ಚಂದ್ರವಳ್ಳಿ ನ್ಯೂಸ್, ಬೆಂಗಳೂರು
ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಲ್ಯಾಣಗಳಿಗಾಗಿ ಮೀಸಲಾಗಿದ್ದ ಹಣವನ್ನು ದುರುಪಯೋಗಿಸಿಕೊಂಡು ಪರಿಶಿಷ್ಟರನ್ನು ವಂಚಿಸಿದ ಕಾಂಗ್ರೆಸ್ ಸರ್ಕಾರ ತಾನು ಅಧಿಕಾರಕ್ಕೆ ಬಂದಾಗಿನಿಂದಲೂ ಈ ಸಮುದಾಯಗಳ ನೋವು, ಸಂಕಷ್ಟ, ದುಃಖ- ದುಮ್ಮಾನಗಳನ್ನು ತೋಡಿಕೊಳ್ಳಲು ಆಗದ ಪರಿಸ್ಥಿತಿಗೂ ಕಾರಣವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.
ಕರ್ನಾಟಕ ಕಾಂಗ್ರೆಸ್ ಸರ್ಕಾರ ಈ ವರೆವಿಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗಕ್ಕೆ ಅಧ್ಯಕ್ಷರ ನೇಮಕ ಮಾಡುವ ಕಾಳಜಿ ಪ್ರದರ್ಶಿಸದೆ ಆಯೋಗವು ನಿಷ್ಕ್ರೀಯಗೊಳ್ಳುವಂತೆ ಮಾಡಿದೆ. ಆಯೋಗಗಳ ಅಧ್ಯಕ್ಷರ ನೇಮಕ ನೆನೆಗುದಿಗೆ ಬಿದ್ದಿರುವುದನ್ನು ಪ್ರಶ್ನಿಸಿ ಸದ್ಯ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದ್ದು, ಘನ ನ್ಯಾಯಾಲಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹಾಗೂ ಸಂವಿಧಾನ ಕಾಳಜಿಯನ್ನು ಬೊಗಳೆ ಬಿಡುವ ಕಾಂಗ್ರೆಸ್ ಸರ್ಕಾರ ಸಂವಿಧಾನದ ಹೆಸರಿನಲ್ಲಿ ಉತ್ಸವಗಳನ್ನು ಮಾಡುತ್ತಿದೆಯೇ ಹೊರತು ಅದರ ಮೂಲ ಆಶಯವನ್ನು ಗಾಳಿಗೆ ತೂರುತ್ತಿದೆ. ಶೋಷಿತರ ದನಿಯಾಗಿ ಪರಿಶಿಷ್ಟ ಸಮುದಾಯಗಳ ರಕ್ಷಣೆಗೆ ಹಾಗೂ ಪರಿಶಿಷ್ಟ ಕಲ್ಯಾಣದ ಕುರಿತು ವರದಿ ನೀಡಬೇಕಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗ ಈ ಸರ್ಕಾರ ಬಂದಾಗಿನಿಂದಲೂ ನಿಂತ ನಿರಂತಾಗಿರುವುದು ಅತ್ಯಂತ ದುರ್ದೈವದ ಸಂಗತಿಯಾಗಿದೆ ಎಂದು ವಿಜಯೇಂದ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪರಿಶಿಷ್ಟರ ಬಗ್ಗೆ ಮೊಸಳೆಗಣ್ಣೀರು ಸುರಿಸುವ ಸರ್ಕಾರದ ಅಸಲಿ ಮುಖವಾಡ ಈಗ ಬಯಲಾಗಿದೆ. ಪರಿಶಿಷ್ಟರ ಆಯೋಗಗಳಿಗೆ ಅಧ್ಯಕ್ಷರ ನೇಮಕವಾಗಿಲ್ಲದಿರುವ ವಿಷಯ ನ್ಯಾಯಾಲಯದ ಮೆಟ್ಟಿಲು ಹತ್ತುವ ಪರಿಸ್ಥಿತಿಯವರೆಗೂ ತಲುಪಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ. ನ್ಯಾಯಾಲಯದಿಂದಲೇ ಈ ಸರ್ಕಾರಕ್ಕೆ ಚಾಟಿ ಏಟು ಬೀಳದ ಹೊರತು ಪರಿಶಿಷ್ಟರ ಕುರಿತು ತಲೆಕೆಡಿಸಿಕೊಳ್ಳುವುದಿಲ್ಲ ಎಂಬುದು ಇದೀಗ ಸಾಬೀತಾಗಿದೆ ಎಂದು ವಿಜಯೇಂದ್ರ ದೂರಿದ್ದಾರೆ.

