ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಕಾಂಗ್ರೆಸ್ ಪಕ್ಷದ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಚುನಾವಣಾ ಕಣದಿಂದ ಹಿಂದೆ ಸರಿಯುವಂತೆ ಜಿಲ್ಲಾ ಕಾಂಗ್ರೆಸ್ ಮುಖಂಡರು, ಪರಿಷತ್ ಸದಸ್ಯ ಸಲೀಂ, ಶಾಸಕ ರಿಜ್ವಾನ್ ಅರ್ಷದ್ ಆಗಮಿಸಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಅವರ ಮನವೊಲಿಸಿದರು. ಆದರೂ ಸಹ ಅವರು ತಮ್ಮ ನಿರ್ಧಾರವನ್ನು ಬದಲಿಸಲಿಲ್ಲ.
ದಾವಣಗೆರೆಯ ವೆಂಕಭೋವಿ ಕಾಲೋನಿಯಲ್ಲಿರುವ ಸಾದಿಕ್ ಪೈಲ್ವಾನ್ ನಿವಾಸದಲ್ಲಿ ಸಾದಿಕ್ ಪೈಲ್ವಾನ್ ಸಹೋದರ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್, ಕಾಂಗ್ರೆಸ್ ಮುಖಂಡರಾದ ಪರಸಣ್ಣ, ಎ ನಾಗರಾಜ್ ಅಯೂಬ್ ಪೈಲ್ವಾನ್ ಕೂಡ ಸಾಧಿಕ್ ಪೈಲ್ವಾನ್ರನ್ನು ಮನವೊಲಿಸಲು ಯತ್ನಿಸಿದರು.
ಬಂಡಾಯವಾಗಿ ಸ್ಪರ್ಧೆ ಮಾಡಿದರೆ ಕಾಂಗ್ರೆಸ್ಗೆ ಕಷ್ಟವಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಸಾದಿಕ್ ಪೈಲ್ವಾನ್ಗೆ ನಿರ್ಧಾರ ಬದಲಾಯಿಸುವಂತೆ ಮನವಿ ಮಾಡಿದರು. ಆದರೆ, ಯಾವುದೇ ಪ್ರಯೋಜನವಾಗಲಿಲ್ಲ.
ಶಿವಾಜಿನಗರದ ಶಾಸಕ ರಿಜ್ವಾನ್ ಅರ್ಷದ್ ಹಾಗೂ ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಸಾದಿಕ್ ಪೈಲ್ವಾನ್ ಅವರ ಮನೆಗೆ ಭೇಟಿ ನೀಡಿದರು.
ಈ ವೇಳೆ ಸಭೆ ನಡೆಸಿ ಮನವೊಲಿಸುವ ಯತ್ನ ನಡೆಸಿದರೂ ಯಾವುದೇ ಫಲ ಕೊಡಲಿಲ್ಲ. ಮನವೊಲಿಸಲು ಆಗಮಿಸಿದ್ದ ಕಾಂಗ್ರೆಸ್ ನಾಯಕರು ಕಾಲಿ ಕೈಯಿಂದ ವಾಪಾಸ್ ಆದ್ರು. ಅಲ್ಲದೇ, ಮನವೊಲಿಸಲು ಆಗಮಿಸಿದ ರಿಜ್ವಾನ್ ಅರ್ಷದ್ ಹಾಗೂ ಸಲೀಂ ಅಹ್ಮದ್ ಅವರಿಗೆ ಅಲ್ಪಸಂಖ್ಯಾತರು ಗೋ ಬ್ಯಾಕ್ ಎಂಬ ಘೋಷಣೆ ಕೂಗಿದರು. ಬಳಿಕ ಸಾದಿಕ್ ಪೈಲ್ವಾನ್ ಭೇಟಿಯಾದ ಕಾಂಗ್ರೆಸ್ ನಿಯೋಗದ ವಿರುದ್ದ ಮುಸ್ಲಿಂರು ಆಕ್ರೋಶ ಹೊರಹಾಕಿದ್ರು. ಇದಲ್ಲದೆ ನೂಕಾಟ ಆಯಿತು. ಪೊಲೀಸರು ಮಧ್ಯ ಪ್ರವೇಶ ಮಾಡಿ ಪರಿಸ್ಥಿತಿ ತಿಳಿಗೊಳಿಸಿದರು.
