ನಶಿಸುತ್ತಿರುವ ಔಷಧಿ ಸಸ್ಯಗಳ ಸಂರಕ್ಷಣೆ ಎಲ್ಲರ ಹೊಣೆ- ಡಾ.ಚಂದ್ರಕಾಂತ್

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಭಾರತೀಯ ಸಸ್ಯಗಳಲ್ಲಿ ಆರನೇ ಒಂದು ಭಾಗವು ಔಷಧೀಯ ಗುಣಗಳನ್ನು ಹೊಂದಿದೆ. ಆದರೆ ಅವುಗಳ ಅಳಿವಿನ ಅಪಾಯವು ದೊಡ್ಡದಾಗಿದೆ. ಔಷಧೀಯ ಸಸ್ಯಗಳ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ್ ಎಸ್ ನಾಗಸಮುದ್ರ ಅಭಿಪ್ರಾಯ ಪಟ್ಟರು.

ನಗರದ ಕೆಳಗೋಟೆಯ ಈಶ್ವರೀಯ ವಿಶ್ವವಿದ್ಯಾಲಯದ ಸಭಾ ಭವನದಲ್ಲಿ 9ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಅಂಗವಾಗಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆಯುಷ್ ಇಲಾಖೆ ವತಿಯಿಂದ ಕಾರ್ಯಕ್ರಮ ಉದ್ಘಾಟಿಸಿ  ಜಾಗತಿಕ ಆರೋಗ್ಯಕ್ಕಾಗಿ ಆಯುರ್ವೇದದ ಆವಿಷ್ಕಾರಗಳು ಮತ್ತು ಪರಿಸರ ರಕ್ಷಣೆ ಸಸ್ಯ ಹಾಗೂ ಪ್ರಾಣಿಗಳ ಸಂರಕ್ಷಣೆಯಲ್ಲಿ ಆಯುರ್ವೇದದ ಪಾತ್ರಎಂಬ ವಿಷಯ ಕುರಿತು ಅವರು ಮಾತನಾಡಿದರು.

ಅಮೃತ ಆಯುರ್ವೇದ ಕಾಲೇಜಿನ ಡಾ.ವೀರೇಶ್ ಆಯುರ್ವೇದ ಮತ್ತು ಪರಿಸರದ ಸಂಬಂಧ ಕುರಿತು ಮಾತನಾಡಿ, ಆಯುರ್ವೇದ ಮತ್ತು ಪರಿಸರ ಸಸ್ಯಸಂಕುಲ ಪ್ರಾಣಿಗಳ ಜೊತೆಗೆ ನೇರವಾದ ಸಂಬಂಧ ಹೊಂದಿವೆ. ಆದ್ದರಿಂದ ಆಯುರ್ವೇದ ಮತ್ತು ಪರಿಸರದ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಪರಿಸರ ಸಂರಕ್ಷಣೆಯಲ್ಲಿ ಆಯುರ್ವೇದವು ಪ್ರಮುಖ ಪಾತ್ರ ವಹಿಸುತ್ತದೆ.

ಏಕೆಂದರೆ ರಾಸಾಯನಿಕ ರಹಿತ ಬೆಳೆ ಬೆಳೆಯುವ ಸಸ್ಯಗಳನ್ನು ಫೋಷಿಸಿ ಸಸ್ಯಗಳ ರೋಗಗಳನ್ನು ಗುಣಪಡಿಸಿ ಸಂರಕ್ಷಣೆ ಮಾಡುವ ವಿಧಾನ ತಿಳಿಸುವ ಆಯುರ್ವೇದ ಪದ್ಧತಿಯ ಮಣ್ಣನ್ನು ಸಂರಕ್ಷಿಸಿ ಭೂಮಿಯ ಫಲವತ್ತತೆ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.

ಆಯುರ್ವೇದ ಪದ್ಧತಿಯ ಬಗ್ಗೆ ರೈತರಗೆ, ಸಾರ್ವಜನಿಕರಿಗೆ ಆಯುರ್ವೇದ ಪದ್ದತಿಯ ಬಗ್ಗೆ ತಿಳಿಯಪಡಿಸಿ ಔಷಧೀಯ ಸಸ್ಯಗಳ ರಕ್ಷಣೆ ಅದರಲ್ಲೂ ಔಷಧೀಯ ಗುಣಗಳನ್ನು ಹೊಂದಿರುವ ಸಸ್ಯಗಳ ಸಂರಕ್ಷಣೆ ಮಾಡಬೇಕಾಗಿದೆ. ನಿಟ್ಟಿನಲ್ಲಿ ಚಿತ್ರದುರ್ಗ ಜಿಲ್ಲಾ ಆಯುಷ್ ಇಲಾಖೆಯು ಹಮ್ಮಿಕೊಂಡಿರುವ ಕಾರ್ಯಕ್ರಮಗಳು ಉಪಯುಕ್ತ ಹಾಗೂ ಶ್ಲಾಘನೀಯ ಎಂದರು.

