140 ಶಾಸಕರ ಬಲದೊಂದಿಗೆ ಕಾಂಗ್ರೆಸ್‌ ಸರ್ಕಾರ ಬಲಿಷ್ಠ-ಡಿಸಿಎಂ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹೊಸಕೋಟೆ ತಾಲ್ಲೂಕಿನಲ್ಲಿ 6000 ಜನರಿಗೆ ಸ್ವತ್ತಿನ ದಾಖಲೆಗಳನ್ನು ನೀಡಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಿಳಿಸಿದರು.

- Advertisement - 

ಹೊಸಕೋಟೆಯಲ್ಲಿ ಏರ್ಪಡಿಸಿದ್ದ ಇ-ಸ್ವತ್ತು ಮತ್ತು ಹಕ್ಕುಪತ್ರ ವಿತರಣೆ ಹಾಗೂ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

- Advertisement - 

140 ಶಾಸಕರ ಬಲದೊಂದಿಗೆ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಬಲಿಷ್ಠವಾಗಿದೆ. ಯೋಗಕ್ಕಿಂತ ಯೋಗಕ್ಷೇಮ ಮುಖ್ಯ ಎಂಬುದನ್ನು ನಮ್ಮ ಹಿರಿಯರು ಹೇಳಿದ್ದಾರೆ. ಹೊಸಕೋಟೆ ತಾಲೂಕಿನಲ್ಲಿ ಇವತ್ತು 6000 ಜನರಿಗೆ ಸ್ವತ್ತಿನ ದಾಖಲೆಯನ್ನು ನೀಡಿದ್ದೇವೆ.

ಈ ಹಿಂದೆ ಭೂ ಮಾಲೀಕತ್ವ ಇಲ್ಲದ 1 ಲಕ್ಷಕ್ಕೂ ಹೆಚ್ಚು ಜನರಿಗೆ ಹಕ್ಕುಪತ್ರ ವಿತರಣೆ ಮಾಡಿದ್ದೇವೆ. ಬೆಂಗಳೂರು ನಗರದಲ್ಲಿ ಬಿಬಿಎಂಪಿ ನೀಡಿರುವ ಎಲ್ಲಾ ಬಿ – ಖಾತಾಗಳಿಗೆ ಎ ಖಾತಾ ಮಾನ್ಯತೆ ನೀಡುವ ತೀರ್ಮಾನವನ್ನು ಮಾಡಿದ್ದೇವೆ. ರೈತರ ಪಂಪ್‌ಸೆಟ್‌ಗೆ ವಿದ್ಯುತ್ ಪೂರೈಸಲು 19 ಸಾವಿರ ಕೋಟಿ ರೂ. ಹಣವನ್ನು ನೀಡುತ್ತಿದ್ದೇವೆ ಎಂದು ಉಪಮುಖ್ಯಮಂತ್ರಿಗಳು ತಿಳಿಸಿದರು.

- Advertisement - 

7 ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಎತ್ತಿನಹೊಳೆ ಯೋಜನೆಯ ಕಾಮಗಾರಿ ಸ್ಥಳಕ್ಕೆ ಸಚಿವರಾದ ಮುನಿಯಪ್ಪ ಅವರೊಂದಿಗೆ ಭೇಟಿ ನೀಡಿ, ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದ್ದೇವೆ. ವಿಶ್ವದಲ್ಲೇ ಅತಿ ಎತ್ತರದ ಅಕ್ವೆಡಕ್ಟ್‌ ಎಂಬ ಹೆಗ್ಗಳಿಕೆಗೆ ಎತ್ತಿನಹೊಳೆ ಯೋಜನೆಯ ಅಕ್ವೆಡಕ್ಟ್‌  ಪಾತ್ರವಾಗಿದೆ. ಸುಮಾರು 10.5 ಕಿ.ಮೀ. ಉದ್ದದ ಅಕ್ವೆಡಕ್ಟ್‌ ಮೂಲಕ 3,300 ಕ್ಯುಸೆಕ್ ನೀರನ್ನು ಸಾಗಿಸುವ ಗುರಿ ಇದೆ. ಈ ಯೋಜನೆ ಇಡೀ ದೇಶಕ್ಕೆ ಮಾದರಿಯಾಗಿದೆ. 2027ರ ಒಳಗೆ ಎತ್ತಿನಹೊಳೆ ಯೋಜನೆಯನ್ನು ಪೂರ್ಣಗೊಳಿಸಲು ನಮ್ಮ ಸರ್ಕಾರ ಬದ್ಧವಿದೆ ಎಂದು ಶಿವಕುಮಾರ್ ತಿಳಿಸಿದರು.

ನಮ್ಮ ಸರ್ಕಾರ ಇಷ್ಟೆಲ್ಲಾ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿರುವಾಗ, ಬಿಜೆಪಿಯವರ ಸಾಧನೆಯೇನು? ಅಡುಗೆ ಅನಿಲದ ಬೆಲೆ ಇಂದು ಗಗನಕ್ಕೆ ಹೋಗಿದೆ. ಜಿಎಸ್‌ಟಿ ಹೆಸರಿನಲ್ಲಿ ತರಕಾರಿ, ಎಳನೀರು ಮಾರುವವನಿಗೂ ನೋಟಿಸ್‌ ನೀಡಲಾಗುತ್ತಿದೆ. ಬಿಜೆಪಿಯವರು ಜಿಎಸ್‌ಟಿ ತಂದು ಬಡವರಿಗೆ ತೊಂದರೆ ಕೊಡುವ ಕೆಲಸ ಮಾಡುತ್ತಿದ್ದಾರೆ ಎಂದು ಶಿವಕುಮಾರ್ ಆರೋಪಿಸಿದರು.

 

Share This Article
error: Content is protected !!
";