ಒಳ ಮೀಸಲಾತಿ ಜಾರಿಗೆ ಕಾಂಗ್ರೆಸ್ ಸರ್ಕಾರ ಮೀನಮೇಷ-ಅಶೋಕ್

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಒಳ ಮೀಸಲಾತಿ ಜಾರಿಗೆ ಕಾಂಗ್ರೆಸ್ ಸರ್ಕಾರ ಮೀನಮೇಷ ಎಣಿಸುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಗಂಭೀರ ಆರೋಪ ಮಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಳ ಮೀಸಲಾತಿಗೆ ಪ್ರಧಾನಿ ನರೇಂದ್ರ ಮೋದಿಯವರ ಸಹಮತವಿದೆ. ಹಿಂದೆ ಬಿಜೆಪಿ ಸರ್ಕಾರ ಒಳ ಮೀಸಲಾತಿ ಜಾರಿಗೆ ಪ್ರಯತ್ನ ಮಾಡಿತ್ತು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು, ಒಳ ಮೀಸಲಾತಿ ಬಗ್ಗೆ ದೊಡ್ಡದಾಗಿ ಮಾತಾಡುತ್ತಿದ್ದಾರೆ. ಜಾತಿ ಗಣತಿಯ ಬಗ್ಗೆ ಶಂಖ ಊದುತ್ತಿರುತ್ತಾರೆ ಆದರೆ ಅನುಷ್ಠಾನ ಮಾಡಲು ಮೀನಾಮೇಷ ಎಣಿಸುತ್ತಿದ್ದಾರೆಂದು ದೂರಿದರು.

ದೇಶದ ಉನ್ನತ ನ್ಯಾಯಪೀಠ ಸುಪ್ರೀಂ ಕೋರ್ಟ್ ಒಳ ಮೀಸಲಾತಿ ಜಾರಿ ಅಧಿಕಾರವನ್ನು ದೇಶದ ಆಯಾಯ ರಾಜ್ಯ ಸರ್ಕಾರಗಳಿಗೆ ನೀಡಿ ಆದೇಶ ಮಾಡಿದೆ. ಆದರೆ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಒಳ ಮೀಸಲಾತಿ ಜಾರಿಯಲ್ಲಿ ದ್ವಿಮುಖ ನೀತಿ ಅನುಸರಿಸುತ್ತಿದೆ ಎಂದು ದೂರಿದರು.

ಹಿಂದಿನ ಬಿಜೆಪಿ ಸರ್ಕಾರ ಒಳ ಮೀಸಲಾತಿಯನ್ನು ಜಾರಿಗೆ ತಂದಿತ್ತು. ಪ್ರಧಾನಿ ನರೇಂದ್ರ ಮೋದಿ ತೆಲಂಗಾಣಕ್ಕೆ ಬಂದಾಗ ಒಳ ಮೀಸಲಾತಿಗೆ ಅನುಮೋದನೆ ನೀಡಿದ್ದರು. ಆದರೂ ಕಾಂಗ್ರೆಸ್ ಮಾತ್ರ ಇನ್ನೂ ಮೀನಮೇಷ ಎಣಿಸುತ್ತಿದೆ. ಒಳ ಮೀಸಲಾತಿ ಮತ್ತು ಜಾತಿ ಗಣತಿ ವಿಚಾರದಲ್ಲೂ ಕಾಂಗ್ರೆಸ್ ಸರ್ಕಾರ ಎಸ್‌ಐಟಿ ರಚಿಸಿದರೆ ಅಚ್ಚರಿ ಇಲ್ಲ.

ರಾಜ್ಯದಲ್ಲಿ ಈಗ ಎಸ್‌ಐಟಿಯೇ ಕಂಡುಬರುತ್ತಿದೆ. ಇಲ್ಲಿ ಒಬ್ಬೊಬ್ಬರಿಗೆ ಒಂದೊಂದು ಕಾನೂನು ಅನ್ವಯವಾಗುತ್ತಿದ್ದು, ಎಸ್‌ಐಟಿಯ ಮೇಲೆ ಅನುಮಾನ ಹೆಚ್ಚಾಗಿ ಅದನ್ನೇ ತನಿಖೆ ಮಾಡುವ ಸ್ಥಿತಿ ಬಂದಿದೆ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.

ಎಸ್‌ಐಟಿ ಪ್ರಕಾರ, ಶಾಸಕ ಮುನಿರತ್ನ ಅವರಿಗೆ ಒಂದು ಕಾನೂನು, ವಿನಯ್ ಕುಲಕರ್ಣಿ ಅವರಿಗೆ ಒಂದು ಕಾನೂನು ಎಂಬಂತಾಗಿದೆ. ಎಸ್‌ಐಟಿಗಳ ನಿಜ ಬಣ್ಣ ಬಯಲು ಮಾಡಲು ಡಬಲ್ ಎಸ್‌ಐಟಿ ಎಂಬ ಘಟಕ ಸ್ಥಾಪಿಸಬೇಕಿದೆ ಎಂದು ಆರ್.ಅಶೋಕ್ ವ್ಯಂಗ್ಯವಾಡಿದರು.

ಕಾಂಗ್ರೆಸ್ ಸರ್ಟಿಫಿಕೇಟ್ ಬೇಡ-
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಮುಡಾ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಖಾಂಡ ಭ್ರಷ್ಟಾಚಾರ ಆಗಿದೆ. ಇದರಲ್ಲಿ ಕಾಂಗ್ರೆಸ್ ನಾಯಕರು ಶೋಷಿತರ ಮತ್ತು ಸರ್ಕಾರದ ಹಣ ನುಂಗಿ ನೀರು ಕುಡಿದಿದ್ದಾರೆ. ಈ ಪ್ರಕರಣಗಳ ವಿರುದ್ಧ ಬಿಜೆಪಿ ಸಮರ್ಥವಾಗಿ ಪ್ರತಿಭಟನೆ ಮಾಡಿದೆ ಎಂದು ಅವರು ಹೇಳಿದರು.

ಬಿ.ಎಸ್.ಯಡಿಯೂರಪ್ಪನವರ ಪ್ರಕರಣಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಆದರೆ ಮುಡಾ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ತನಿಖೆಗೆ ಯಾವುದೇ ತಡೆ ಇಲ್ಲ. ಈ ದೇಶದಲ್ಲಿ ನ್ಯಾಯಾಂಗವೇ ಉನ್ನತವಾದುದು. ಕಾಂಗ್ರೆಸ್ ನ್ಯಾಯಾಲಯದ ಸರ್ಟಿಫಿಕೇಟ್ ಬಿಜೆಪಿಗೆ ಬೇಕಿಲ್ಲ ಎಂದು ಆರ್.ಅಶೋಕ್ ವ್ಯಂಗ್ಯವಾಡಿದರು.

- Advertisement -  - Advertisement - 
Share This Article
error: Content is protected !!
";