ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಕಾರವಾರದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅಪರಾಧಿ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶ ಹೊರಡಿಸಿದೆ. ಅಲ್ಲದೇ ಎಲ್ಲಾ ಅಪರಾಧಿಗಳನ್ನು ಕೂಡಲೇ ವಶಕ್ಕೆ ಪಡೆದುಕೊಳ್ಳುವಂತೆ ಆದೇಶಿಸಿದೆ.
ಶಿಕ್ಷೆ ಪ್ರಮಾಣವನ್ನೂ ಅಕ್ಟೋಬರ್ 25 ರಂದು ಶುಕ್ರವಾರಕ್ಕೆ ಕೋರ್ಟ್ ಕಾಯ್ದಿರಿಸಿದೆ.
ಅಕ್ರಮ ಅದಿರು ಸಾಗಾಟ ಪ್ರಕರಣ-
ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಅರಣ್ಯ ಇಲಾಖೆಗಳು ಸೇರಿದಂತೆ ಮತ್ತಿತರ ಸಂಬಂಧಿತ ಇಲಾಖೆಗಳು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಅದಿರನ್ನು ಸೀಜ್ ಮಾಡಿತ್ತು. ಅಕ್ರಮವಾಗಿ 11,312 ಮೆಟ್ರಿಕ್ ಟನ್ ಅದಿರನ್ನು ಯಾವುದೇ ಅನುಮತಿ ಪಡೆಯದೆ ಸಾಗಾಟ ಮಾಡಲಾಗಿತ್ತು.
ಈ ಪ್ರಕರಣದ ಅರ್ಜಿ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ಕೋರ್ಟ್, ಅಪರಾಧಿಗಳಾದ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಮಹೇಶ್ ಬಿಳೆಯಿ, ಮಲ್ಲಿಕಾರ್ಜುನ ಶಿಪ್ಪಿಂಗ್ ಹಾಗೂ ಶಾಸಕ ಸತೀಶ್ ಸೈಲ್ ಅವರನ್ನು ಅಪರಾಧಿ ಎಂದು ತೀರ್ಪು ಪ್ರಕಟಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಸತೀಶ್ ಸೈಲ್ ಸೇರಿದಂತೆ ಮೂವರ ಅಪರಾಧಿಗಳಿಗೆ ಅಕ್ಟೋಬರ್-25ರಂದು ಶಿಕ್ಷೆ ಪ್ರಮಾಣ ಪ್ರಕಟಿಸಲಿದೆ.
ಶಿಕ್ಷೆಯ ಪ್ರಮಾಣ ಎಷ್ಟಿರಲಿದೆ ಎಂದು ಅಪರಾಧಿಗಳಿಗೆ ಆತಂಕ ಶುರುವಾಗಿದೆ.
ಈ ಕುರಿತು ಜೆಡಿಎಸ್ ಪಕ್ಷವು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು ಬೆಲೆಕೇರಿ ಅದಿರು ಕಳ್ಳತನ ಪ್ರಕರಣದಲ್ಲಿ ಕಾರವಾರ ಕ್ಷೇತ್ರದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅಪರಾಧಿ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಶಿಕ್ಷೆಯ ಪ್ರಮಾಣ ಪ್ರಕಟಿಸಲಿದ್ದು, ಶಾಸಕ ಸತೀಶ್ ಸೈಲ್ ಸೇರಿದಂತೆ ಮೂವರು ಅಪರಾಧಿಗಳನ್ನು ವಶಕ್ಕೆ ಪಡೆಯಲು ಸಿಬಿಐ ಅಧಿಕಾರಿಗಳಿಗೆ ಆದೇಶ ನೀಡಿದೆ ಎಂದು ತಿಳಿಸಿದೆ.
ಮುಡಾ ಹಗರಣದಲ್ಲಿ 420, A1 ಆರೋಪಿ ಸಿದ್ದರಾಮಯ್ಯ ವಿರುದ್ಧ ಇ.ಡಿ. ತನಿಖೆ ನಡೆಸುತ್ತಿದೆ. ವಾಲ್ಮೀಕಿ ನಿಗಮದ ಭ್ರಷ್ಟಾಚಾರ ಪ್ರಕರಣದಲ್ಲಿ ಮಾಜಿ ಸಚಿವ ನಾಗೇಂದ್ರ ಜೈಲು ಸೇರಿ ಜಾಮೀನಿನ ಮೇಲೆ ಹೊರಬಂದಿದ್ದಾರೆ.
ಭ್ರಷ್ಟಾಚಾರದಲ್ಲಿ ಮುಳುಗಿರುವ ಕರ್ನಾಟಕ ಕಾಂಗ್ರೆಸ್ ಪಕ್ಷದ ಮತ್ತಷ್ಟು ನಾಯಕರು ಅಪರಾಧಿಗಳಾಗಿ ಜೈಲು ಸೇರುವುದು ಗ್ಯಾರಂಟಿಯಾಗಿದೆ ಎಂದು ಜೆಡಿಎಸ್ ಭವಿಷ್ಯ ನುಡಿದಿದೆ.