ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದ ಕಾಂಗ್ರೆಸ್ ಸರ್ಕಾರ ಕನೇರಿ ಕಾಡಸಿದ್ದೇಶ್ವರ ಮಠದ ಅದೃಶ್ಯ ಕಾಡಸಿದ್ದೇಶ್ವರ ಶ್ರೀಗಳಿಗೆ ವಿಜಯಪುರ ಪ್ರವೇಶ ನಿರ್ಬಂಧ ಆದೇಶ ಹೊರಡಿಸುವ ಮೂಲಕ ಸರ್ವಾಧಿಕಾರಿ ಮನಸ್ಥಿತಿಯನ್ನು ಪ್ರದರ್ಶಿಸುತ್ತಿರುವುದು ಅತ್ಯಂತ ಖಂಡನೀಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದೂ ಧರ್ಮವನ್ನು ಒಡೆಯುವ ಕುತಂತ್ರ ನೀತಿ ಅನುಸರಿಸುತ್ತಿರುವ ಸಿದ್ದರಾಮಯ್ಯ ನವರ ನೇತೃತ್ವದ ಕರ್ನಾಟಕ ಕಾಂಗ್ರೆಸ್ ಸರ್ಕಾರ ಸಾಧು-ಸಂತರನ್ನು ಶಾಂತಿ ಕದಡುವವರು ಎಂಬ ಹಣೆಪಟ್ಟಿ ಹಚ್ಚುವ ಮೂಲಕ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ. ಶ್ರೀಗಳಿಗೆ ವಿಜಯಪುರ ಜಿಲ್ಲೆಯ ಪ್ರವೇಶವನ್ನು ನಿರ್ಬಂಧಿಸಿ ಆದೇಶ ಹೊರಡಿಸಿರುವ ಜಿಲ್ಲಾಡಳಿತದ ಕ್ರಮ ರಾಜಕೀಯ ಪ್ರೇರಿತ ಹಾಗೂ ಪ್ರಜಾತಂತ್ರ ವಿರೋಧಿ ನಡೆಯಾಗಿದೆ.
ದೇಶದ ಮೇಲೆ ತುರ್ತು ಪರಿಸ್ಥಿತಿಯನ್ನು ಹೇರಿದ ಕುಖ್ಯಾತಿಯ ಕಾಂಗ್ರೆಸ್ ಅದೇ ಮನಸ್ಥಿತಿಯಲ್ಲಿಯೇ ಈ ಕ್ಷಣಕ್ಕೂ ಆಡಳಿತ ನಡೆಸುತ್ತಿದೆ ಎಂಬುದಕ್ಕೆ ಕಾಂಗ್ರೆಸ್ ಆಡಳಿತದ ಧೋರಣೆಗಳು ಸಾಕ್ಷಿ ಒದಗಿಸುತ್ತಿವೆ.
ಸಾಧು ಸಂತರ ನಡುವೆ ಬಿರುಕು ಮೂಡಿಸುವ ಬದಲು ಸೌಹಾರ್ದತೆಯ ವಾತಾವರಣ ನಿರ್ಮಿಸುವತ್ತ ಸರ್ಕಾರ ಗಮನ ಹರಿಸಲಿ ಎಂದು ವಿಜಯೇಂದ್ರ ತಾಕೀತು ಮಾಡಿದ್ದಾರೆ.

