ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಗರದ ಫ್ರೀಡಂ ಪಾರ್ಕ್ನಲ್ಲಿ ಕಾಂಗ್ರೆಸ್ನಿಂದ ಕೇಂದ್ರ ಸರ್ಕಾರವು ಅಗತ್ಯ ವಸ್ತುಗಳ ಬೆಲೆ ನಿರಂತರ ಏರಿಕೆ ಖಂಡಿಸಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಎಲ್ಪಿಜಿ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಸೇರಿದಂತೆ ಕೇಂದ್ರದಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ನಾಯಕರು ಆಕ್ರೋಶ ಹೊರಹಾಕಿದರು. ಕೇಂದ್ರ ಸರ್ಕಾರ, ಪ್ರಧಾನಿ ಮೋದಿ ವಿರುದ್ಧ ಘೋಷಣೆ ಕೂಗಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಕೇಂದ್ರ ಲಜ್ಜೆಗೆಟ್ಟ ಸರ್ಕಾರವಾಗಿದ್ದು ಸಿಲಿಂಡರ್ ಬೆಲೆ ₹50 ಏರಿಕೆ ಮಾಡಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ಗೆ ಪ್ರತಿಭಟನೆ ಮಾಡುವ ಯಾವುದೇ ನೈತಿಕತೆ ಇಲ್ಲ. ಅವರಿಗೆ ಮಾನ, ಮರ್ಯಾದೆ ಇದ್ದರೆ ಪ್ರತಿಭಟನೆ ಮಾಡುತ್ತಿರಲಿಲ್ಲ. ಅವರು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿದ್ದರಿಂದ ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಮೋದಿ ಅವರು ಅಚ್ಚೇ ದಿನ ಆಯೇಗಾ ಅಂತ ಹೇಳಿದ್ದರು. ಆದರೆ ಒಳ್ಳೆಯ ದಿನ ಬಂತಾ?. ಆದರೆ, ಎಲ್ಲ ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗಿದೆ. ಸಿಮೆಂಟ್ ಬೆಲೆ, ಪಿವಿಸಿ ಪೈಪ್ ಬೆಲೆ, ಸಕ್ಕರೆ ಬೆಲೆ, ಬೇಳೆ ಕಾಳುಗಳ ಬೆಲೆ, ಉಪ್ಪು ಬೆಲೆ, ಅಕ್ಕಿ, ರಾಗಿ ಬೆಲೆಗಳು ಏರಿಕೆಯಾಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ ಹೆಚ್ಚಳವಾಗಿದೆ ಎಂದು ಸಿದ್ದರಾಮಯ್ಯ ಕಿಡಿಕಾರಿದರು.
ಬಡವರ ಬಗ್ಗೆ ಮಾತನಾಡುತ್ತಿರುವ ಮೋದಿಯವರು ಅಡುಗೆ ಸಿಲಿಂಡರ್ ಮೇಲಿನ ಸಹಾಯಧನವನ್ನು ಏಕೆ ತೆಗೆದು ಹಾಕಿದ್ದೀರಿ.