ಶಾಸಕ ರಿಜ್ವಾನ್ ಅರ್ಷದ್ ಅವರು ಮಾತನಾಡಿ, ‘ಸಾದಿಕ್ ಪೈಲ್ವಾನ್ ಅವರೊಂದಿಗೆ ನಮ್ಮದು ಉತ್ತಮ ಒಡನಾಟ ಇದೆ. ಬೇಗ ಮಾತನಾಡೋಣ ಎಂದಿದ್ದರು. ಅವರು ನಮ್ಮ ಕುಟುಂಬದ ಸದಸ್ಯರು. ನಾನು ಸಲೀಂ ಅಹ್ಮದ್ ಅವರು ಸೇರಿ ಬಂದಿದ್ದೇವೆ. ಸಮಯ ಆಗಿದ್ರು, ಆಗದೆ ಇದ್ರು ಕೂತು ಮಾತನಾಡುತ್ತೇವೆ. ಈಗಾಗಲೇ ಸಮಯ ಮುಗಿದು ಹೋಗಿದೆ. ಕೂತು ಮಾತನಾಡಿದ್ರೇ ಮಧ್ಯಪ್ರಾಚ್ಯ ಯುದ್ಧವೇ ನಿಲ್ಲಲಿದೆ. ಎಲ್ಲಾ ನಾಯಕರು ಬರಲಿದ್ದಾರೆ. ಆದ್ರೆ ಸಮಯ ಕಡಿಮೆ ಇತ್ತು. ಸಾದಿಕ್ ಪೈಲ್ವಾನ್ ಅವರಿಗೆ ನೋವು ಆಗಿದೆ. ಸತತ ವರ್ಷಗಳಿಂದ ಅವರ ಟಿಕೆಟ್ ಪ್ರಯತ್ನ ಇದೆ. ಪಾರ್ಟಿಯಿಂದ ಸಾದಿಕ್ಅವರಿಗೆ ಮಾತನಾಡಿ ಎಂದು ಹೇಳಿದ್ರು. ಅದಕ್ಕಾಗಿ ಮಾತನಾಡಿದ್ದೇನೆ. ನಾಳೆ ನಾಡಿದ್ದು ಮತ್ತೇ ಕುಳಿತು ಮಾತನಾಡುತ್ತೇವೆ. ಎಲ್ಲಾ ಯುವಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಂದು ಪರಿಹಾರ ಕಂಡುಕೊಳ್ಳುತ್ತೇವೆ ಎಂದರು.
ಪರಿಷತ್ ಸದಸ್ಯ ಸಲೀಂ ಅಹ್ಮದ್ ಅವರು ಮಾತನಾಡಿ, ಸಾದಿಕ್ ಅವರನ್ನು ಭೇಟಿ ಆಗಲು ಬಂದಿದ್ದೇವೆ. ಅವರಿಗೆ ನೋವು ಆಗಿದೆ. ಈಗಾಗಲೇ ಮಾತನಾಡಿದ್ದೇವೆ. ಮತ್ತೆ ಮಾತನಾಡುತ್ತೇವೆ. ಪ್ರಚಾರಕ್ಕೆ ಬಂದಾಗ ಆಗಲೂ ಮಾತನಾಡುತ್ತೇವೆ. ಸಿಎಂ ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್ ಅವರು ಬರಲಿದ್ದಾರೆ. ಆಗ ಅವರನ್ನು ಕರೆದು ಮಾತನಾಡಲಿದ್ದೇವೆ. ಅವರನ್ನು ಭೇಟಿ ಆಗುವುದು ನಮ್ಮ ಧರ್ಮ, ನಮ್ಮ ಕರ್ತವ್ಯ, ಅದಕ್ಕೆ ಭೇಟಿ ಆಗಿದ್ದೇವೆ. ನಾವು ಅವರನ್ನು ಭೇಟಿ ಮಾಡಲು ಬರುವುದು ಸ್ವಲ್ಪ ತಡವಾಗಿದೆ. ಅವರು ಭಾವನೆಗಳಿಂದ ಸ್ವಲ್ಪ ಆತಂಕಕ್ಕೆ ಒಳಗಾಗಿದ್ದಾರೆ. ಮತ್ತೆ ಅವರೊಂದಿಗೆ ಚರ್ಚೆ ಮಾಡುತ್ತೇವೆ. ಅವರ ಮೇಲೆ ನಮಗೆ ಸಂಪೂರ್ಣ ವಿಶ್ವಾಸ ಇದೆ. ಅವರು ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ಕೊಡ್ತಾರೆ.
ಈ ಚುನಾವಣೆಯಲ್ಲಿ ಸಾದಿಕ್ ಪೈಲ್ವಾನ್ ಅವರನ್ನು ಮನವೊಲಿಸುವ ಕೆಲಸ ಮಾಡಲಿದ್ದೇವೆ. ನಮಗೆ ಗೋ ಬ್ಯಾಕ್ ಎಂದಿದ್ದು, ಆಕ್ರೋಶದಿಂದ ಮಾತನಾಡಲಿದ್ದಾರೆ. ಬಹಳಷ್ಟು ಚುನಾವಣೆ ನೋಡಿದ್ದೇನೆ, ಟಿಕೆಟ್ ಕೈ ತಪ್ಪಿದಾಗ ಈ ರೀತಿ ಘಟನೆಗಳು ಸಾಮಾನ್ಯ. ಇದು ಸರಿ ಹೋಗಲಿದೆ ಎಂಬ ವಿಶ್ವಾಸ ನಮಗಿದೆ ಎಂದು ತಿಳಿಸಿದರು.
