ಚಂದ್ರವಳ್ಳಿ ನ್ಯೂಸ್, ಕೊಪ್ಪಳ:
ಕಾಂಗ್ರೆಸ್‌ಮುಸ್ಲಿಮರ ಪಕ್ಷ. ಈ ಜನ್ಮದಲ್ಲಿ ಅಷ್ಟೇ ಅಲ್ಲ, ಮುಂದಿನ ಜನ್ಮದಲ್ಲೂ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಕಾರಣಕ್ಕೂ ಹೋಗಲ್ಲ ಎಂದು ಬಿಜೆಪಿಯ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಕಡ್ಡಿ ಮುರಿದಂತೆ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ಹಿಂದೂಗಳ ಪರವಾಗಿ ಕೆಲಸ ಮಾಡುತ್ತೇನೆ. ರಾಜ್ಯದ ಭವಿಷ್ಯದ ಬಗ್ಗೆ ಯೋಚಿಸಬೇಕು. ರಾಜ್ಯದಲ್ಲಿ ಹಲವು ನೀರಾವರಿ ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಂಡರೆ ಉತ್ತರ ಕರ್ನಾಟಕ ಹಸಿರಾಗಲಿದೆ. ಆದರೆ, ಅದನ್ನು ಹಾಳು ಮಾಡಿದ್ದು ಬಿ.ಎಸ್. ಯಡಿಯೂರಪ್ಪ ಮತ್ತು ಗೋವಿಂದ ಕಾರಜೋಳ ಎಂದು ಅವರು ಹರಿಹಾಯ್ದರು.
ಗೋವಿಂದ್ ಕಾರಜೋಳ ಅವರು ಈ ಹಿಂದೆ ನಿರಾವರಿ ಸಚಿವರಾಗಿದ್ದರು. ಈ ಯೋಜನೆಗೆ 25 ಸಾವಿರ ಕೋಟಿ ರೂ. ಕೊಡುತ್ತೇನೆ ಎಂದಿದ್ದರು. ಅನುದಾನ ಕೊಡದೆ ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡಿದರು ಎಂದು ಹರಿಹಾಯ್ದರು.
ಅಪ್ಪ – ಮಗ ಮೀಸಲಾತಿ ತಪ್ಪಿಸಿದರು:
ಬಿ.ಎಸ್. ಯಡಿಯೂರಪ್ಪ ಮತ್ತು ವಿಜಯೇಂದ್ರ. ಇವರಿಬ್ಬರು ಸೇರಿಕೊಂಡು ವೀರಶೈವ ಲಿಂಗಾಯತರಿಗೆ 2ಎ-ಮೀಸಲಾತಿ ತಪ್ಪಿಸಿದಲ್ಲದೆ ನಮಗೆ ಹೊಡೆಸಿ, ಜೈಲಿಗೆ ಹಾಕಿಸಬೇಕೆಂದು ಸಂಚು ಮಾಡಿದರು. ಈ ಕೆಲಸಕ್ಕಾಗಿ ಬೆಂಗಳೂರಿನ ಐಪಿಎಸ್ ಅಧಿಕಾರಿಯೊಬ್ಬನಿಗೆ ಜವಾಬ್ದಾರಿ ಕೊಟ್ಟಿದ್ದರು. ಜೈಲಿಗೆ ಹಾಕಿಸಲು ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿರುವ ಲಿಂಗಾಯತ ಐಪಿಎಸ್‌ಅಧಿಕಾರಿಯೊಬ್ಬರನ್ನು ವಿಜಯೇಂದ್ರ ನಮ್ಮ ಬಳಿ ಕಳುಹಿಸಿದ್ದ ಎಂದು ಯತ್ನಾಳ್ ಆರೋಪಿಸಿದರು.
