಬಲ ಕುಗ್ಗಿಸಲು ಯತ್ನಿಸಿದರೆ ಪರಿಣಾಮ ಎದುರಿಸಲು ಸರ್ಕಾರ ಸಿದ್ಧವಾಗಲಿ. ಕರಾವಳಿಯಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸಬೇಕು, ದೇಶವಿದ್ರೋಹಿ ಶಕ್ತಿಗಳ ಕೋಮು ಅಟ್ಟಹಾಸ ನಿಲ್ಲಬೇಕು ಎಂಬುದು ನನ್ನ ಒತ್ತಾಯವಾಗಿದೆ.
ಈ ನಿಟ್ಟಿನಲ್ಲಿ ದುಷ್ಟ ಜನರ ರಕ್ಷಣೆ, ಶಿಷ್ಟರನ್ನು ಕೆರಳಿಸಿದರೆ ಅದರ ವಿರುದ್ಧ ಕರ್ನಾಟಕ ಬಿಜೆಪಿ ದೊಡ್ಡ ಪ್ರಮಾಣದಲ್ಲಿ ಹೋರಾಡಲಿದೆ ಎಂದು ಎಚ್ಚರಿಕೆ ನೀಡಲಾಯಿತಲ್ಲದೇ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಗೆ ಪಕ್ಷದ ಪ್ರಮುಖರೊಂದಿಗೆ ತೆರಳಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಆಯುಕ್ತರು ಸೇರಿದಂತೆ ಇತರ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಯಿತು ಎಂದು ವಿಜಯೇಂದ್ರ ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದಗೌಡ, ವಿಧಾನ ಸಭಾ ವಿರೋಧ ಪಕ್ಷ ನಾಯಕ ಆರ್.ಅಶೋಕ್, ವಿಧಾನ ಪರಿಷತ್ ವಿರೋಧ ಪಕ್ಷ ನಾಯಕ ಛಲವಾಗಿ ನಾರಾಯಣಸ್ವಾಮಿ, ವಿರೋಧ ಪಕ್ಷದ ಉಪನಾಯಕ ಅರವಿಂದ್ ಬೆಲ್ಲದ್, ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್.ರವಿಕುಮಾರ್, ಸಂಸದ ಕ್ಯಾಪ್ಟನ್ ಬ್ರಿಜೇಶ್, ಶಾಸಕರಾದ ಉಮಾನಾಥ ಎ. ಕೋಟ್ಯಾನ್, ಡಾ. ವೈ.ಭರತ್ ಶೆಟ್ಟಿ, ಡಿ. ವೇದವ್ಯಾಸ ಕಾಮತ್, ರಾಜೇಶ್ ನಾಯ್ಕ್ ಉಳಿಪ್ಪಾಡಿ, ಹರೀಶ್ ಪೂಂಜ, ಭಾಗೀರಥಿ ಮುರುಳ್ಯ, ಕಿಶೋರ್ ಕುಮಾರ್, ನಿವೃತ್ತ IPS ಅಧಿಕಾರಿ, ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಸೇರಿದಂತೆ ಪಕ್ಷದ ಪ್ರಮುಖರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.