ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್ ಪಕ್ಷವು ಗಾಂಧಿಯೇತರ ನಾಯಕರನ್ನು ಹೀನಾಯವಾಗಿ ನಡೆಸಿಕೊಳ್ಳುತ್ತದೆ ಎಂಬುದನ್ನು ಪ್ರಣಬ್ ಮುಖರ್ಜಿ ಅವರ ಪುತ್ರಿ ಹೇಳಿಕೆ ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಬಿಜೆಪಿ ವಾಗ್ದಾಳಿ ಮಾಡಿದೆ.
ಕಾಂಗ್ರೆಸ್ ನಾಯಕ ಹಾಗೂ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ನಿಧನರಾದಾಗ ಕಾಂಗ್ರೆಸ್ ಸಿಡಬ್ಲ್ಯೂಸಿ ಸಭೆ ಕರೆದು, ಸಂತಾಪ ಸೂಚಕ ಸಭೆಯನ್ನು ನಡೆಸುವ ಔದಾರ್ಯವನ್ನೂ ತೋರಲಿಲ್ಲ ಎಂದಿದ್ದಾರೆ.
ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಂದ ಹಿಡಿದು ಪ್ರಣಬ್ ಮುಖರ್ಜಿ ತನಕ ಗಾಂಧಿಯೇತರ ನಾಯಕರನ್ನು ಕಾಂಗ್ರೆಸ್ ಅವಮಾನಿಸಿದೆ. ದೇಶವನ್ನು ಒಗ್ಗೂಡಿಸಿದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಪ್ರಧಾನಿ ಹುದ್ದೆಗೆ ಸಮರ್ಥರಾಗಿದ್ದರೂ ಪ್ರಧಾನಿಯನ್ನಾಗಿ ಮಾಡಲಿಲ್ಲ.
ಅವರನ್ನು ಇತಿಹಾಸದ ಪುಟಗಳಲ್ಲಿ ಸ್ಮರಿಸುವ ಕೆಲಸವನ್ನೂ ಮಾಡಲಿಲ್ಲ. ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಹೀನಾಯವಾಗಿ ಸೋಲಿಸಿತು. ಮರಣದ ನಂತರ ದೆಹಲಿಯಲ್ಲಿ ಅಂತ್ಯ ಸಂಸ್ಕಾರಕ್ಕೂ ಭೂಮಿ ನೀಡಲಿಲ್ಲ.
ಮಾಜಿ ಪ್ರಧಾನಿ ಪಿ.ವಿ. ನರಸಿಂಹರಾವ್ ಅವರ ಪಾರ್ಥಿವ ಶರೀರವನ್ನು ದೆಹಲಿಯ ಕಾಂಗ್ರೆಸ್ ಕಛೇರಿಯ ಒಳಗೂ ಬಿಡಲಿಲ್ಲ. ಗೇಟಿನ ಹೊರಭಾಗದಲ್ಲಿ ಪಾರ್ಥಿವ ಶರೀರವನ್ನು ಇಟ್ಟು ಅಂತಿಮ ನಮನ ಸಲ್ಲಿಸುವ ಹಾಗೆ ಮಾಡಲಾಯಿತು ಎಂದು ಬಿಜೆಪಿ ವಾಗ್ದಾಳಿ ಮಾಡಿದೆ.
ಆದರೆ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಿದ್ಧಾಂತವನ್ನು ಅನುಷ್ಠಾನಕ್ಕೆ ತಂದಿದ್ದು ಬಿಜೆಪಿ. ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ಪಂಚ ತೀರ್ಥಕ್ಷೇತ್ರವನ್ನು ಮೋದಿ ಸರ್ಕಾರ ಅಭಿವೃದ್ಧಿ ಪಡಿಸಿತು. ಉಕ್ಕಿನ ಮನುಷ್ಯ ಸರ್ದಾರ್ ಪಟೇಲ್ ಅವರ ಅತ್ಯಂತ ಎತ್ತರದ ಏಕತಾ ಪ್ರತಿಮೆ ಸ್ಥಾಪಿಸಿ ಗೌರವಿಸಿತು. ದೆಹಲಿಯಲ್ಲಿ ಪಿ. ವಿ. ನರಸಿಂಹ ರಾವ್ ಅವರ ಸ್ಮಾರಕ ನಿರ್ಮಾಣ ಮಾಡಲು ಮೋದಿಯವರ ಸರ್ಕಾರವೇ ಬರಬೇಕಾಯಿತು ಎಂದು ಬಿಜೆಪಿ ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವು ಅತ್ಯಂತ ಗೌರವದ ವಿದಾಯವನ್ನು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ನೀಡಿದೆ. ಪ್ರಧಾನಿ ಸಹಿತ ಸಂಪುಟದ ಸಚಿವರು ಖುದ್ದಾಗಿ ಉಪಸ್ಥಿತರಿದ್ದು ಗೌರವವನ್ನು ಕೇಂದ್ರ ಸರ್ಕಾರ ನೀಡಿದೆ. ಪಕ್ಷ ಯಾವುದೇ ಇರಲಿ, ಮರಣಾಂತಾನಿ ವೈರಾಣಿ.. ಮರಣದ ನಂತರ ದ್ವೇಷ ಸಲ್ಲ ಎಂಬುದನ್ನು ಮೋದಿ ಸರ್ಕಾರ ಮತ್ತೊಮ್ಮೆ ನಿರೂಪಿಸಿದೆ ಎಂದು ಬಿಜೆಪಿ ಹೇಳಿದೆ.