ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸುಳ್ಳು ಹೇಳಿ ಮೆಟ್ರೋ ದರ ಏರಿಸಿ ಪ್ರಯಾಣಿಕರ ಸುಲಿಗೆ ಮಾಡುತ್ತಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ ! ಎಂದು ಜೆಡಿಎಸ್ ಹೇಳಿದೆ. ಮೆಟ್ರೋ ದರ ಏರಿಕೆ ಬಗ್ಗೆ ಕೇಂದ್ರ ಸರ್ಕಾರದ ಮೇಲೆ ಬೊಟ್ಟು ಮಾಡಿದ್ದ ಕಾಂಗ್ರೆಸ್ ನಾಯಕರು ಈಗ ಬೆತ್ತಲಾಗಿದ್ದಾರೆ.
ಮೆಟ್ರೋ ಪ್ರಯಾಣ ದರ ಇಳಿಕೆ ಮಾಡಬೇಕು ಎಂದು ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆ (ಐಸೆಕ್) ನೀಡಿದ್ದ ವರದಿಯನ್ನು ಕಸದ ಬುಟ್ಟಿಗೆ ಎಸೆದು, ದರ ಇಳಿಸುವ ಬದಲು ದರ ಹೆಚ್ಚಳ ಮಾಡಿ ಪ್ರಯಾಣಿಕರ ಹಗಲು ದರೋಡೆ ಮಾಡುತ್ತಿದ್ದೀರಿ ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.
‘ನಮ್ಮ ಮೆಟ್ರೋ ಟಿಕೆಟ್ ದರಗಳು ತುಲನಾತ್ಮಕವಾಗಿ ಹೆಚ್ಚು. ಆದ್ದರಿಂದ ಹೆಚ್ಚಿನ ಪ್ರಯಾಣಿಕರನ್ನು ಉತ್ತೇಜಿಸುವ ಸಲುವಾಗಿ ಮೂಲ ದರಗಳನ್ನು ಕಡಿಮೆ ಮಾಡಬಹುದು. ಮತ್ತು ಸಾರ್ವಜನಿಕ ಸಾರಿಗೆಯು ಸಮಂಜಸವಾದ ಬೆಲೆಯನ್ನು ಹೊಂದಿರಬೇಕು ಎಂದು ಮೌಲ್ಯಮಾಪನ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಅವರೇ ಅಧಿಕಾರಕ್ಕೆ ಬಂದ ದಿನದಿಂದಲೂ ಲೂಟಿಯನ್ನೇ ಕಾಯಕ ಮಾಡಿಕೊಂಡು ರಾಜ್ಯದ ಜನರನ್ನು ಬಣ್ಣ ಬಣ್ಣದ ಮಾತುಗಳಿಂದ ವಂಚಿಸುತ್ತಿದ್ದೀರಿ ಎಂದು ಜೆಡಿಎಸ್ ಆರೋಪಿಸಿದೆ.
ಅವೈಜ್ಞಾನಿಕ ಗ್ಯಾರಂಟಿಗಳಿಗೆ ಹಣವಿಲ್ಲದೇ ಜನರನ್ನು ಪಿಕ್ ಮಾಡುವುದರಲ್ಲಿ ಕಾಂಗ್ರೆಸ್ ಸಿದ್ಧಹಸ್ತರು. ನಾಚಿಕೆಯಾಗಬೇಕು ನಿಮ್ಮ ಸರ್ಕಾರದ ದುರಾಡಳಿತಕ್ಕೆ ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.

