ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭ್ರಷ್ಟ ಕರ್ನಾಟಕ ಕಾಂಗ್ರೆಸ್ ಸರ್ಕಾರ, ರಾಜ್ಯಾದ್ಯಂತ ಕಾಂಗ್ರೆಸ್ ಭವನ ಟ್ರಸ್ಟ್ ಹೆಸರಲ್ಲಿ ಸರ್ಕಾರಿ ಜಾಗಗಳನ್ನು ಅಕ್ರಮವಾಗಿ ಲೂಟಿ ಹೊಡೆಯುತ್ತಿದೆ ಎಂದು ಜೆಡಿಎಸ್ ಆರೋಪಿಸಿದೆ.
ರಾಜ್ಯದ 6 ನಗರ ಸ್ಥಳೀಯ ಸಂಸ್ಥೆಗಳಲ್ಲಿ ವಿವಿಧ ನಾಗರಿಕ ಸೌಲಭ್ಯಗಳಿಗೆಂದು ಮೀಸಲಿರಿಸಿದ್ದ ಸಿಎ ನಿವೇಶನಗಳನ್ನು ಕಾನೂನುಗಳನ್ನು ಉಲ್ಲಂಘಿಸಿ, ನಿಯಮಗಳನ್ನು ಗಾಳಿಗೆ ತೂರಿ, ಕಾಂಗ್ರೆಸ್ ಭವನ ಟ್ರಸ್ಟ್ ಗೆ ಕೇವಲ ಶೇ.5ರಷ್ಟು ರಿಯಾಯಿತಿ ದರದಲ್ಲಿ ಸಿದ್ದರಾಮಯ್ಯ ಸರ್ಕಾರ ಮಂಜೂರು ಮಾಡಿಕೊಂಡಿದೆ ಎಂದು ಜೆಡಿಎಸ್ ಆರೋಪಿಸಿದೆ.
ರಾಜಕೀಯ ಪಕ್ಷಗಳ ಭವನಗಳಿಗೆ ನಾಗರಿಕ ಸೌಲಭ್ಯ ನಿವೇಶನಗಳನ್ನು ಹಂಚಿಕೆ ಮಾಡಲು ಕೆಟಿಸಿಪಿ (ಸಿ ಎ ನಿವೇಶನ ಹಂಚಿಕೆ) ನಿಯಮಗಳಲ್ಲಿ ಅವಕಾಶವಿಲ್ಲ. ಮಾರ್ಗಸೂಚಿ ದರದ ಶೇ. 25, ಶೇ. 50 ಹಾಗೂ ಪ್ರಸ್ತುತ ಮಾರುಕಟ್ಟೆ ದರದಲ್ಲಿ ನಿವೇಶನವನ್ನು ಸಾರ್ವಜನಿಕ ಹರಾಜು ಮೂಲಕವೇ ಮಾರಾಟ ಮಾಡಬೇಕಿತ್ತು.
ಆದರೂ ಎಲ್ಲಾ ಅಭಿಪ್ರಾಯಗಳನ್ನು ಬದಿಗೊತ್ತಿ ನಿವೇಶನ ಮೌಲ್ಯದ ಶೇ.5ರಷ್ಟು ದರ ವಿಧಿಸಿ ಖಾಯಂ ಆಗಿ ಮಂಜೂರು ಮಾಡಿ, 2026ರ ಜನವರಿ 13ರಂದು ಆದೇಶ ಹೊರಡಿಸಲಾಗಿದೆ. ಸ್ಥಳೀಯ ನಗರಾಭಿವೃದ್ಧಿ ಯೋಜನಾ ಕೋಶವು 30 ವರ್ಷಕ್ಕೆ ಗುತ್ತಿಗೆ ಆಧಾರದ ಮೇಲೆ ಮಂಜೂರಾತಿಗೆ ಕೋರಿದ್ದರೂ, ನಗರಾಭಿವೃದ್ಧಿ ಇಲಾಖೆಯು ಖಾಯಂ ಆಗಿ ಮಂಜೂರು ಮಾಡಿದೆ ಎಂದು ಜೆಡಿಎಸ್ ದೂರಿದೆ.
ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಭೂ ದಾಹದಿಂದ ಸರ್ಕಾರದ ಬೊಕ್ಕಸಕ್ಕೆ ಅಂದಾಜು 16.45 ಕೋಟಿಯಷ್ಟು ನಷ್ಟವಾಗಿದೆ ಎಂದು ಜೆಡಿಎಸ್ ಆರೋಪಿಸಿದೆ.

