ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸುಳ್ಳುಗಳನ್ನು ಹೆಣೆಯುವುದು ಹಾಗೂ ಸುಳ್ಳುಗಳನ್ನು ಪ್ರಸರಿಸುವುದು ಕಾಂಗ್ರೆಸ್ಸಿಗರಿಗೆ ಚೆನ್ನಾಗಿಯೇ ಸಿದ್ಧಿಸಿದೆ!! ಕಾಂಗ್ರೆಸ್ ಭಾರತವನ್ನು 60 ವರ್ಷ ಆಳಿದ್ದು ಸಹ ಸುಳ್ಳುಗಳಿಂದಲೆ ಎಂಬುದು ಇತಿಹಾಸದಿಂದ ನಮಗೆ ಅರಿವಾಗುತ್ತದೆ ಎಂದು ಬಿಜೆಪಿ ಟೀಕಿಸಿದೆ.
“ಸುಳ್ಳು ಎಂದರೆ ಕಾಂಗ್ರೆಸ್ – ಕಾಂಗ್ರೆಸ್ ಎಂದರೆ ಸುಳ್ಳು” ಎನ್ನುವುದು ನೂರಕ್ಕೆ ನೂರರಷ್ಟು ಸತ್ಯ!!. ಆಪರೇಷನ್ ಸಿಂಧೂರದ ಯಶಸ್ಸನ್ನು ಸಹಿಸದ ಕಾಂಗ್ರೆಸ್ ಈಗ ಪ್ರಧಾನಿ ಮೋದಿ ಸರ್ಕಾರ, ಮನೆ ಮನೆಗೆ ಸಿಂಧೂರ ಹಂಚುವ ಅಭಿಯಾನ ಮಾಡುತ್ತಿದೆ ಎಂದು ಸುಳ್ಳು ಸುದ್ದಿಯನ್ನು ಹರಡುತ್ತಿದೆ ಎಂದು ಬಿಜೆಪಿ ದೂರಿದೆ.
ಕಾಂಗ್ರೆಸ್ ನ ಈ ಮನೆ ಮನೆಗೆ ಸಿಂಧೂರ ಹಂಚುವ ಅಭಿಯಾನ ಸಹ ಆಪರೇಷನ್ ಸಿಂಧೂರದ ಯಶಸ್ಸನ್ನು ಗೇಲಿ ಮಾಡುವಂತಹದ್ದು. ಭಾರತದ ಸೈನಿಕರು ಹಾಗೂ ಭಾರತೀಯ ಸೈನ್ಯ ಪಾಕಿಸ್ತಾನಕ್ಕೆ ಬಾಂಬ್ ಹಾಕಿದರೆ ಕಾಂಗ್ರೆಸ್ಸಿಗರಿಗಾಗುವ ನೋವಾದರೂ ಏನು ಎಂಬುದು ಇದುವರೆಗೂ ಉತ್ತರ ಸಿಗದ ಪ್ರಶ್ನೆಯಾಗಿದೆ.
ಮನೆ ಮನೆಗೆ ಸಿಂಧೂರ ಎಂಬ ತನ್ನದೆ ಸುಳ್ಳು ನರೇಟಿವ್ ವಿರುದ್ಧ ತನ್ನದೇ ತಳಮಟ್ಟದ ಮಹಿಳಾ ಕಾರ್ಯಕರ್ತರಿಂದ ವಿರೋಧಿಸಿ, ಭಾರತೀಯರು ಮನೆ ಮನೆಗೆ ಸಿಂಧೂರದ ವಿರುದ್ಧ ಇದ್ದಾರೆ ಎಂಬ ಸುಳ್ಳು ಸುದ್ದಿಯನ್ನು ಹರಡುವ ಕೀಳು ಮಟ್ಟದ ಕೆಲಸಕ್ಕೆ ಕಾಂಗ್ರೆಸ್ ಇಳಿದಿರುವುದು ನಿಜಕ್ಕೂ ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಬಿಜೆಪಿ ವಾಗ್ದಾಳಿ ಮಾಡಿದೆ.
ಸಾಲದಕ್ಕೆ ಭಾರತೀಯ ಮಹಿಳೆಯರನ್ನು ಅವಮಾನಿಸುವಂತಹ “ಒನ್ ನೇಷನ್ – ಒನ್ ಹಸ್ಬಂಡ್” ಎಂಬ ಪೋಸ್ಟರ್ ಅನ್ನು ಹಂಚಿ, ಭಾರತೀಯ ಮಹಿಳೆಯರೆಲ್ಲರಿಗೂ ಒಬ್ಬನೇ ಗಂಡ ಎಂದು ಮಹಿಳೆಯರನ್ನು ಅವಮಾನಿಸಿದೆ. ಇದು ಕಾಂಗ್ರೆಸ್ಸಿಗರೊಳಗಿನ ಮಹಿಳಾ ಪೀಡಕ ಮನಸ್ಥಿತಿಯ ಸುಸ್ಪಷ್ಟ ನಿದರ್ಶನ.