ಗ್ಯಾರಂಟಿ ಯೋಜನೆಗೆ ವಾರ್ಷಿಕ 52,000 ಕೋಟಿ ರೂ. ಹಣ ಮೀಸಲಿಟ್ಟಿದ್ದೇವೆ. ಬೆಲೆ ಏರಿಕೆಗೆ ನರೇಂದ್ರ ಮೋದಿ ಕಾರಣ. ನಮ್ಮ ವಿರುದ್ಧ ಹೋರಾಟ ಮಾಡುವ ನೈತಿಕ ಹಕ್ಕಿಲ್ಲ. ಹಾಲಿನ ಬೆಲೆ ಏರಿಕೆ ಮಾಡುವಂತೆ ರೈತರು ಮನವಿ ಮಾಡುತ್ತಿದ್ದರು. ಅದಕ್ಕಾಗಿ ಹಾಲಿನ ಬೆಲೆ ಏರಿಕೆ ಮಾಡಿದ್ದೇವೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಹಾಲಿನ ದರ ಕಡಿಮೆ ಇದೆ. ಬಿಜೆಪಿಯವರು ರೈತರ ವಿರೋಧಿಗಳು. ಅದಕ್ಕಾಗಿ ಹಾಲಿನ ದರ ಏರಿಕೆ ವಿರುದ್ಧ ಹೋರಾಟ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿಗಳು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಯಕರ್ತರು ಇನ್ನೊಂದು ಸ್ವಾತಂತ್ರ್ಯ ಹೋರಾಟ ಮಾಡಲು ತಯಾರಾಗಬೇಕು. ಸಿದ್ದಾಂತ ಏನು ಎಂಬ ಬಗ್ಗೆ ನಮಗೆ ಸ್ಪಷ್ಟತೆ ಇರಬೇಕು. ಹಾಗಿದ್ದಾಗ ಮಾತ್ರ ಹೋರಾಟ ಮಾಡಲು ಸಾಧ್ಯ. ಬೀದಿಗಿಳಿದು ಹೋರಾಟ ಮಾಡಿ, ಜಿಲ್ಲಾ ಮಟ್ಟದಲ್ಲಿ ಹೋರಾಟ ಮಾಡಬೇಕು. ಜನರಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕು. ಆರ್ಎಸ್ಎಸ್, ಬಿಜೆಪಿಯವರು ಬರೀ ಸುಳ್ಳು ಹೇಳುತ್ತಾರೆ. ಅವರ ಮನೆ ದೇವರೇ ಸುಳ್ಳು ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಹೆಚ್.ಡಿ.ಕುಮಾರಸ್ವಾಮಿ ನನ್ನ ವಿರುದ್ಧ ಟನ್ಗಟ್ಟಲೆ ದಾಖಲೆ ಇದೆ ಅಂದರು. ನಮ್ಮ ಹುಡುಗರು ಜೆಡಿಎಸ್ ಕಚೇರಿ ಮುಂದೆ ಟ್ರಕ್ ತಂದಾಗ ನನ್ನ ವಿರುದ್ಧದ ದಾಖಲೆ ಕೊಟ್ಟು ಕಳುಹಿಸಿ ಕೊಡಬೇಕಿತ್ತು. ನಿನ್ನ ಗೊಡ್ಡು ಬೆದರಿಕೆಗೆ ಹೆದರುವ ಮಗ ನಾನಲ್ಲ. ನಮ್ಮ ಬದುಕು, ನಮ್ಮ ಶ್ರಮ, ನಾನು ಆಸ್ತಿ ಮಾಡುತ್ತೇನೆ. ಅಕ್ರಮ ಆಗಿದ್ದರೆ ಸರ್ಕಾರ ನೋಡಿಕೊಳ್ಳುತ್ತದೆ. ನಿನ್ನ ಚರಿತ್ರೆ ಏನು ಎಂಬುದನ್ನು ನಾನು ಇನ್ನೂ ಬಿಚ್ಚಿಟ್ಡಿಲ್ಲ. ಅಣ್ಣ ತಮ್ಮಂದಿರ ಆಸ್ತಿ ವಿವರವನ್ನು ನಾನು ಇನ್ನೂ ಹೊರಬಿಟ್ಟಿಲ್ಲ ಎಂದು ಎಚ್ಚರಿಕೆ ನೀಡಿದರು.
ಅವನು ಯಾವನೋ ರಾಜ್ಯಪಾಲರಿಗೆ ನನ್ನ ವಿರುದ್ಧ ದೂರು ಕೊಟ್ಟಿದ್ದಾನೆ. ಆ ಶಾಸಕ ವಿಧಾನಸೌಧದಲ್ಲಿ ಏನು ಮಾಡಿದ್ದಾನೆ, ಮಹಿಳೆಯರ ಮೇಲೆ ಏನು ದೌರ್ಜನ್ಯ ಮಾಡಿದ್ದಾನೆ ಎಲ್ಲವೂ ಸಾಬೀತಾಗಿದೆ ಎಂದು ಶಾಸಕ ಮುನಿರತ್ನ ವಿರುದ್ಧ ಡಿಸಿಎಂ ಶಿವಕುಮಾರ್ ವಾಗ್ದಾಳಿ ನಡೆಸಿದರು.