ಜೆ.ಎನ್.ಕೋಟೆ ಆಯುಷ್ ಚಿಕಿತ್ಸಾಲಯದ ಆಡಳಿತ ವೈದ್ಯಾಧಿಕಾರಿ ಡಾ. ಪಿ.ವಿಜಯಲಕ್ಷ್ಮೀ, ‘ಮಹಿಳಾ ಸಬಲೀಕರಣಕ್ಕಾಗಿ ಆಯುರ್ವೇದಎಂಬ ವಿಷಯ ಕುರಿತು ಮಾತನಾಡಿ, ಮಹಿಳೆಯರ ಸಮಸ್ಯಗಳಾದ ಪಿಸಿಓಎಸ್, ಪಿಸಿಒಡಿ, ಒತ್ತಡ ನಿರ್ವಹಣೆ, ಮತ್ತು ಆಯುರ್ವೇದದ ಆಧಾರದಲ್ಲಿ ಮಹಿಳೆಯರ ಆರೋಗ್ಯದ ಸುಧಾರಣೆಗಾಗಿ ಹೆಚ್ಚಿನದಾಗಿ ಕೇಂದ್ರೀಕರಿಸಲು ಮಹಿಳೆಯರ ಆರೋಗ್ಯ ಸಮಸ್ಯಗಳ ಮೇಲೆ ಹೆಚ್ಚು ಪರಿಣಾಮ ಬೀರುವ ಔಷಧೀಯ ಗುಣಗಳನ್ನು ಹೊಂದಿದ ಸಸ್ಯಗಳ ಸಂರಕ್ಷಣೆಯನ್ನು ಚಿತ್ರದುರ್ಗ ಜಿಲ್ಲಾ ಆಯುಷ್ ಇಲಾಖೆಯು ಬೆಂಬಲಿಸುತ್ತಾ ಬಂದಿದೆ.

ಆಯುರ್ವೇದ ಆಧಾರಿತ ಸಂಶೋಧನೆಯ ಮೂಲಕ ಮಹಿಳಾ ಸಬಲೀಕರಣವನ್ನು ಆಯುಷ್ ಇಲಾಖೆ ಉತ್ತೇಜಿಸುತ್ತದೆ. ಮಹಿಳೆಯರು ತಮ್ಮ ಸಮಸ್ಯೆಗಳ ಬಗ್ಗೆ ಹತ್ತಿರದ ಆಯುಷ್ ಇಲಾಖೆಯ ಚಿಕಿತ್ಸಾಲಯಗಳಿಗೆ ಭೇಟಿ ನೀಡಿ ಆಯುಷ್ ವೈದ್ಯರಲ್ಲಿ ಮುಕ್ತವಾಗಿ ಚರ್ಚಿಸಿ ಸಮಸ್ಯಗಳಿಗೆ ಪರಿಹಾರ ಪಡೆಯಬಹುದಾಗಿದೆ ಎಂದು ತಿಳಿಸಿದರು.

ಹಿರಿಯೂರು ತಾಲ್ಲೂಕಿನ ಸೊಂಡೆಕೊಳ ಆಯುಷ್ ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ.ನಾಗರಾಜ್ ನಾಯಕ್ ಮಾತನಾಡಿ, ಔಷಧಿ ಸಸ್ಯಗಳ ಮಹತ್ವ ಹಾಗೂ ಆಯುರ್ವೇದ ಪದ್ಧತಿಗೆ ಅವುಗಳ ಉಪಯೋಗವನ್ನು ಸಾರ್ವಜನಿಕರಿಗೆ ತಿಳಿಸಿದರು.

ಆಯುರ್ವೇದ ಪದ್ಧತಿಯು ರೋಗಿಗಳಿಗೆ ತಲುಪಬೇಕಾದರೆ ಔಷಧಿ ಸಸ್ಯಗಳು ಬಹಳ ಮುಖ್ಯ. ಹೇಗೆ ನಾವು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುತ್ತೇವೆ ಅದೇ ರೀತಿ ಸಸ್ಯಗಳ ಆರೋಗ್ಯವನ್ನು ಸಹ ನಾವು ಕಾಪಾಡಬೇಕಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಬ್ರಹ್ಮಕುಮಾರಿ ರೋಹಿಣಿ, ರಶ್ಮಿ, ಅಮೃತ ಆಯುರ್ವೇದ ಕಾಲೇಜಿನ ಡಾ. ವೀರೇಶ್, ಆಯುಷ್ ಇಲಾಖೆಯ ಯೋಗ ತರಬೇತುದಾರ ರವಿ ಕೆ.ಅಂಬೇಕರ್ ಇನ್ನಿತರರು ಉಪಸ್ಥಿತರಿದ್ದರು.

 

 

- Advertisement -  - Advertisement -  - Advertisement - 
Share This Article
error: Content is protected !!
";