ಕಾಂಗ್ರೆಸ್ಸಿಗೂ ಸುಳ್ಳಿಗೂ ಅವಿನಾಭಾವ ಸಂಬಂಧವಿದೆ!! 2023ರ ಕರ್ನಾಟಕ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಎಂಬ ಸುಳ್ಳು ಆರೋಪ ಹೊರಿಸಿತ್ತು. ಆದರೆ ಇದುವರೆಗೂ ಕಾಂಗ್ರೆಸ್ ತನ್ನ ಆರೋಪಕ್ಕೆ ಅಗತ್ಯ ಪುರಾವೆಗಳನ್ನು ಒದಗಿಸಿಲ್ಲ ಎಂದು ಬಿಜೆಪಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದೆ.
ಸಾಲದ್ದಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ ಅವರು, ಬಿಜೆಪಿಯವರಿಗೆ ನಮ್ಮ ರೀತಿ ಚೆನ್ನಾಗಿ ಸುಳ್ಳು ಹೇಳಲು ಬರುವುದಿಲ್ಲ ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡಿದ್ದು, ಕಾಂಗ್ರೆಸ್ಸಿಗರ ಡಿ.ಎನ್.ಎ ಯಲ್ಲಿ ಸುಳ್ಳು ಎಷ್ಟು ಚೆನ್ನಾಗಿ ಅಡಕವಾಗಿದೆ ಎಂಬುದಕ್ಕೆ ಸಾಕ್ಷಿ!!
ಇನ್ನೂ ವಿಪರ್ಯಾಸವೆಂದರೆ ವಿಧಾನಸೌಧದಲ್ಲಿ ಕಾಂಗ್ರೆಸ್ ಮುಖಂಡ ಸೈಯದ್ ಶಫಿ ನಾಶಿಪುಡಿ ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದು ಕೂಗಿದಾಗ, ಟ್ರೋಲ್ ಮಿನಿಸ್ಟರ್ ಪ್ರಿಯಾಂಕ್ ಖರ್ಗೆ ಸೇರಿದಂತೆ ಎಲ್ಲರೂ ಸಹ ಅದು ಸುಳ್ಳು ಎಂದು ಹೇಳಿದ್ದರು.
ಕೊನೆಗೆ ಎಫ್.ಎಸ್.ಎಲ್ ವರದಿ ಬಂದ ನಂತರ ಸಾಲು ಸಾಲು ಸುಳ್ಳು ಹೇಳಿದ್ದ ಕಾಂಗ್ರೆಸ್ಸಿಗರೆಲ್ಲರೂ ಬಾಯಿಗೆ ಬೀಗ ಹಾಕಿಕೊಂಡರು. ಅಲ್ಲಿಗೆ ಕಾಂಗ್ರೆಸ್ಸಿಗರು ತಮ್ಮ ಸ್ವಾರ್ಥ ಸಾಧನೆಗಾಗಿ ಎಂತಹ ಸತ್ಯವನ್ನಾದರೂ ಸುಳ್ಳನ್ನಾಗಿಸುತ್ತಾರೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ!! ಎಂದು ಬಿಜೆಪಿ ಹೇಳಿದೆ.
ಕಾಂಗ್ರೆಸ್ ತನ್ನ ಲಾಭಕ್ಕಾಗಿ ಹಾಗೂ ದೇಶದ ಶಾಂತಿ ಕದಡಲು ಸುಳ್ಳುಗಳನ್ನು ಯಥೇಚ್ಛವಾಗಿ ಸೃಷ್ಟಿಸುತ್ತಿದೆ. ಭಾರತೀಯರೆಲ್ಲರೂ ಕಾಂಗ್ರೆಸ್ ನ ಈ ಸುಳ್ಳುಗಳ ವಿರುದ್ಧ ಆದಷ್ಟು ಎಚ್ಚರವಾಗಿದ್ದು, ಈ ಸುಳ್ಳುಗಳ ವಿರುದ್ಧ ಒಗ್ಗಟ್ಟಾಗಿ ಹೋರಾಡಬೇಕು ಎಂದು ಬಿಜೆಪಿ ಕರೆ ನೀಡಿದೆ.