ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕಾಂಗ್ರೆಸ್ ಸಚಿವರು, ಸಚಿವರ ಆಪ್ತರು, ಶಾಸಕರು, ಶಾಸಕರ ಕುಟುಂಬದವರು ಸರ್ಕಾರಿ ಅಧಿಕಾರಿಗಳಿಗೆ ಧಮ್ಕಿ ಹಾಕುವ ನೀಚ ಸಂಸ್ಕೃತಿ ಮುಂದುವರೆಯುತ್ತಲೇ ಇದ್ದು, ಪಶುಸಂಗೋಪನಾ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್ ಅವರು ಪಿರಿಯಾಪಟ್ಟಣ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಇಂಜಿನಿಯರ್ ಗೆ ಅವಾಚ್ಯ ಶಬ್ಧಗಳ ಮೂಲಕ ನಿಂದನೆ ಮಾಡಿ, ಧಮ್ಕಿ ಹಾಕಿರುವ ಘಟನೆ ನಡೆದಿದೆ ಎಂದು ವಿರೋಧ ಪಕ್ಷದ ನಾಯಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಕಳೆದ 20 ತಿಂಗಳುಗಳಲ್ಲಿ ಶಿವಮೊಗ್ಗದಲ್ಲಿ ವಾಲ್ಮೀಕಿ ನಿಗಮದ ಅಧಿಕಾರಿ ಚಂದ್ರಶೇಖರನ್ ಆತ್ಮಹತ್ಯೆಗೆ ಶರಣಾದರು. ವರ್ಗಾವಣೆ ದಂಧೆಯ ಒತ್ತಡ, ಕಿರುಕುಳ ತಾಳಲಾರದೆ ಯಾದಗಿರಿ ಪಿಎಸ್ ಐ ಪರಶುರಾಮ್ ಹೃದಯಾಘಾತದಿಂದ ಸತ್ತರು. ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತನ ಕಿರುಕುಳದಿಂದ ಬೀದರ್ ಜಿಲ್ಲೆ ಭಾಲ್ಕಿ ತಾಲ್ಲೂಕಿನ ಸಿವಿಲ್‌ಎಂಜಿನಿಯರ್‌ಸಚಿನ್‌ಮಾನಪ್ಪ ಪಾಂಚಾಳ್‌ರೈಲಿಗೆ ತಲೆಕೊಟ್ಟು ಪ್ರಾಣಬಿಟ್ಟರು. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಪಿಎ ಕಿರುಕುಳದಿಂದ ಬೆಳಗಾವಿ ತಹಶೀಲ್ದಾರ್ ಕಚೇರಿ ಎಸ್ ಡಿಎ ರುದ್ರಣ್ಣ ಆತ್ಮಹತ್ಯೆಗೆ ಬಲಿಯಾದರು. ಇತ್ತೀಚೆಗಷ್ಟೆ ಭದ್ರಾವತಿ ಕಾಂಗ್ರೆಸ್ ಶಾಸಕ ಸಂಗಮೇಶ್ ಅವರ ಪುತ್ರ ಮಹಿಳಾ ಅಧಿಕಾರಿಗೆ ಧಮ್ಕಿ ಹಾಕಿದ್ದರು. ಮೊನ್ನೆ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಕಲಾವಿದರಿಗೆ ನಟ್ಟು ಬೋಲ್ಟು ಟೈಟು ಮಾಡುವ ಬೆದರಿಕೆ ಹಾಕಿದ್ದಾರೆ ಎಂದು ಅಶೋಕ್ ಕಿಡಿಕಾರಿದ್ದಾರೆ.
ಸಿಎಂ ಸಿದ್ದರಾಮಯ್ಯ ನವರೇ, ನಿಮ್ಮ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ದಾಹಕ್ಕೆ ಇನ್ನೆಷ್ಟು ಪ್ರಾಮಾಣಿಕ ಅಧಿಕಾರಿಗಳು ಬಲಿಯಾಗಬೇಕು? ನಾಚಿಕೆಯಾಗಬೇಕು ನಿಮ್ಮ ಕಾಂಗ್ರೆಸ್ ಪಕ್ಷದ ನೀಚ ಸಂಸ್ಕೃತಿಗೆ ಕರ್ನಾಟಕವನ್ನು ಗೂಂಡಾ ರಾಜ್ಯ ಮಾಡಲು ಹೊರಟಿರುವ ಕಾಂಗ್ರೆಸ್ ಪಕ್ಷಕ್ಕೆ ಧಿಕ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.