ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮೊನ್ನೆ ರಾಜ್ಯಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ರವರು ಮಾತನಾಡುವ ಸಂಧರ್ಭದಲ್ಲಿ ಕಾಂಗ್ರೆಸ್ಸಿಗರು ಕೇವಲ ಅಂಬೇಡ್ಕರ್‌ರವರ ಹೆಸರನ್ನು ಜಪ ಮಾಡುತ್ತಿದ್ದೀರಿಯೇ ವಿನ: ಅವರನ್ನು ಗೌರವಿಸುವ ಕೆಲಸ ಮಾಡಲಿಲ್ಲ, ಅವರ ಜೀವಿತಾವಧಿಯಲ್ಲಿ ಅವರನ್ನು ಅವಮಾನಿಸಿ
ಈಗ ಅವರ ಹೆಸರನ್ನು ಜಪ ಮಾಡುತ್ತಿದ್ದೀರಿ, ಆದರೆ ನಾವು ಬಿ.ಜೆ.ಪಿಗರು ಬಾಬಾ ಸಾಹೆಬ್ ಅಂಬೇಡ್ಕ್‌ರವರನ್ನು ದೇವರ ಸ್ಥಾನದಲ್ಲಿ ನೋಡುತ್ತಿದ್ದೇವೆ ಎನ್ನುವ ಅರ್ಥದಲ್ಲಿ ಮಾತನಾಡಿದ್ದನ್ನು ಕಾಂಗ್ರೆಸ್ಸಿಗರು ಅವರ ಹೇಳಿಕೆಯನ್ನು ತಿರುಚಿ ಮಾತನಾಡುವ ಮೂಲಕ ದೇಶದ ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸದಲ್ಲಿ ನಿರತರಾಗಿದ್ದಾರೆ. ಇದು ಅತ್ಯಂತ ಖಂಡನೀಯ ಎಂದು ಸಂಸದ ಗೋವಿಂದ ಕಾರಜೋಳ ಹರಿಹಾಯ್ದಿದ್ದಾರೆ.
ಪಂಡಿತ್ ಜವಾಹರ್ ಲಾಲ್ ನೆಹರುರವರ ನೃತೃತ್ವದ ಕಾಂಗ್ರೆಸ್ ಡಾ:ಬಾಬಾ ಸಾಹೇಬ್ ಅಂಬೇಡ್ಕರ್‌ರವರನ್ನು ಯಾವ ರೀತಿ ನಡೆಸಿಕೊಂಡರು ಎನ್ನುವುದು ಇಡೀ ದೇಶಕ್ಕೆ ಅಲ್ಲ ಇಡೀ ಜಗತ್ತಿಗೆ ಗೊತ್ತಿದೆ, ಅಂಬೇಡ್ಕರ್‌ರವರು ನಿಧನರಾದಾಗ ದೆಹಲಿಯಲ್ಲಿ ಅವರ ಅಂತ್ಯ ಸಂಸ್ಕಾರ ಮಾಡಲು ಆರಡಿ ಮೂರಡಿ ಜಾಗ ನೀಡದ ಕಾಂಗ್ರೆಸ್ ಪಕ್ಷಕ್ಕೆ ಅಂಬೇಡ್ಕರ್ ಹೆಸರು ಹೇಳುವ ಯೋಗ್ಯತೆ ಇಲ್ಲ.
ಅವರು ಅರ್ಥಶಾಸ್ತ್ರಜ್ಞರಾಗಿದ್ದರೂ ಕೂಡ ಅವರಿಗೆ ಆರ್ಥಿಕ ಇಲಾಖೆ ನೀಡದೇ ಕೇವಲ ಕಾನೂನು ಇಲಾಖೆ ನೀಡಿ ಅವಮಾನ ಮಾಡಿದ್ದು ಕಾಂಗ್ರೆಸ್ ಪಕ್ಷ. ಅಂಬೇಡ್ಕರ್‌ರವರು ನೆಹರುರವರ ಮಂತ್ರಿ ಮಂಡಲದಲ್ಲಿ ಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿ ಹೊರಗೆ ಬಂದ ನಂತರ ಎರಡು ಬಾರಿ ಲೋಕಸಭಾ ಚುನಾವಣೆಯಲ್ಲಿ ಉದ್ದೇಶಪೂರ್ವಕವಾಗಿ ಸೋಲಿಸಿ ಅವಮಾನ ಮಾಡಿದ್ದು ಕಾಂಗ್ರೆಸ್ ಪಕ್ಷ.
ಇಷ್ಟೇ ಅಲ್ಲ ಅಂಬೇಡ್ಕರ್ ಜೀವಿತಾವಧಿಯಲ್ಲಿ ಅವರಿಗೆ ಭಾರತ ರತ್ನ ನೀಡಿ ಪುರಸ್ಕರಿಸದೇ ಕೇವಲ ಗಾಂಧಿ ಕುಟುಂಬಕ್ಕೆ ಭಾರತ ರತ್ನ ಪ್ರಶಸ್ತಿ ಕೊಟ್ಟುಕೊಳ್ಳುಲಾಯಿತು. ಇಷ್ಟಕ್ಕೂ ಅಂಬೇಡ್ಕರ್‌ರವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿದ್ದು ಬಿಜೆಪಿ ಬೆಂಬಲಿತ ವಿ.ಪಿ ಸಿಂಗ್ ನೇತೃತ್ವದ ಸರ್ಕಾರವೇ ಹೊರತು ಕಾಂಗ್ರೆಸ್ ಅಲ್ಲ.
ಇನ್ನೂ ಮುಂದುವರೆದು ಮೋದಿ ನೇತೃತ್ವದ ಎನ್.ಡಿ.ಎ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಅಂಬೇಡ್ಕರ್‌ರವರಿಗೆ ಸಂಬಂಧಿಸಿ ಐದು ಸ್ಥಳಗಳನ್ನು ಪಂಚತೀರ್ಥಗಳೆಂದು ಘೋಷಿಸಿ ಸಮಗ್ರವಾಗಿ ಅಭಿವೃದ್ದಿಪಡಿಸುವ ಮೂಲಕ ಪ್ರವಾಸಿ ತಾಣಗಳನ್ನಾಗಿ ಮಾಡಲಾಗಿದೆ. ಅಂಬೇಡ್ಕರ್‌ರವರ ೧೨೫ ನೇ ಜನ್ಮದಿನಾಚರಣೆಯ ಸ್ಮರಣೆಗಾಗಿ ಡಿಜಿಟಲ್ ಭಿಮ್ ಆಪ್ ನ್ನು ದೇಶಕ್ಕೆ ಸಮರ್ಪಿಸಲಾಗಿದೆ ಎಂದು ಕಾರಜೋಳ ತಿಳಿಸಿದ್ದಾರೆ.