ನಿಮ್ಮ ಆಕ್ರೋಶ ಬೆಲೆ ಏರಿಕೆ ಕಾರಣಕರ್ತರಾದ ಕೇಂದ್ರದ ಬಿಜೆಪಿ ವಿರುದ್ಧ ಇರಬೇಕು. ನಿಮ್ಮ ಪಕ್ಷದಲ್ಲಿ ಆಂತರಿಕ ಜಗಳ, ನಾಯಕತ್ವದ ಕೊರತೆ ಇದೆ. ಇದನ್ನು ಮುಚ್ಚಲು ಪ್ರವಾಸ ಕೈಗೊಂಡಿದ್ದೀರಿ.ನಮ್ಮದು ರೈತರ, ಕಾರ್ಮಿಕರ ಪರವಾಗಿ ಇರುವ ಸರ್ಕಾರ. ಹಾಲಿನಬೆಲೆ ಏರಿಕೆ ಮಾಡಿ 4 ರೂ.ಗಳನ್ನು ರೈತರಿಗೆ ಕೊಡುತ್ತಿದ್ದೇವೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಹಾಲಿನ ದರ ಕಡಿಮೆ ಇದೆ. ಸಿಮೆಂಟ್ ಬೆಲೆ ಹೆಚ್ಚಾಯಿತು. ಅಡುಗೆ ಎಣ್ಣೆ ಬೆಲೆ, ಉಪ್ಪು ಬೆಲೆ, ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿದೆ. ಇದಕ್ಕೆ ಕಾರಣ ಕೇಂದ್ರದ ಬಿಜೆಪಿ ಸರ್ಕಾರ ಎಂದು ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಭ್ರಷ್ಟ ಬಿಜೆಪಿ, ಜೆಡಿಎಸ್ ವಿರುದ್ಧ ಹೋರಾಟ ಮಾಡಿ, 2028ರಲ್ಲಿ ಕಾಂಗ್ರೆಸ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ. ಬಿಜೆಪಿಯವರು ಕಾಮಾಲೆ ಕಣ್ಣಲ್ಲಿ ನೋಡುತ್ತಿದ್ದಾರೆ. ಆತ್ಮಸಾಕ್ಷಿಯಿಂದ ನೋಡಿ ಆವಾಗ ನಮ್ಮ ಸರ್ಕಾರದ ಸಾಧನೆ ಗೊತ್ತಾಗುತ್ತದೆ. ನಮ್ಮ ಹೋರಾಟ ಜನರ ಪರವಾಗಿ, ನಮ್ಮ ಸರ್ಕಾರ ಜನರ ಹಿತದ ಪರವಾಗಿದೆ ಎಂದು ಹೇಳಿದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಮಾತನಾಡಿ, ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಬೆಲೆ ಏರಿಕೆ ಮಾಡಿದೆ. ಎಲ್ಪಿಜಿ ಬೆಲೆ ಏರಿಕೆ ಮಾಡಿರುವ ವಿರುದ್ಧ ಜನಾಕ್ರೋಶ ಇದೆ. ಅಡುಗೆ ಅನಿಲ ಬೆಲೆ ಏರಿಕೆಯಿಂದ ರಾಜ್ಯದ ಜನರ ಮೇಲೆ ವಾರ್ಷಿಕ 550 ಕೋಟಿ ರೂ. ಹೊರೆ ಬೀಳುತ್ತಿದೆ. ಈ ಬೆಲೆ ಏರಿಕೆ ವಿರುದ್ಧ ಬಿಜೆಪಿ, ಜೆಡಿಎಸ್ ಶಾಕಸರು ಏಕೆ ಮಾತನಾಡುತ್ತಿಲ್ಲ. ಇದರ ವಿರುದ್ಧ ಮೋದಿ ಬಳಿ ಮಾತನಾಡುವ ಧೈರ್ಯ ಇಲ್ಲದೇ ಇದ್ದರೆ ಬಿಜೆಪಿ ಸಂಸದರು, ಶಾಸಕರು ರಾಜೀನಾಮೆ ನೀಡಿ ಮನೆಗೆ ಹೋಗಲಿ ಎಂದು ಅವರು ಆಗ್ರಹಿಸಿದರು.
ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಹೋರಾಟ-
ಈ ಹೋರಾಟವನ್ನು ಪ್ರತಿ ಜಿಲ್ಲೆ, ತಾಲೂಕು ಮಟ್ಟಕ್ಕೆ ಕೊಂಡೊಯ್ದು ಜನರಿಗೆ ಅರಿವು ಮೂಡಿಸಿ. ಕೇಂದ್ರ ಸರ್ಕಾರ ಬೆಲೆ ಏರಿಕೆ ನೀತಿಯಿಂದ ಬಡವರ ಊಟ, ಜೀವನದ ಮೇಲೆ ಹಲ್ಲೆ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಜನ ಸಾಮಾನ್ಯರ ಪರವಾಗಿ ಮಾತನಾಡುತ್ತಾರೆ. ಅದಕ್ಕಾಗಿ ಅವರನ್ನು ಕೇಂದ್ರ ಸರ್ಕಾರ ಇ.ಡಿ, ಸಿಬಿಐ ಮೂಲಕ ಗುರಿಯಾಗಿಸುತ್ತಿದೆ. ಜನರ ಧ್ವನಿಯಾಗಿ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಪ್ರಧಾನಿ ಮೋದಿ ವಿರುದ್ಧ ಮಾತನಾಡುವುದು ಗ್ಯಾರಂಟಿ ಎಂದು ಅವರಿಗೆ ಗೊತ್ತು. ಎಲ್ಲರೂ ಒಟ್ಟಾಗಿ ದುಬಾರಿ ಬಿಜೆಪಿ ವಿರುದ್ಧ ಹೋರಾಟ ಮಾಡೋಣ ಎಂದು ಅವರು ಕರೆ ನೀಡಿದರು.
ಪ್ರತಿಭಟನೆಯಲ್ಲಿ ಸಚಿವರು, ಶಾಸಕರು, ಕೆಪಿಸಿಸಿ ಕಾರ್ಯಾಧ್ಯಕ್ಷರು, ಸಂಸದರು, ಕೆಪಿಸಿಸಿ ಪದಾಧಿಕಾರಿಗಳು ಹಾಗೂ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.