ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಕ್ಫ್‌ಮಂಡಳಿ ಹೆಸರಿನಲ್ಲಿ ದಶಕಗಳಿಂದ ನಡೆಯುತ್ತಿರುವ ಲ್ಯಾಂಡ್‌ಜಿಹಾದಿಗೆ ಕಡಿವಾಣ ಹಾಕುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತಂದಿರುವ ವಕ್ಫ್ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ಕಾಂಗ್ರೆಸ್ ಸರ್ಕಾರ ಸದನದಲ್ಲಿ ನಿರ್ಣಯ ಮಾಡಿದೆ. ಇದರ ಹಿಂದೆ ದೊಡ್ಡ ದುರುದ್ದೇಶವೇ ಅಡಗಿದ್ದು, ಈ ಕಪಟವನ್ನ ಬಯಲು ಮಾಡುವ ಅವಶ್ಯಕತೆ ಇದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.
ರೈತರು, ದಲಿತರು, ಮಠ ಮಂದಿರಗಳ ಭೂಮಿ ಎಂದು ಯಾವುದನ್ನೂ ಲೆಕ್ಕಿಸದೆ ಭಸ್ಮಾಸುರನಂತೆ ಕಂಡಕಂಡ ಭೂಮಿಯನ್ನು ವಕ್ಫ್‌ಮಂಡಳಿ ಹೆಸರಿನಲ್ಲಿ ಕಬಳಿಸುತ್ತಿರುವ ಭೂಗಳ್ಳರಲ್ಲಿ ಬಹುತೇಕರು ಕಾಂಗ್ರೆಸ್ ನಾಯಕರೇ ಇದ್ದು, ವಕ್ಫ್ ತಿದ್ದುಪಡಿ ಮಸೂದೆ ಅನುಮೋದನೆ ಆದರೆ ಎಲ್ಲಿ ಕಾಂಗ್ರೆಸ್ ನಾಯಕರ ಬಂಡವಾಳ ಬಯಲಾಗುತ್ತದೋ ಎಂಬ ಭಯ ಕಾಂಗ್ರೆಸ್ ಪಕ್ಷಕ್ಕೆ ಕಾಡುತ್ತಿದೆ ಎಂದು ಅವರು ತಿಳಿಸಿದ್ದಾರೆ.
ರಾಜ್ಯದಲ್ಲಂತೂ ನೂರಾರು ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದ ರೈತರ ಭೂಮಿಯನ್ನು ವಕ್ಫ್‌ಮಂಡಳಿ ವಶಕ್ಕೆ ಪಡೆದುಕೊಂಡಿದೆ. ಇದರ ಹಿಂದೆ ಕರ್ನಾಟಕ ಕಾಂಗ್ರೆಸ್ ಪಕ್ಷದ ಪ್ರಭಾವಿ ಮುಖಂಡರ ಕೈವಾಡವಿದ್ದು, ತನ್ನ ಪಕ್ಷದ ಭೂಗಳ್ಳರನ್ನ ರಕ್ಷಿಸುವ ಉದ್ದೇಶದಿಂದ ವಕ್ಫ್ ತಿದ್ದುಪಡಿ ಮಸೂದೆಯನ್ನು ವಿರೋಧಿಸುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ತಮ್ಮ ಆಡಳಿತ ವೈಫಲ್ಯವನ್ನು ಮರೆಮಾಚಲು ಸುಳ್ಳುಗಳನ್ನು, ಅನಾವಶ್ಯಕ ವಿವಾದಗಳನ್ನು ಸೃಷ್ಟಿಸಿ ಜನರ ಗಮನ ಬೇರೆಡೆ ಸೆಳೆಯುವುದರಲ್ಲಿ, ಸಾರ್ವಜನಿಕರ ದಿಕ್ಕು ತಪ್ಪಿಸುವುದರಲ್ಲಿ ಸಿಎಂ ಸಿದ್ದರಾಮಯ್ಯ ಅವರು ನಿಸ್ಸೀಮರು!! ಎಂದು ಅಶೋಕ್ ಹರಿಹಾಯ್ದಿದ್ದಾರೆ.
ವಕ್ಫ್‌ಬೋರ್ಡ್‌ಹೆಸರಿನಲ್ಲಿ ರೈತರು, ದಲಿತರು, ಬಡವರು, ಮಠಗಳು, ಮಂದಿರಗಳ ಆಸ್ತಿಯನ್ನ ಲಪಟಾಯಿಸಿರುವ ಲೂಟಿಕೋರ ಕರ್ನಾಟಕ ಕಾಂಗ್ರೆಸ್ ನಾಯಕರನ್ನ ಕಾಪಾಡುವುದು ಮತ್ತು ಈಗಿರುವ ವ್ಯವಸ್ಥೆಯನ್ನು ಮುಂದುವರೆಸಿಕೊಂಡು ಬಡ ಮತ್ತು ಸಾಮಾನ್ಯ ಮುಸ್ಲಿಮರನ್ನು ಶೋಷಣೆ ಮಾಡುವುದೇ ಈ ನಿರ್ಣಯದ ಹಿಂದಿರುವ ನಿಜವಾದ ಉದ್ದೇಶ. ಇದನ್ನ ಸದನದ ಒಳಗಡೆ ಮತ್ತು ಹೊರಗಡೆ ಸಾರಿ ಸಾರಿ ಹೇಳುವ ಮೂಲಕ ಕಾಂಗ್ರೆಸ್ ಪಕ್ಷದ ಮುಖವಾಡ ಕಳಚಿ ಜನರಿಗೆ ಅರಿವು ಮೂಡಿಸುತ್ತೇವೆ ಎಂದು ವಿಪಕ್ಷ ನಾಯಕ ಅಶೋಕ್ ಗುಡುಗಿದ್ದಾರೆ.