ಪಬ್ಲಿಕ್ ಶಾಲೆ ಸ್ಥಾಪನೆ ನೆಪದಲ್ಲಿ 7,000 ಸರ್ಕಾರಿ ಶಾಲೆ ಮುಚ್ಚಲು ಹೊರಟ ಕಾಂಗ್ರೆಸ್ ಸರ್ಕಾರ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ವ್ಯವಸ್ಥೆ ಬೇರುಸಹಿತ ಸರ್ವನಾಶವಾಗಿದೆ ಎನ್ನುವುದಕ್ಕೆ ಈ ವರದಿಯೇ ಸಾಕ್ಷಿ. ಸುಸಜ್ಜಿತ ಕಟ್ಟಡ, ಶೌಚಾಲಯ, ಕ್ರೀಡಾಂಗಣ, ಗ್ರಂಥಾಲಯ, ಮಕ್ಕಳಿಗೆ ಸಮವಸ್ತ್ರ, ಪುಸ್ತಕ ಒದಗಿಸಲಾಗದ ಕೈಲಾಗದ ಕರ್ನಾಟಕ ಕಾಂಗ್ರೆಸ್ ಸರಕಾರವು ಈಗ ಜವಾಬ್ದಾರಿಯಿಂದ ಪಾರಾಗಲು ಸಲೀಸು ಮಾರ್ಗ ಕಂಡುಕೊಂಡಿದೆ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಟೀಕಾಪ್ರಹಾರ ಮಾಡಿದ್ದಾರೆ.

ವಿಲೀನ ಮತ್ತು ಪಬ್ಲಿಕ್ ಶಾಲೆ ಸ್ಥಾಪನೆ ನೆಪದಲ್ಲಿ ರಾಜ್ಯದಲ್ಲಿ 7,000 ಸರಕಾರಿ ಶಾಲೆಗಳನ್ನು ಮುಚ್ಚಲು ಹೊರಟಿದೆ. ವಿಪರ್ಯಾಸವೆಂದರೆ,700 ಪಬ್ಲಿಕ್ ಶಾಲೆಗಳಿಗೆ 7,000 ಸರಕಾರಿ ಶಾಲೆಗಳಿಗೆ ಇತಿಶ್ರೀ ಹಾಡಲು ಹೊರಟಿದೆ!

- Advertisement - 

ಇದಕ್ಕೂ ಮೀರಿದ ಆಘಾತಕಾರಿ ಸಂಗತಿ ಎಂದರೆ; ಶೇ.10ಕ್ಕಿಂತ ಕಡಿಮೆ ಹಾಜರಾತಿಯುಳ್ಳ 5,000 ಶಾಲೆ, ಶೇ.50ಕ್ಕೂ ಕಡಿಮೆ ಹಾಜರಾತಿ ಹೊಂದಿರುವ 25,000 ಶಾಲೆಗಳಿಗೆ ಶಾಶ್ವತವಾಗಿ ಬೀಗ ಜಡಿಯಲು ಸರಕಾರ ಮುಂದಾಗಿರುವುದು ದುರದೃಷ್ಟಕರ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.

ಮಕ್ಕಳು ಸರಕಾರಿ ಶಾಲೆಗಳಿಗೆ ಏಕೆ ಬರುತ್ತಿಲ್ಲ ಎನ್ನುವುದಕ್ಕೆ ಕಾರಣ ಪತ್ತೆ ಹಚ್ಚಿ ಪರಿಹಾರ ಕಂಡುಕೊಳ್ಳುವ ಬದಲು, ಗ್ರಾಮೀಣ ಭಾಗದ ಬಡಮಕ್ಕಳೇ ಹೆಚ್ಚಾಗಿ ವಿದ್ಯಾಭ್ಯಾಸ ಮಾಡುವ ಸರಕಾರಿ ಶಾಲೆಗಳನ್ನು ವ್ಯವಸ್ಥಿತವಾಗಿ ಮುಗಿಸಿ ಇಡೀ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ವ್ಯವಸ್ಥೆಯನ್ನೇ ಬುಡಮೇಲು ಮಾಡಿ ಖಾಸಗಿಯವರಿಗೆ ಧಾರೆ ಎರೆದು ಶಿಕ್ಷಣ ವ್ಯಾಪಾರೀಕರಣಕ್ಕೆ ಮತ್ತಷ್ಟು ಶಕ್ತಿ ಉತ್ತೇಜನ ನೀಡುವುದು ಕಾಂಗ್ರೆಸ್ ಸರಕಾರದ ದುರುದ್ದೇಶ ಆಗಿದೆ.

- Advertisement - 

ರಾಜ್ಯದಲ್ಲಿ 60,000 ಶಿಕ್ಷಕರ ಕೊರತೆ ಇದೆ. ಕೆಲ ದಿನಗಳಲ್ಲಿಯೇ 6,000 ಶಿಕ್ಷಕರು ನಿವೃತ್ತರಾಗುತ್ತಿದ್ದಾರೆ. ಖಾಲಿ ಹುದ್ದೆಗಳನ್ನು ನೇಮಕ ಮಾಡುವ ಬದಲಿಗೆ ಸರಕಾರಿ ಶಿಕ್ಷಣ ವ್ಯವಸ್ಥೆಗೆ ಶಿಕ್ಷೆ ವಿಧಿಸುವ ದುಷ್ಕೃತ್ಯಕ್ಕೆ ಕೈ ಹಾಕಿದೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಹರಿಹಾಯ್ದಿದ್ದಾರೆ.

 

 

 

Share This Article
error: Content is protected !!
";