ಈ ಕುರಿತು ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ‘ಸಿಎಂ ಸಿದ್ದರಾಮಯ್ಯ, ನಮ್ಮ ಕೆಲ ಸಚಿವರು ಮನವೊಲಿಸಲು ಯತ್ನಿಸಿದರು. ಕೆಲ ಮುಸ್ಲಿಂ ನಾಯಕರು ಮನೆಗೆ ಆಗಮಿಸುತ್ತೇನೆ ಎಂದು ಹೇಳಿದ್ದರು. ಕೇಳಿದ್ರೇ ಅಲ್ಲಿದ್ದೇನೆ, ಇಲ್ಲಿದ್ದೇನೆ ಎಂದಿದ್ದಾರೆ. ನಾನು ಚುನಾವಣಾ ರಣಕಣದಲ್ಲಿರುತ್ತೇನೆ. ಯಾವುದೇ ಕಾರಣಕ್ಕೂ ಚುನಾವಣಾ ಕಣದಿಂದ ಹಿಂದೆ ಸರಿಯಲ್ಲ. ನನಗೆ ಮಹಾನಗರ ಪಾಲಿಕೆ ಬಳಿ ಬನ್ನಿ ಎಂದರು. ಆದ್ರೆ ನಾನು ಹೋಗಿಲ್ಲ. ನನ್ನ ಬಳಿ ಅಲ್ಲ, ಮೊದಲಿಗೆ ಮತದಾರರ ಬಳಿ ನೀವು ಮಾತನಾಡಿ ಎಂದು ಹೇಳಿದ್ದೇನೆ‘ ಎಂದರು.
‘ನಾನು ಸಾರ್ವಜನಿಕರ ಕೆಲಸ ಮಾಡಲು ಸಿದ್ಧನಾಗಿದ್ದೇನೆ. ಮತದಾರರ ಒಲವು ಇದೆ. ಅಲ್ಲದೇ, ಸಹಕಾರ ಕೂಡ ಇದೆ. ನನ್ನ ಸೋಲಿಸಿದ್ರೆ ಅಹಿಂದ ನಾಯಕ ಸೋತಂತೆ. ನಾನು ಹಿಂದೆ ಸರಿಯಲ್ಲ. ಇನ್ನೂ ಕಾಲ, ಅವಕಾಶ ಇದೆ. ಸಮಾಜಕ್ಕೆ ಒಳ್ಳೆ ಕೆಲಸ ಮಾಡುವ ಆಶ್ವಾಸನೆ ನೀಡಿದ್ದೇನೆ.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸಚಿವ ಜಮೀರ್ ಅಹ್ಮದ್, ಶಾಸಕ ತನ್ವೀರ್ ಸೇಠ್ ಎಲ್ಲರೂ ಕರೆ ಮಾಡಿ ಮನವೊಲಿಸಲು ಯತ್ನ ಮಾಡಿದ್ರು. ನಾನು ಹಿಂದೆ ಸರಿಯಲ್ಲ ಎಂದು ಹೇಳಿದ್ದೇನೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲ ನಮ್ಮ ಮೌಲ್ವಿಗಳನ್ನು ಕಡೆಗಣಿಸಿದಕ್ಕಾಗಿ ಈ ತೀರ್ಮಾನಕ್ಕೆ ಬಂದಿದ್ದೇನೆ. ನನ್ನ ಪ್ರತಿಸ್ಪರ್ಧಿ ಶ್ರೀನಿವಾಸ್ ದಾಸಕರಿಯಪ್ಪ, ಸಮರ್ಥ್ ಯಾರೇ ಇರಲಿ ಗೆಲುವು ನಮ್ಮದೆ. ಸಿಎಂ ಸಿದ್ದರಾಮಯ್ಯ ನಾಮಪತ್ರ ಹಿಂಪಡೆದು ಬೆಂಗಳೂರಿಗೆ ಬನ್ನಿ ಎಂದು ಹೇಳಿದ್ರು. ನಾನು ಇಲ್ಲಿಗೆ ಬನ್ನಿ ಎಂದು ಹೇಳಿದ್ದೇನೆ‘ ಎಂದು ಸಾದಿಕ್ ಪೈಲ್ವಾನ್ ತಿಳಿಸಿದರು.

