ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೆಂಪೇಗೌಡರು ಕಟ್ಟಿದ ಕೆರೆಗಳನ್ನು ರಿಯಲ್ ಎಸ್ಟೇಟ್ ಕುಳಗಳ ಕಪಿಮುಷ್ಠಿಗೆ ಕೊಡಲು ಹೊರಟಿದೆ ಕಾಂಗ್ರೆಸ್ ಸರ್ಕಾರ! ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ.
ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಕಾಯ್ದೆ–2024ರ (ಕೆಟಿಸಿಡಿಎ) ಅಡಿ ಇರುವ ಎಲ್ಲ ಕೆರೆಗಳಿಗೆ 30 ಮೀಟರ್ ಬಫರ್ ಝೋನ್ ಇರಬೇಕು ಎಂಬ ನಿಯಮಕ್ಕೆ ತಿದ್ದುಪಡಿ ತಂದು ಸಂರಕ್ಷಿತ ಪ್ರದೇಶವನ್ನು ಕಡಿಮೆ ಮಾಡಲು ಹೊರಟಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರ ರಿಯಲ್ ಎಸ್ಟೇಟ್ ಮಾಫಿಯಾಗೆ ಶರಣಾಗಿ ಬೆಂಗಳೂರು ನಗರವನ್ನು ಸರ್ವನಾಶ ಮಾಡಲು ಪಣ ತೊಟ್ಟಂತಿದೆ.
ಈ ತಿದ್ದುಪಡಿ ಜಾರಿಯಾದರೆ, ಬಿಬಿಎಂಪಿ ವ್ಯಾಪ್ತಿಯಲ್ಲಿರುವ 172 ಕೆರೆಗಳ ಬಫರ್ ಝೋನ್ 30 ಮೀಟರ್‌ಗಿಂತ ಕಡಿಮೆಯಾಗಲಿದ್ದು, ಪ್ರಕೃತಿ ವಿಕೋಪಗಳಿಗೆ ದಾರಿ ಮಾಡಿಕೊಡಲಿದೆ ಎಂದು ಅಶೋಕ್ ಆತಂಕ ವ್ಯಕ್ತಪಡಿಸಿದ್ದಾರೆ.
ಒಂದು ಕಡೆ ಸುಪ್ರೀಂ ಕೋರ್ಟ್, ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ), ಹೈಕೋರ್ಟ್ ಹಲವು ಬಾರಿ ಆದೇಶ ನೀಡಿದ್ದರೂ ಕೆರೆಗಳ ಒತ್ತುವರಿಯನ್ನು ತೆರವು ಮಾಡಿಲ್ಲ. ಬಫರ್ ಝೋನ್ ಅಂತೂ ಇಲ್ಲವೇ ಇಲ್ಲ, ಈಗ ಕೆರೆಗಳ ‘ಸಂರಕ್ಷಿತ ವಲಯ’ವನ್ನು ಕಡಿಮೆ ಮಾಡುವ ಕಾಂಗ್ರೆಸ್ ಸರ್ಕಾರದ ತೀರ್ಮಾನ ಬ್ರ್ಯಾಂಡ್ ಬೆಂಗಳೂರಿನ ಭವಿಷ್ಯಕ್ಕೆ ಮಾರಕವಾಗಲಿದೆ.
ಡಿಸಿಎಂ ಡಿ.ಕೆ ಶಿವಕುಮಾರ್ ಅವರೇ, ಬ್ರ್ಯಾಂಡ್ ಬೆಂಗಳೂರು ಕಟ್ಟುತ್ತೇನೆ ಎಂದು ಬೆಂಗಳೂರಿನ ಕೆರೆಗಳನ್ನ ಭೂ ಮಾಫಿಯಾಗೆ ಧಾರೆ ಎರೆಡು ಕೊಡುತ್ತಿದ್ದೀರಲ್ಲ ಸ್ವಾಮಿ, ನಿಮ್ಮ ಭೂದಾಹಕ್ಕೆ ಇನ್ನೆಷ್ಟು ಕರೆಗಳು ಬಲಿಯಾಗಬೇಕು? ಎಂದು ಅಶೋಕ್ ಪ್ರಶ್ನಿಸಿದ್ದಾರೆ.