ರಾಜ್ಯದಲ್ಲಿ ಈ ಹಿಂದೆ ಡ್ರಗ್ಸ್ ಪ್ರಕರಣ ಬಯಲು ಮಾಡುವೆ ಎಂದು ಓಡಾಡಿದ್ದ ಆ ಐಪಿಎಸ್ ಅಧಿಕಾರಿ ಅದರ ಬದಲು ಚಿತ್ರನಟಿಯರ ಮೊಬೈಲ್ನಲ್ಲಿದ್ದ ವಿಜಯೇಂದ್ರನ ವಿಡಿಯೋಗಳನ್ನು ಹುಡುಕಿ ಡಿಲೀಟ್ ಮಾಡಿಸಿದ್ದಾನೆ ಎಂದು ಯತ್ನಾಳ್ ಆರೋಪಿಸಿದರು.
ಜಲಸಂಪನ್ಮೂಲ ಸಚಿವರಾಗಿದ್ದ ಸಂದರ್ಭದಲ್ಲಿ ರಮೇಶ್ ಜಾರಕಿಹೊಳಿ ಯಿಂದ ವಿಜಯೇಂದ್ರನಿಗೆ ಹಣ ಸಿಗಲಿಲ್ಲ. ಅದಕ್ಕೆ ಜಾರಕಿಹೊಳಿಯನ್ನು ಹನಿಟ್ರ್ಯಾಪ್ನಲ್ಲಿ ಸಿಲುಕಿಸಿ ತಲೆದಂಡ ಮಾಡಿಸಿದರು. ಕಾಂಗ್ರೆಸ್ನ ಮಹಾನಾಯಕ, ಬಿಜೆಪಿಯ ಮಹಾಕಳ್ಳ ಇಬ್ಬರೂ ಕೂಡಿ ಸಿಡಿ ಬಿಡುಗಡೆ ಮಾಡಿದರು ಎಂದು ಯತ್ನಾಳ್ ಗಂಭೀರ ಆರೋಪ ಮಾಡಿದರು.
ಕೋವಿಡ್ ಹೆಸರಿನಲ್ಲಿ ಸೇರಿದಂತೆ ಮತ್ತಿತರ ಪ್ರಕರಣಗಳಲ್ಲಿ ಯಡಿಯೂರಪ್ಪ ಮತ್ತು ವಿಜಯೇಂದ್ರ ಸಾವಿರಾರು ಕೋಟಿ ರೂ. ಗಂಟು ಮಾಡಿದ್ದಾರೆ. ಒಂದೊಂದು ಬೆಡ್ ಎಷ್ಟಕ್ಕೆ ಮಾರಿಕೊಂಡಿದ್ದಾರೆಂಬುದು ಎಲ್ಲರಿಗೂ ಗೊತ್ತು ಎಂದರು.
ನಾನು ಕೇವಲ ಚನ್ನಮ್ಮ, ರಾಯಣ್ಣ ಬ್ರಿಗೇಡ್ನಲ್ಲಿ ಕೆಲಸ ಮಾಡುವುದಿಲ್ಲ. ಹಿಂದೂ ಸಮಾಜದ ಪರವಾಗಿ ಕೆಲಸ ಮಾಡುವೆ. ಅದರಲ್ಲಿ ಚನ್ನಮ್ಮ, ರಾಯಣ್ಣ, ವಾಲ್ಮೀಕಿ, ಅಂಬೇಡ್ಕರ್ ಎಲ್ಲರೂ ಬರುತ್ತಾರೆ. ಬಿಜೆಪಿ ಹಿಂದೂ ಪರವಾಗಿಲ್ಲ. ಯಡಿಯೂರಪ್ಪನ ಮಾತು ಕೇಳಿ ನನ್ನನ್ನು ಉಚ್ಚಾಟಿಸಲಾಗಿದೆ. ಪೋಕ್ಸೋ ಪ್ರಕರಣದಲ್ಲಿ ಸರಿಯಾಗಿ ಸರ್ಕಾರ ವಾದ ಮಂಡಿಸಿದರೆ ಬಿಎಸ್ವೈ ಜೈಲಿಗೆ ಹೋಗುತ್ತಾರೆ ಎಂದರು.