ಮಂಗಳಮುಖಿಯರನ್ನು ಅಪಹಾಸ್ಯ ಮಾಡಿದ ಕಾಂಗ್ರೆಸ್ ಪಕ್ಷ
ಚಂದ್ರವಳ್ಳಿ ನ್ಯೂಸ್, ಬೆಂಗಳೂರು: ಮಂಗಳಮುಖಿಯರನ್ನು ಅಪಹಾಸ್ಯ ಮಾಡುವ ಮೂಲಕ ಕರ್ನಾಟಕ ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ತನ್ನ ಕೀಳು ಮನಸ್ಥಿತಿ, ನೀಚ ಸಂಸ್ಕೃತಿಯನ್ನು ಪ್ರದರ್ಶನ ಮಾಡಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದರು.
ಸ್ವಾಮಿ ಬಿ.ಕೆ.ಹರಿಪ್ರಸಾದ್ ಅವರೇ, ನಮ್ಮ ದೇಶದ ಸರ್ವೋಚ್ಚ ನ್ಯಾಯಾಲಯವೇ ಹಲವು ತೀರ್ಪುಗಳ ಮೂಲಕ ತೃತೀಯ ಲಿಂಗಿಗಳಿಗೆ ಸಾಂವಿಧಾನಿಕ ಹಕ್ಕುಗಳನ್ನು ನೀಡಿ ಗೌರವಿಸಿದೆ. ಸಂವಿಧಾನ, ಜನ ಸಾಮಾನ್ಯರ ಹಕ್ಕುಗಳ ಬಗ್ಗೆ ಯಾವುದೇ ಗೌರವವಿಲ್ಲದ ಕಾಂಗ್ರೆಸ್ ಪಕ್ಷದಿಂದ ಜನತೆ ಹೆಚ್ಚೇನೂ ನಿರೀಕ್ಷೆ ಇಟ್ಟುಕೊಂಡಿಲ್ಲ. ಕನಿಷ್ಠ ಪಕ್ಷ ಮನುಷ್ಯರನ್ನು ಮನುಷ್ಯರಾಗಿ ಕಾಣುವ ಮನಸ್ಥಿತಿಯನ್ನಾದರೂ ಬೆಳೆಸಿಕೊಳ್ಳಿ ಎಂದು ಅವರು ಸಲಹೆ ನೀಡಿದರು.
ದೆಹಲಿಯಲ್ಲೂ ಸಲ್ಲದ, ರಾಜ್ಯದಲ್ಲೂ ಸಲ್ಲದ ತ್ರಿಶಂಕು ಸ್ಥಿತಿಯಲ್ಲಿರುವ ಎಡಬಿಡಂಗಿ ನಾಯಕರಿಂದ ನಮ್ಮ ಬಿಜೆಪಿ ಪಕ್ಷ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ಬಗ್ಗೆ ಪಾಠ ಕಲಿಯಬೇಕಿಲ್ಲ.
ನಮ್ಮ ಪಕ್ಷದ ಅಧ್ಯಕ್ಷರ ಆಯ್ಕೆ ಕಾಂಗ್ರೆಸ್ ಪಕ್ಷದ ರೀತಿ 10 ಜನಪಥ್ ಬಂಗಲೆಯ ಅಡುಗೆ ಮನೆಯಲ್ಲಿ ಆಗುವುದಿಲ್ಲ. 14 ಕೋಟಿಗೂ ಹೆಚ್ಚು ಸದಸ್ಯರಿರುವ ವಿಶ್ವದ ಅತೀ ದೊಡ್ಡ ರಾಜಕೀಯ ಸಂಘಟನೆಗೆ ತನ್ನದೇ ಆದ ಪ್ರಕ್ರಿಯೆ ಇದೆ, ಆಂತರಿಕ ಪ್ರಜಾಪ್ರಭುತ್ವ ಇದೆ.
ಹೋಗಲಿ ಬಿಡಿ. ಅಂದಹಾಗೆ 5 ವರ್ಷ ನಾನೇ ಸಿಎಂ ಎಂದು ದೆಹಲಿಯಿಂದ ಘರ್ಜನೆ ಮಾಡುತ್ತಿರುವ ಸಿಎಂ ಸಿದ್ದರಾಮಯ್ಯ ಅವರೇ ಈಗ ಭಾರತೀಯ ಕಾಂಗ್ರೆಸ್ ಪಕ್ಷದ ಹೈಕಮಾಂಡಾ? ಎಂದು ಅಶೋಕ್ ತೀಕ್ಷ್ಣವಾಗಿ ಪ್ರತಿಕ್ರಿಯೆ ವ್ಯಕ್ತಪಡಿಸಿದರು.