ಚಂದ್ರವಳ್ಳಿ ಬೆಂಗಳೂರು ಕರ್ನಾಟಕ ಕಾಂಗ್ರೆಸ್ ಸರ್ಕಾರದ ಎಡಬಿಡಂಗಿ ಆದೇಶ ಈಗ ದೇಶದ ಕರಾವಳಿ ಭದ್ರತೆಗೆ ದೊಡ್ಡ ಗಂಡಾಂತರ ತಂದೊಡ್ಡಿದೆ ಎಂದು ಜೆಡಿಎಸ್ ಆರೋಪಿಸಿದೆ.
ಸಿದ್ದರಾಮಯ್ಯ ಸರ್ಕಾರ ಕರಾವಳಿ ಕಾವಲು ಪಡೆ ಬಳಸುವ ಬೋಟ್‌ಗಳಿಗೆ ನೀಡುವ ಇಂಧನ ಪ್ರಮಾಣವನ್ನು ಶೇ.50% ಕಡಿತಗೊಳಿಸಿರುವುದು, ಭದ್ರತೆ ದೃಷ್ಟಿಯಿಂದ ಸಮುದ್ರ ಗಸ್ತು ಕಾರ್ಯಾಚರಣೆಗೆ ಭಾರಿ ಹೊಡೆತ ಬಿದ್ದಿದೆ.
ಬೋಟ್‌ಗಳಿಗೆ ಮಾಸಿಕ ಪೂರೈಕೆ ಮಾಡುತ್ತಿದ್ದ 600 ಲೀಟರ್ ಇಂಧನವನ್ನು, ಕೇವಲ 250 ಲೀಟರ್ಗೆ ಸೀಮಿತಗೊಳಿಸಿದೆ. ಇದರ ಪರಿಣಾಮ ದಿನಕ್ಕೆ 10 ತಾಸಿನವರೆಗೂ ಗಸ್ತು ತಿರುಗುತ್ತಿದ್ದ ಕಾವಲು ಪಡೆ ಕೇವಲ 1 ಗಂಟೆ ಮಾತ್ರ ಸಮುದ್ರದಲ್ಲಿ ಗಸ್ತು ತಿರುಗಲು ಸಾಧ್ಯ ಎಂದು ಜೆಡಿಎಸ್ ತಿಳಿಸಿದೆ.
ಸರ್ಕಾರದ ಇಂಧನ ಕಡಿತ ಆದೇಶ ಮುಂದೊಂದು ದಿನ ರಾಜ್ಯದ ಭದ್ರತೆಗೂ ಹಾನಿ ಉಂಟುಮಾಡುವುದರಲ್ಲಿ ಅನುಮಾನವೇ ಇಲ್ಲ. ರಾಜ್ಯ ಸರ್ಕಾರ ಭದ್ರತೆಯ ದೃಷ್ಟಿಯಿಂದ ಈ ಎಡವಟ್ಟು ನಿರ್ಧಾರವನ್ನು ಹಿಂಪಡೆಯಬೇಕು ಎಂದು ಜೆಡಿಎಸ್ ಆಗ್ರಹ ಮಾಡಿದೆ.

